ಕನ್ನಡಪ್ರಭ ವಾರ್ತೆ ಬೆಂಗಳೂರು:

ಪಿಎಂ ಇ-ಡ್ರೈವ್‌ ಯೋಜನೆಯಡಿ ಕರ್ನಾಟಕಕ್ಕೆ ₹123.26 ಕೋಟಿ ವೆಚ್ಚದ 1,243 ಹೊಸ ಇವಿ ಚಾರ್ಜಿಂಗ್‌ ಕೇಂದ್ರಗಳಿಗೆ ಅನುಮೋದನೆ ನೀಡಿರುವುದಾಗಿ ಕೇಂದ್ರ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಪಿಎಂ ಇ-ಡ್ರೈವ್ ಯೋಜನೆಯಡಿ ರಾಷ್ಟ್ರವ್ಯಾಪಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಸಕ್ರಿಯಗೊಳಿಸುವ ಕುರಿತ ಸಮ್ಮೇಳನದಲ್ಲಿ ಮಾತನಾಡಿ, ಈ ಯೋಜನೆ ಮೂಲಕ ರಾಜ್ಯದ ಇವಿ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.

ವಿವಿಧ ರಾಜ್ಯಗಳು ಮತ್ತು ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 4,874 ಇವಿ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಈವರೆಗೆ ₹503.86 ಕೋಟಿ ಮೌಲ್ಯದ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ. ಇದರಲ್ಲಿ ಎಚ್‌ಪಿಸಿಎಲ್‌, ಐಒಸಿಎಲ್‌, ಬಿಪಿಸಿಎಲ್‌ನಂಥ ಪ್ರಮುಖ ಕೈಗಾರಿಕಾ ಸಂಸ್ಥೆಗಳು, ರಾಜಸ್ಥಾನ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೂ ಸೇರಿವೆ ಎಂದು ಎಚ್‌ಡಿಕೆ ತಿಳಿಸಿದರು.

ದೇಶವು ಹಸಿರು ಸಾರಿಗೆಯಲ್ಲಿ ಬೃಹತ್‌ ಮೈಲುಗಲ್ಲುಗಳನ್ನು ಸಾಧಿಸುತ್ತಿದ್ದು, 2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿ ಸಾಧಿಸಬೇಕಿದೆ. ಬೆಂಗಳೂರು ಈಗಾಗಲೇ ದೇಶದ ಪ್ರಮುಖ ಇವಿ ಚಾರ್ಜಿಂಗ್‌ ಹಬ್‌ ಆಗಿ ಹೊರಹೊಮ್ಮಿದೆ. ಉಳಿದ ರಾಜ್ಯಗಳು ಕೂಡ ಈ ಪರಿವರ್ತನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.


ದೇಶದ ವಾಹನೋದ್ಯಮ ವಲಯವು ದೇಶದ ಜಿಡಿಪಿಗೆ ಶೇ.7ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. ಇದು ಉತ್ಪಾದನಾ ಜಿಡಿಪಿಯ ಸುಮಾರು ಅರ್ಧದಷ್ಟಿದ್ದು, 30 ದಶಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸುತ್ತಿದೆ, ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಇದು ಗುರುತರ ಸಾಧನೆ ಎಂದರು.

ಬೃಹತ್‌ ಕೈಗಾರಿಕೆ ಸಚಿವಾಲಯದಿಂದ ಬ್ಯಾಟರಿ ಸೆಲ್ ಉತ್ಪಾದನೆಗೆ ₹18,100 ಕೋಟಿ ಪಿಎಲ್‌ಐ ಎಸಿಸಿ ಯೋಜನೆ, ಇವಿ ಮತ್ತು ಹೈಡ್ರೋಜನ್ ಚಾಲಿತ ವಾಹನಗಳನ್ನು ಉತ್ತೇಜಿಸುವ ₹25,938 ಕೋಟಿ ಮೊತ್ತದ ಪಿಎಲ್‌ಐ ಆಟೋ ಯೋಜನೆ ಮತ್ತು ಅಪರೂಪದ ಅರ್ಥ್‌ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ₹7,280 ಕೋಟಿ ವೆಚ್ಚದ ಆರ್‌ಇಪಿಎಂ ಯೋಜನೆ ಆರಂಭಿಸಲಾಗಿದೆ. ಭವಿಷ್ಯದ ವಾಹನೋದ್ಯಮ ತಂತ್ರಜ್ಞಾನದಲ್ಲಿ ಈ ಯೋಜನೆಗಳು ಭಾರತವನ್ನು ವಿಶ್ವದರ್ಜೆ ಸ್ಥಾನಕ್ಕೆ ಏರಿಸಲಿವೆ ಎಂದು ಕುಮಾರಸ್ವಾಮಿ ಹೇಳಿದರು.

ನೂತನ ಅಪ್ಲಿಕೇಶನ್‌:

ಸಚಿವಾಲಯದಿಂದ ರಾಷ್ಟ್ರೀಯ ಏಕೀಕೃತ ಇವಿ ಚಾರ್ಜಿಂಗ್ ಅಪ್ಲಿಕೇಶನ್-ಯೂನಿಫೈಡ್‌ ಭಾರತ್‌ ಇ-ಚಾರ್ಜ್‌ (ಯುಬಿಸಿ) ರೂಪಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಇದು ಇವಿ ಬಳಕೆದಾರರಿಗೆ ಬಹು ಆಪರೇಟರ್‌ಗಳ ಚಾರ್ಜಿಂಗ್‌ ನೆಟ್‌ವರ್ಕ್‌ಗಳನ್ನು ಒಂದೇ ಇಂಟರ್‌ಫೇಸ್‌ ಮೂಲಕ ಬಳಸಲು ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದರು.

