ಕನ್ಡಪ್ರಭ ವಾರ್ತೆ ಗೋಕಾಕ
ಏ.1ರಿಂದ 6ರವರೆಗೆ ನಗರದ ಜಂಗಮ ಕ್ಷೇಮಾಭಿವೃದ್ಧಿ ಸಂಘದಿಂದ ಶ್ರೀ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ನಿಮಿತ್ತ ಶ್ರೀ ಉಜ್ಜಯಿನಿ ಮಹಾಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ ಕಂಬಿ ಹೇಳಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.1ರಿಂದ 5ರವರೆಗೂ ಪ್ರತಿ ದಿನ ಸಂಜೆ 7ರಿಂದ 8ರವರೆಗೆ ರಾಜಶೇಖರ ಶ್ರೀಗಳಿಂದ ಸನಾತನ ಧರ್ಮಗ್ರಂಥ ಶ್ರೀ ಸಿದ್ಧಾಂತ ಶೀಖಾಮಣಿಯನ್ನಾಧರಿಸಿದ ಅಷ್ಟಾವರಣಗಳ ಮಹತ್ವ ಕುರಿತು ಪ್ರವಚನವು ನಗರದ ಶ್ರೀ ಶಂಕರಲಿಂಗ ಸಂಸ್ಥೆ ಬಿ.ಎನ್.ಮಟ್ಟಿಕಲ್ಲಿ ಕಲ್ಯಾಣ ಮಂಟಪದಲ್ಲಿ ನಡೆಯುವುದು.
ಏ.6ರಂದು ಬೆಳಗ್ಗೆ ಗಂಗಾ ಪೂಜೆ, ಶಿವಪುಣ್ಯಾಹ, ಪಂಚಕಳಸ ಪ್ರತಿಷ್ಠಾಪನೆ, ಶ್ರೀ ಜಗದ್ಗುರು ಪಂಚಾರ್ಯಾರ ಧರ್ಮ ಧ್ವಜಾರೋಹಣ, ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಭಕ್ತರಿಗೆ ಲಿಂಗದೀಕ್ಷೆ ಮತ್ತು ಶ್ರೀ ಶಿವಾಚಾರ್ಯರಿಂದ ಧರ್ಮ ಉಪದೇಶ ನಡೆಯಲಿದೆ. ಬೆಳಗ್ಗೆ 8.30ರಿಂದ ಬಸವೇಶ್ವರ ವೃತ್ತದಿಂದ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ಸಿದ್ಧಾಂತಶಿಖಾಮಣಿ ಗ್ರಂಥೋತ್ಸವ, ಪೂರ್ಣ ಕುಂಭೋತ್ಸವದೊಂದಿಗೆ ಶ್ರೀ ಉಜ್ಜಯಿನಿ ಮಹಾಸನ್ನಧಿಯವರ ಉಪಸ್ಥಿತಿಯೊಂದಿಗೆ ಮಹಾಲಕ್ಷ್ಮೀ ಸಭಾ ಭವನದವರೆಗೆ ಮೆರವಣಿಗೆ ನಡೆಯುವುದು. 10ಕ್ಕೆ ಸಭಾ ಭವನದಲ್ಲಿ ಪಂಚಾರ್ಯಾರ ಯುಗಮಾನೋತ್ಸವ, ಪ್ರವಚನ ಮಂಗಲೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭ ನಡೆಯುವುದು.ಉಜ್ಜಯಿನಿ ಸಿದ್ಧಲಿಂಗ ರಾಜದೇಶಿಕೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು, ಅನೇಕ ಶ್ರೀಗುರುಗಳು ಉಪಸ್ಥಿತರಿರುವರು. ಲಂಡನನಿನ ಪಂಚಸೂತ್ರ ಅಕಾಡೆಮಿ ಸಂಸ್ಥಾಪಕ ಎಚ್.ಎಸ್.ಚಂದ್ರಶೇಖರ ರವರಿಂದ ಸನಾತನ ಧರ್ಮ ಸಂಸ್ಥಾಪಕರು ಯಾರು? ಹಾಗೂ ಸನಾತನ ಧರ್ಮ ಗ್ರಂಥ ವಿಶ್ವರೂಪ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಜಗದೀಶ ಗುಡಗುಂಟಿ ಹಾಗೂ ಮುಖಂಡ ಅಶೋಕ ಪೂಜಾರಿ ಆಗಮಿಸಲಿದ್ದಾರೆ. ಸಮಾಜ ಬಾಂಧವರು, ಭಕ್ತಾಧಿಗಳು ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಶಿವಮೂರ್ತಯ್ಯ ಮಠದ, ಸಂಗಮೇಶ ಗುಡದೂರಕಲ್ಮಠ, ಈರಣ್ಣ ಹಿರೇಮಠ, ಪಂಚಾಕ್ಷರಿ ಹೊಸಟ್ಟಿಮಠ, ಸೋಮಶೇಖರ ಹಿರೇಮಠ, ವಿರೇಂದ್ರ ಹಿರೇಮಠ, ದೇವು ಬೆಳ್ಳಂಕಿಮಠ, ಮಹಿಳಾ ಘಟಕದ ವೀಣಾ ನೂರೊಂದಮಠ, ದೀಪಾ ಹಿರೇಮಠ, ಗೀತಾ ವಸ್ತ್ರದ, ಪೂಜಾ ಹಿರೇಮಠ, ಲಕ್ಷ್ಮೀ ಶಿವನಗುಡಿ ಇದ್ದರು.