ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಹಳಿಯಾಳತಾಲೂಕಿನಲ್ಲಿ ಆರಂಭಗೊಂಡಿರುವ ದೊಡ್ಡ ಅನುದಾನಗಳ ಯೋಜನೆಗಳು ನಿಧಾನವಾಗಿ ನಡೆಯುತ್ತಿವೆ. ಕಾಮಗಾರಿಗಳೆಲ್ಲ ಕಳಪೆಯಾಗಿವೆ ಎಂದು ಗೊತ್ತಿದ್ದರೂ ಶಾಸಕರು ಒಮ್ಮೆಯೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಯೋಜನೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಅದನ್ನು ಬಿಟ್ಟು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಮೇಲೆ ಮನಬಂದಂತೆ ಹರಿಹಾಯ್ದು ರೇಗಾಡಿ ಸಭೆಯ ದಿಕ್ಕನ್ನೇ ತಪ್ಪಿಸುವ ತಂತ್ರ ನಡೆಸುತ್ತಿರುವುದು ಅನುಭವಿಗಳು ಹಾಗೂ ಹಿರಿಯರಾದ ನಿಮಗಾದರೂ ಸರಿ ಕಾಣುತ್ತಿದೆಯೇ ಎಂದು ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಗೇಂದ್ರ ಜಿವೋಜಿ ಪ್ರಶ್ನಿಸಿದ್ದಾರೆ. ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಪಯೋಗಿ ಹಾಗೂ ಕೃಷಿ ಮತ್ತು ರೈತರ ಪರವಾದ ಯೋಜನೆಗಳು ವಿಳಂಬವಾಗುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸಭೆ-ಸಮಾರಂಭಗಳಲ್ಲಿ ಮಾತು ಮಾತಿಗೆ ಹಳಿಯಾಳ ಕ್ಷೇತ್ರದ ಮತದಾರರ ಋಣ ತೀರಿಸಲು ಅಸಾಧ್ಯವೆಂದು ಹೇಳುವ ಶಾಸಕರು ಈ ಬೃಹತ್ ನಾಲ್ಕು ಯೋಜನೆಗಳನ್ನು ಆರಂಭಿಸುವ ಮೂಲಕ ಋಣಮುಕ್ತರಾಗಲಿ ಎಂದು ಸವಾಲೆಸೆದರು.ಕಾಳಿನದಿ ನೀರಾವರಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಪಟ್ಟಣಕ್ಕೆ ನೀರು ಪೂರೈಸುವ ಅಮೃತ 2.0 ನಿರಂತರ ನೀರು ಯೋಜನೆ ಮತ್ತು ಒಳಚರಂಡಿ ಯೋಜನೆಗಳು ಕಾರ್ಯಾರಂಭಿಸುವುದು ಯಾವಾಗ? ಈ ಯೋಜನೆಗಳ ಬಗ್ಗೆ ತಾಲೂಕಾಡಳಿತವಾಗಲಿ, ಜಿಲ್ಲಾಡಳಿತವಾಗಲಿ ಮಾಹಿತಿ ನೀಡದೇ ಇರುವುದರಿಂದ ಶಾಸಕ ಆರ್.ವಿ.ದೇಶಪಾಂಡೆಯವರು ಸಭೆಯನ್ನು ಕರೆದು ಮಾಹಿತಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಮಾರ್ಚ್ ತಿಂಗಳಲ್ಲಿ ನಮ್ಮ ಸಮಿತಿಯವರು ಹಾಗೂ ಕಬ್ಬು ಬೆಳೆಗಾರರ ಸಂಘದವರು ಜಂಟಿಯಾಗಿ ಸೇರಿ ತಾಲೂಕಿನಲ್ಲಿ ಈ ಮಹತ್ವದ ಯೋಜನೆಗಳ ಕುರಿತು ಪಾದಯಾತ್ರೆ ಮೂಲಕ ಜನಜಾಗೃತೆ ನಡೆಸಿದ್ದೆವು. ಅದಲ್ಲದೇ ಮಾ. 16ರಂದು ಹಳಿಯಾಳ ಬಂದ್ ಮಾಡಿಸಿ ಪ್ರತಿಭಟನೆ ಮಾಡಿದ್ದೆವು. ಅಂದಿನ ಪ್ರತಿಭಟನಾ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಬಂದು ಯೋಜನೆಗಳು ಕಾರ್ಯಾರಂಭಿಸುವ ವಾಗ್ದಾಣ ನೀಡಿದ್ದರಿಂದ ಅವರನ್ನು ನಂಬಿಕೊಂಡು ಪ್ರತಿಭಟನೆ ಹಿಂಪಡೆಯಲಾಯಿತು. ಆದರೆ ಪ್ರತಿಭಟನೆ ನಡೆದು 2 ತಿಂಗಳಾಗುತ್ತಾ ಬಂದರೂ ಅಧಿಕಾರಿಗಳು ಬಹಿರಂಗವಾಗಿ ನೀಡಿದ ವಾಗ್ದಾನದಂತೆ ಯೋಜನೆಗಳು ಆರಂಭವಾಗಲಿಲ್ಲ. ಜನಪರ ಯೋಜನೆಗಳು ಹೀಗೆ ವಿಳಂಬವಾಗುತ್ತಿದ್ದರೇ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಕಾಳಿನದಿ ನೀರಾವರಿ ಯೋಜನೆಯ ಪ್ರಾಯೋಗಿಕವಾಗಿ ಪರಿಶೀಲನೆ ನಡೆಸುವಾಗ ಪೈಪುಗಳು ಒಡೆದು ಹೋಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಯಿತಲ್ಲದೇ, ಇವರ ಮಾಡಿದ ಹಲ್ಕಾ ಕಳಪೆ ಕಾಮಗಾರಿಯ ಬಣ್ಣ ಬಯಲಾಯಿತು. ಇನ್ನೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಥೆಯೂ ಅದೇ ಆಗಿದೆ. ಯಾವ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭಿಸಲಾಗಿದೆಯೋ ಅಲ್ಲಿನ ಪೈಪುಗಳು ಒಡೆದು ನೀರು ಪೋಲಾಗಲಾರಂಭಿಸಿದೆ. ಇದರರ್ಥ ಯಾವುದೇ ಗುಣಮಟ್ಟ ಕಾಮಗಾರಿಗಳು ಆಗಲಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಪ್ರಮುಖರಾದ ಸಾತೇರಿ ಗೋಡೆಮನಿ, ರಾಮದಾಸ ಬೆಳಗಾಂವಕರ, ನಕುಲ ಕೆಂಚಣ್ಣನವರ, ಬಳಿರಾಮ ಮೊರೆ, ಚಂದ್ರಕಾಂತ ಲಕ್ಕನಗೌಡರ್, ಮಹೇಶ ಪಾಳೇಕರ ಜೈಪಾಲ ಚತ್ತರಗಿ, ಶಾಂತಾರಾಮ ಸೂರ್ಯವಂಶಿ, ಮಂಜುನಾಥ ಶಿಂದೆ, ಗೋವಿಂದ ಗುಮ್ಮಾಳೆ, ತುಕಾರಾಮ್ ಕೋಲೆಕರ ಹಾಗೂ ಇತರರು ಇದ್ದರು.