ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಿರ್ಗಿಸ್ತಾನ್‌ ಗಣರಾಜ್ಯದ ಆರ್ಥಿಕ ಮತ್ತು ವಾಣಿಜ್ಯ ಸಚಿವ ಬಕಿತ್ ಸಿಡಿಕೋವ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೈಗಾರಿಕೋತ್ಪಾದನೆ ವಲಯದಲ್ಲಿ ಪರಸ್ಪರ ಸಹಕಾರ ಹೊಂದುವ ನಿಟ್ಟಿನಲ್ಲಿ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಿರ್ಗಿಸ್ತಾನ್‌ ಗಣರಾಜ್ಯದ ಆರ್ಥಿಕ ಮತ್ತು ವಾಣಿಜ್ಯ ಸಚಿವ ಬಕಿತ್ ಸಿಡಿಕೋವ್‌ ನಡುವೆ ಕಿರ್ಗಿಸ್ತಾನ್‌ ಗಣ್ಯರಾಜ್ಯದ ರಾಜಧಾನಿ ಬಿಷ್ಕೇಕ್‌ನಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಿತು.

ಭಾರತ ಮತ್ತು ಕಿರ್ಗೊಸ್ತಾನ್‌ ನಡುವೆ ಕೈಗಾರಿಕಾ ಸಂಬಂಧಗಳನ್ನು ಮತ್ತಷ್ಟು ದೃಢಗೊಳಿಸುವ ನಿಟ್ಟಿನಲ್ಲಿ ಇಬ್ಬರೂ ಸಚಿವರ ನಡುವೆ ಚರ್ಚೆ ನಡೆಯಿತಲ್ಲದೆ, ಉಭಯ ದೇಶಗಳ ನಡುವೆ ಆರ್ಥಿಕ ತೊಡಗಿಸಿಕೊಳ್ಳುವಿಕೆ, ಕೈಗಾರಿಕಾ ಸಹಕಾರ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ಗಾಢಗೊಳಿಸುವ ಮಾರ್ಗಗಳ ಬಗ್ಗೆ ಸಚಿವದ್ವಯರು ಚರ್ಚಿಸಿದರು.

ಭಾರತ-ಕಿರ್ಗಿಸ್ತಾನ್‌ ಸಂಬಂಧ ಗಟ್ಟಿ:ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ಕೈಗಾರಿಕಾ ಸಚಿವರ 4ನೇ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಈ ಸಭೆಯು ಭಾರತ-ಕಿರ್ಗಿಸ್ತಾನ್ ಸಂಬಂಧಗಳಲ್ಲಿ ಆಗುತ್ತಿರುವ ಮುನ್ನಡೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ಮಧ್ಯ ಏಷ್ಯಾ ಭಾಗದಲ್ಲಿ ತನ್ನ ಆರ್ಥಿಕ ಹೆಜ್ಜೆಗುರುತನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಕಿರ್ಗೀಜ್‌ ಸಚಿವರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದರು.

ಉನ್ನತ ನಿಯೋಗವನ್ನು ಒಳಗೊಂಡ ಈ ಸಭೆಯಲ್ಲಿ ಸಚಿವ ಕುಮಾರಸ್ವಾಮಿ ಅವರೊಂದಿಗೆ ಕಿರ್ಗಿಸ್ತಾನ್ ಗಣರಾಜ್ಯದ ಭಾರತದ ರಾಯಭಾರಿ ಬೀರೇಂದರ್ ಸಿಂಗ್ ಯಾದವ್ ಅವರು ಕೂಡ ಭಾಗಿಯಾಗಿದ್ದರು.