ರೋಣ: ಚುನಾವಣೆ ಪೂರ್ವ ಜನರಿಗೆ ಭರವಸೆ ನೀಡಿದಂತೆ ನಡೆದುಕೊಳ್ಳುವಲ್ಲಿ ಜಾರಿಗೆ ತರಲಾದ 5 ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳಿಲ್ಲದೇ, ನಯಾ ಪೈಸೆ ಲಂಚವಿಲ್ಲದೇ ಅತ್ಯಂತ ಪಾರದರ್ಶಕತೆಯಿಂದ ಜನರಿಗೆ ತಲುಪುವ ಮೂಲಕ ಯಶಸ್ವಿಯಾಗಿವೆ ಎಂದು ಕಾನೂನು, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಶನಿವಾರ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ ರೋಣ ಹಾಗೂ ಗಜೇಂದ್ರಗಡ ತಾಲೂಕು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧಪಕ್ಷ ಅನಗತ್ಯ ಟೀಕೆ ಮಾಡುತ್ತಿವೆ. ಯೋಜನೆ ಸಾಕಾರಗೊಂಡಿದೆ ಎಂಬುದನ್ನು ಅರಿಯದೇ ಏನನ್ನೋ ಮಾತಾಡುತ್ತಾರೆ. ಯೋಜನೆ ಬಗ್ಗೆ ತಿಳಿಯಲು ಜನರ ಬಳಿ ವಿರೋಧ ಪಕ್ಷ ಹೋದರೆ ಗೊತ್ತಾದೀತು, ಯೋಜನೆ ಲಾಭ ಪಡೆಯುವಲ್ಲಿ ಯಾರಾದರೂ ನಯಾಪೈಸೆ ಲಂಚ ಕೊಟ್ಟಿದ್ದಾರೆಯೇ? ಎಂಬುದನ್ನು ಬಿಜೆಪಿಯವರು ಕೇಳಿ ನೋಡಲಿ. ಯೋಜನೆಗಳ ಬಗ್ಗೆ ಮಹಿಳೆಯರಲ್ಲಿನ ಔದಾರ್ಯತೆ ನಮಗೆ ಅತ್ಯಂತ ಸಂತಸ ಹಾಗೂ ಶಕ್ತಿ ತುಂಬುತ್ತಿದೆ. ಯೋಜನೆ ಲಾಭ ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿದ್ದಲ್ಲಿ ಗ್ಯಾರಂಟಿ ಕಾರ್ಯಕ್ರಮ ಯಶಸ್ವಿಯಾದಂತಾಗುತ್ತದೆ. ಈ ದಿಶೆಯಲ್ಲಿ ಮಹಿಳೆಯರು ಗಮನ ಹರಿಸಬೇಕು ಎಂದರು.
ತಿಂಗಳಿಗೆ ₹ 350 ಕೋಟಿ ಖರ್ಚು: ಗದಗ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಶೇ. 93 ಜನರನ್ನು ತಲುಪಿದ್ದು, ಇದಕ್ಕಾಗಿ ಪ್ರತಿ ತಿಂಗಳು ರು. 11 ಕೋಟಿ 97 ಲಕ್ಷ ಖರ್ಚಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ 2.20 ಲಕ್ಷ ಮನೆ ಯಜಮಾನಿಗೆ ₹ 44 ಕೋಟಿ, ಗೃಹ ಜ್ಯೋತಿ ₹ 10 ಕೋಟಿ ರು.ಗಳ. ವೆಚ್ಚದಲ್ಲಿ ವಿದ್ಯುತ್ ಪೂರೈಕೆ, ಶಕ್ತಿ ಯೋಜನೆ ಮೂಲಕ 3 ಕೋಟಿ 72 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು,175 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ. ಈ ಐದು ಯೋಜನೆಗಳ ಪೈಕಿ ಜಿಲ್ಲೆಯಲ್ಲಿ ₹ 350 ಕೋಟಿ ಹಣ ಪ್ರತಿ ತಿಂಗಳು ಖರ್ಚಾಗುತ್ತಿದೆ. ಈ ಎಲ್ಲಾ ಯೋಜನೆಗಳು ಅತ್ಯಂತ ಪಾರದರ್ಶಕವಾಗಿವೆ. ಟೀಕೆ ಮಾಡುವ ವಿರೋಧಪಕ್ಷದವರು ಯೋಜನೆ ಯಶಸ್ವಿಯಾಗಿದ್ದನ್ನು ಕಣ್ತೆರೆದು ನೋಡಬೇಕು ಎಂದರು.ಕಾಲಕಾಲೇಶ್ವರದಲ್ಲಿ ರೋಪ್ ವೇ ನಿರ್ಮಾಣ: ಗಜೇಂದ್ರಗಡದಿಂದ ಕಾಲಕಾಲೇಶ್ವರಕ್ಕೆ ತೆರಳಲು ರೋಪ್ ವೇ (ಕೇಬಲ್ ಕಾರು) ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ ಚಿಂತನೆ ನಡೆಸಿದ್ದು, ಡಿಸೆಂಬರ್ ಅಂತ್ಯದೊಳಗೆ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ರೋಪ್ ವೇ ಅತ್ಯಂತ ಆಕರ್ಷಕವಾಗಿ ನಿರ್ಮಿಸಲಾಗುವುದು ಎಂದರು.ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, ಈ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧಿಕಾರಕ್ಕೆ ಬರುವ ಮುಂಚೆ ಕೊಟ್ಟ ಮಾತನ್ನು ಈಡೇರಿಸಿದ ಹೆಮ್ಮೆ ಕಾಂಗ್ರೆಸ್ ನೇತೃತ್ವದ ಸರ್ಕಾರದ್ದಾಗಿದೆ. ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಮನೆ ಬಾಗಿಲಿಗೆ ಯೋಜನೆ ತಲುಪಿಸುವಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಯೋಜನೆ ಸಾಕಾರಕ್ಕೆ ಅಧಿಕಾರಿಗಳ ಶ್ರಮ ಶ್ಲಾಘನೀಯವಾಗಿದೆ. ಇಟಗಿ ಗ್ರಾಮದಲ್ಲಿ ₹120 ಕೋಟಿ ವೆಚ್ಚದಲ್ಲಿ 220/110 ಕೆ.ವಿ. ಸಾಮರ್ಥ್ಯದ ವಿದ್ಯುತ್ ಘಟಕ ಸ್ಥಾಪಿಸಲಾಗುವುದು. ಈ ಮೂಲಕ ವಿದ್ಯುತ್ ಸಮಸ್ಯೆ ನಿವಾರಿಸಲಾಗುವುದು. ಗಜೇಂದ್ರಗಡ ಪಟ್ಟಣದಲ್ಲಿ ₹ 6 ಕೋಟಿ ವೆಚ್ಚದಲ್ಲಿ ಇಂಗು ಕೆರೆ ಬಳಿ ಸಾಲು ಮರದ ತಿಮ್ಮಕ್ಕ ಸಸ್ಯ ಉದ್ಯಾನವನ ನಿರ್ಮಿಸಲಾಗುವದು. ನರೇಗಲ್ಲ, ರೋಣ, ಗಜೇಂದ್ರಗಡ ಪಟ್ಟಣದಲ್ಲಿ ತಲಾ ₹1 ಕೋಟಿ ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಬಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ನೀಲಕಂಠ ಅಸೂಟಿ, ಮಿಥುನ ಪಾಟೀಲ, ಎಚ್.ಎಸ್. ಸೋಂಪುರ, ವೀರಣ್ಣ ಶೆಟ್ಟರ, ಎಸ್ಪಿ ಬಿ.ಎಸ್. ನೇಮಗೌಡ್ರ, ವೆಂಕಟೇಶ ನಾಯಕ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಶಾಂತ ವರಗಪ್ಪನವರ, ಶಶಿಕಾಂತ ಕಟ್ಟಿಮನಿ, ವ್ಹಿ.ಬಿ. ಸೋಮನಕಟ್ಟಿಮಠ, ತಹಸೀಲ್ದಾರ್ ನಾಗರಾಜ. ಕೆ., ರೋಣ ತಾಪಂ ಇಒ ರವಿ ಎ.ಎನ್., ಡಿ. ಮೋಹನ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸ್ವಾಗತಿಸಿದರು.