ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪಂಚ ಗ್ಯಾರಂಟಿಯ ಫಲಗಳು ಎಲ್ಲ ಫಲಾನುಭವಿಗಳಿಗೆ ತಲುಪಬೇಕೆಂಬ ಚಿಂತನೆ ಹಿನ್ನೆಲೆಯಲ್ಲಿ ಈ ಶಿಬಿರ ಸರ್ಕಾರದ ಆದೇಶದಂತೆ ಆಯೋಜಿಸಲಾಗಿದೆ.
ಯಲ್ಲಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಪೂರ್ವ ಘೋಷಿಸಿದಂತೆ ಗ್ರಾಮೀಣ ಪ್ರದೇಶದ ಬಡವರ ಆಸರೆಯಾಗಿರುವ ಪಂಚ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ೨ ವರ್ಷ ಪೂರೈಸಿ ಮುನ್ನಡೆದಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಮಂಗಳವಾರ ತಾಲೂಕಿನ ಮಂಚೀಕೇರಿಯ ರಂಗ ಮಂದಿರದಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉತ್ತರ ಕನ್ನಡ, ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಯಲ್ಲಾಪುರ ಹಮ್ಮಿಕೊಂಡ ಗ್ಯಾರಂಟಿ ಸ್ಪಂದನಾ ಕಾರ್ಯಕ್ರಮ ಪ್ರತಿ ಮನೆಮನೆ ಕಡೆ-ಗ್ಯಾರಂಟಿ ಯೋಜನೆಗಳ ನಡೆ ಎಂಬ ಘೋಷ ವಾಕ್ಯದೊಡನೆ ಹಮ್ಮಿಕೊಂಡಿದ್ದ ಗ್ರಾಮೀಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪಂಚ ಗ್ಯಾರಂಟಿಯ ಫಲಗಳು ಎಲ್ಲ ಫಲಾನುಭವಿಗಳಿಗೆ ತಲುಪಬೇಕೆಂಬ ಚಿಂತನೆ ಹಿನ್ನೆಲೆಯಲ್ಲಿ ಈ ಶಿಬಿರ ಸರ್ಕಾರದ ಆದೇಶದಂತೆ ಆಯೋಜಿಸಲಾಗಿದೆ. ಗ್ಯಾರಂಟಿ ಯೋಜನೆಗಳು ಗ್ರಾಮೀಣ ಪ್ರದೇಶದ ಬಡ ಕುಟುಂಬದವರಿಗೆ ಆಸರೆಯಾಗಿದೆ ಎಂದರು.
ಮುಂಡಗೋಡಿನಲ್ಲಿ ನಿರ್ಮಿಸಲಾದ ಸಾರಿಗೆ ಬಸ್ ಡಿಪೋ ಅಧಿಕೃತವಾಗಿ ಆರಂಭಗೊಂಡ ನಂತರ ಬಸ್ ಸೌಲಭ್ಯ ಮತ್ತಷ್ಟು ಹೆಚ್ಚಾಗಲಿದೆ ಎಂದರು.
ಅತಿಥಿಗಳಾಗಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬಡವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ರೂಪಿಸಿದ ಗ್ಯಾರಂಟಿ ಯೋಜನೆಗೆ ೨ ವರ್ಷ ಪೂರೈಸಿ ಪ್ರಗತಿಯಲ್ಲಿ ದಾಪುಗಾಲಿಟ್ಟಿದೆ ಎಂದರು.
ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಸಭೆ-ಸಮಾರಂಭಗಳ ಫೋಟೋ ಆಲ್ಬಂ ಬಿಡುಗಡೆ ಮಾಡಿದ ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಚುನಾವಣೆಗೂ ಮುನ್ನ ಸರ್ಕಾರ ಭರವಸೆ ನೀಡಿದಂತೆ ಅನುಷ್ಠಾನಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳು ಶೇ.೧೦೦ ರಷ್ಟು ಕಾರ್ಯಗತಗೊಂಡು ಯಶಸ್ವಿಯಾಗಿ ಮುನ್ನಡೆದಿದೆ. ವಿರೋಧ ಪಕ್ಷದವರೂ ಬೆರಗಾಗುವಂತೆ ಸರ್ಕಾರದ ಈ ಯೋಜನೆಗಳು ಸಾಕಾರಗೊಂಡು ಸಾರ್ಥಕತೆಯತ್ತ ಸಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ ಮಾತನಾಡಿ, ಸರ್ಕಾರದ ಆದೇಶದಂತೆ ಕಾರ್ಯಕ್ರಮ ಆಯೋಜಿಸಿದ್ದೇನೆ. ಮಹಿಳೆಯರಿಗೆ ವಿಶೇಷವಾಗಿ ಲಭ್ಯವಾಗುತ್ತಿರುವ ಸವಲತ್ತು-ಸೌಲಭ್ಯಗಳು ಅವರ ಗಂಡಂದಿರಿಗೂ ನೆರವಾಗುತ್ತಿದೆ ಎಂಬುದು ಅತಿಶಯೋಕ್ತಿಯಲ್ಲ. ಇಂತಹ ಉಪಯುಕ್ತ ಯೋಜನೆಯ ಸಾಫಲ್ಯಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಪತ್ರಿಕೆಗಳ ಸಹಕಾರ ಗಣನೀಯವಾಗಿದೆ ಎಂದರು.
ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಡಿ.ಎನ್.ಗಾಂವ್ಕರ ಮಾತನಾಡಿ, ಸರ್ಕಾರದ ಅಮೂಲ್ಯ ಕಾರ್ಯಕ್ರಮವಾದ ಈ ಯೋಜನೆ ಬಡವರ ಬದುಕಿಗೆ ಆಸರೆಯಾಗಿದೆ ಎಂದರು.
ಯೋಜನೆಯ ಫಲಾನುಭವಿಗಳಾದ ಮಂಗಲಾ ನಾಯ್ಕ ಮತ್ತು ಕಮಲಾ ಸಿದ್ದಿ ಯೋಜನೆಯ ಕುರಿತಂತೆ ಅಭಿಪ್ರಾಯ ತಿಳಿಸಿದರು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಸದಸ್ಯ ಎಂ.ಕೆ. ಭಟ್ಟ ಯಡಳ್ಳಿ ಸ್ವಾಗತಿಸಿದರು. ಹಾಸಣಗಿ ಘಟಕಾಧ್ಯಕ್ಷ ನವೀನ ಹೆಗಡೆ ಬೆದೆಹಕ್ಕಲು ನಿರ್ವಹಿಸಿದರು. ಕಂಪ್ಲಿ ಘಟಕಾಧ್ಯಕ್ಷ ರಾಜು ನಾಯ್ಕ ಕೆರೆಹೊಸಳ್ಳಿ ವಂದಿಸಿದರು. ಅಹಮದಾಬಾದ್ ವಿಮಾನ ದುರಂತದಲ್ಲಿ ಅಸುನೀಗಿದ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.