ಬೃಹತ್‌ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ। ಹನೀಫ್‌ ಖುರೇಷಿ, ಕರ್ನಾಟಕ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ತೆಲಂಗಾಣದ ವಿಶೇಷ ಮುಖ್ಯ ಕಾರ್ಯದರ್ಶಿ ನವಿನ್‌ ಮಿತ್ತಲ್‌, ಕೇರಳ ಕೆಎಸ್‌ಇಬಿ ಸಿಎಂಡಿ ಮಿನ್ಹಾಜ್‌ ಆಲಂ, ಒಡಿಶಾದ ಹೆಚ್ಚುವರಿ ಸಾರಿಗೆ ಆಯುಕ್ತ ದೀಪ್ತಿ ರಂಜನ್‌ ಪಾತ್ರ ಅವರು ಇವಿ ಕ್ಷೇತ್ರದಲ್ಲಿ ರಾಜ್ಯಗಳ ಸಾಧನೆ ವಿವರ ನೀಡಿದರು.ಮೋದಿ ಹೇಳಿಕೆ ಟೀಕಿಸಿರುವುದು ಸಣ್ಣತನ ಪ್ರದರ್ಶನ:ಮುಂದೆ ದೇಶದ ಆರ್ಥಿಕ ಬೆಳವಣಿಗೆಗೆ ಹಿನ್ನಡೆ ಆಗಬಾರದು ಎಂಬ ದೃಷ್ಟಿಯಲ್ಲಿ ಪ್ರಧಾನಿ ಮೋದಿ ಅವರು ಇಂಧನ ಮಿತ ಬಳಕೆ ಕುರಿತು ಹೇಳಿಕೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್‌ ನಾಯಕರು ಟೀಕೆ ಮಾಡಿ ಸಣ್ಣತನ ಪ್ರದರ್ಶಿಸುತ್ತಿದ್ದಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರೇ ಆ ಜಾಗದಲ್ಲಿದ್ದಿದ್ದರೆ ಏನು ಮಾಡುತ್ತಿದ್ದರು? ಹೇಗೆ ಸಮಸ್ಯೆ ಬಗೆಹರಿಸುತ್ತಿದ್ದರು? ಈಗ ಟೀಕೆ ಮಾಡಿ ಸಣ್ಣತನ ಪ್ರದರ್ಶನ ಮಾಡುತ್ತಿದ್ದಾರೆ. ಭಾರತ ತೈಲ ಉತ್ಪಾದನೆ ಮಾಡುವುದಿಲ್ಲ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕು. ದೇಶದ ಹಿತದೃಷ್ಟಿಯಿಂದ ಮುಂದೆ ಆಗಬಹುದಾದ ಅನಾಹುತಗಳಿಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ ಎಂದು ಸಮರ್ಥಿಸಿದರು.

ಮೋದಿ ಮನವಿಯನ್ನು ನಾವೊಬ್ಬರೇ ಪಾಲನೆ ಮಾಡಲ್ಲ, ದೇಶದ ಹಿತದೃಷ್ಟಿ ಪ್ರಶ್ನೆ ಎದುರಾದಾಗ ಎಲ್ಲಾ ಪಕ್ಷಗಳು, ಎಲ್ಲರ ಜವಾಬ್ದಾರಿಯೂ ಇದೆ. ಸಣ್ಣತನಬಿಟ್ಟು ತನ್ನ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿಭಾಯಿಸಲಿ ಎಂದರು.

ಕಾಂಗ್ರೆಸ್‌ ಕಾಲದಲ್ಲಿ ಮರುಪರೀಕ್ಷೆ ಆಗಿಲ್ವಾ?:ನೀಟ್ ಮರು ಪರೀಕ್ಷೆ ನಿರ್ಧಾರ ಕುರಿತು ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ನಮ್ಮ ರಾಜ್ಯದಲ್ಲಿ ಎಷ್ಟು ಬಾರಿ ಪರೀಕ್ಷೆ ಮುಂದಕ್ಕೆ ಹಾಕಿಲ್ಲ? ಕಾಂಗ್ರೆಸ್ ಕಾಲದಲ್ಲಿ ಎಷ್ಟು ಅನಾಹುತ ಆಗಿಲ್ಲ? ರಾಜಸ್ಥಾನದಲ್ಲಿ ಪೇಪರ್ ಲೀಕ್ ಆಗಿತ್ತು. ಯಾರೋ ಮಾಡಿದ ತಪ್ಪಿಗೆ ಕೇಂದ್ರ ಸರ್ಕಾರದ ಮೇಲೆ ತಪ್ಪು ಹೊರೆಸಲು ಆಗದು. ನಮ್ಮ ರಾಜ್ಯದಲ್ಲಿ ಅನೇಕ ಬಾರಿ ಇಂತಹ ಸಂದರ್ಭ ಕಾಂಗ್ರೆಸ್‌ ಕಾಲದಲ್ಲೂ ಅಗಿದೆ. ಈ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್‌ನವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.