ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಸುಂಡಹಳ್ಳಿ ಸಿದ್ದಯ್ಯನಕೊಪ್ಪಲು ಗೇಟ್ ಬಳಿಯ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ನಡೆದ ಕಾವೇರಿ ಕಲಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿನಿಮಾ ಕ್ಷೇತ್ರದಲ್ಲಿ ಕನ್ನಡದ ಕಲಾವಿದರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿಲ್ಲ. ಕನ್ನಡದ ನಟನನ್ನು ಚಿತ್ರತಂಡ ಆಯ್ಕೆ ಮಾಡಿದರೆ, ನಟಿಯನ್ನು ಹೊರ ರಾಜ್ಯದಿಂದ ಕರೆಸಲಾಗುತ್ತದೆ. ಅಷ್ಟೇ ಅಲ್ಲ, ಪೋಷಕ ನಟರನ್ನೂ ಹೊರಗಿನಿಂದ ಕರೆತರುವುದು ಸಾಮಾನ್ಯವಾಗಿದೆ. ಜೊತೆಗೆ ತಾಂತ್ರಿಕ ತಜ್ಞರು, ಮೇಕಪ್ ಆರ್ಟಿಸ್ಟ್ ಸೇರಿ ಅಗತ್ಯವಿರುವ ಎಲ್ಲರನ್ನೂ ತಂದು ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಕೇಳಿದರೆ ಪ್ಯಾನ್ ಇಂಡಿಯಾ ಎಂದು ಹೇಳುತ್ತಾರೆ. ಇದು ಕನ್ನಡದ ಕಲಾವಿದರಿಗೆ ಮಾಡುವ ಅಪಮಾನ ಎಂದು ನೊಂದು ನುಡಿದರು.ಮಂಡ್ಯದಲ್ಲಿ ರಾಜಕೀಯ ನಡೆದರೆ ಇಂಡಿಯಾದಲ್ಲೇ ನಡೆದಂತೆ. ಅದೇ ರೀತಿ ಮಂಡ್ಯದಲ್ಲಿ ಸಿನಿಮಾ ಗೆದ್ದರೆ ಇಂಡಿಯಾದಲ್ಲೇ ಗೆದ್ದಂತೆ ಎಂಬಂತೆ ಕಲಾವಿದರನ್ನು ಪ್ರೋತ್ಸಾಹಿಸುವ ಈ ಜಿಲ್ಲೆಯಲ್ಲಿ ಕನ್ನಡ ಸಿನಿಮಾಗಳನ್ನು ಬೆಳೆಸಬೇಕು. ಆ ಮೂಲಕ ಕಲಾವಿದರನ್ನು ಉಳಿಸಬೇಕು ಎಂದು ತಿಳಿಸಿದರು.
ಇಂತಹ ಬೆಳವಣಿಗೆಯನ್ನು ಗಮನಿಸಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೊಸ ಕಲಾವಿದರಿಗೆ ಒಂದಷ್ಟು ವೇದಿಕೆ ಒದಗಿಸುವ ಮೂಲಕ ಪರಿಚಯ ಮಾಡಿಕೊಟ್ಟು, ನನ್ನಂತಹ ಅದೆಷ್ಟೋ ಕಲಾವಿದರಿಗೆ ಅದೃಷ್ಟ ದೇವತೆಯಾಗಿ ಕಂಗೊಳಿಸುತ್ತಿದ್ದಾರೆ. ಆದರೂ ಕನ್ನಡ ನಾಡಿನ ಜನತೆ ಚಿತ್ರಮಂದಿರಗಳಲ್ಲೇ ಚಿತ್ರವನ್ನು ವೀಕ್ಷಿಸುವುದರೊಂದಿಗೆ ಹೊಸ ಕಲಾವಿದರನ್ನೂ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.
ಚಿತ್ರನಟ ಆದಿ ಲೋಕೇಶ್ ಮಾತನಾಡಿ, ಕನ್ನಡ ಚಿತ್ರವನ್ನು ನೋಡುವ ಮೂಲಕ ಅವುಗಳನ್ನು ಬೆಳೆಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಒಂದು ಚಿತ್ರ ಉನ್ನತ ಮಟ್ಟದ ಯಶಸ್ಸು ಕಂಡಲ್ಲಿ ಅದರ ಹಿಂದೆ ಕೆಲಸ ಮಾಡಿದ ಅದೆಷ್ಟೋ ಜನರ ಪರಿಶ್ರಮಕ್ಕೂ ಅರ್ಥ ಬರುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು.