ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಅಶೋಕನಗರದಲ್ಲಿ ಕೆಂಚಣ್ಣ ಮತ್ತು ಕರಿಯಣ್ಣ ದೇವರುಗಳ ಪಂಚಲೋಹದ ಹರಿಗೆ ಮೆರವಣಿಗೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಪ್ರಧಾನವಾಗಿ ಜರುಗುವ ಮೂಲಕ ಮೂರುಗಳ ಹಬ್ಬಕ್ಕೆ ತೆರೆ ಬಿದ್ದಿತು.ಕರಿಯಣ್ಣ ಕೆಂಚಣ್ಣ ಹರಿಗೆ ಮುತ್ತತ್ರಾಯ ಹುಲಿ ವಾಹನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೆರೆವೇರಿತು. ಮನೆ ಮುಂದೆ ದೇವರಿಗೆ ಮಹಿಳೆಯರು ಪೂಜೆ ಸಲ್ಲಿಸಿ ಧನ್ಯತೆ ಮೆರದರು. ಕೆಂಚಣ್ಣ ಕರಿಯಣ್ಣ ಹರಿಯನ್ನು ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆ ದಾರಿ ಉದ್ದಕ್ಕೂ ಯುವಕ-ಯುವತಿಯರು ತಮಟೆಯ ಸದ್ದಿಗೆ ಕುಣಿದು ಕುಪ್ಪಳಿಸಿದರು.
ನಂತರ ಶ್ರೀರಾಮಮಂದಿರದ ಒಳಗೆ ನೂತನ ಕೆಂಚಣ್ಣ ಮತ್ತು ಕರಿಯಣ್ಣ ಹರಿಗೆಯನ್ನು ಪ್ರವೇಶ ಮಾಡಲಾಯಿತು. ಅಶೋಕನಗರದ ಎಲ್ಲ ದಾಸಪ್ಪಂದಿರು, ಗುಡ್ಡಪ್ಪಂದಿರು, ಶಂಖ, ಜಾಗಟೆ ಸಮೇತರಾಗಿ ಉತ್ಸವದಲ್ಲಿ ಭಾಗಿಯಾಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.ಅಶೋಕ್ ನಗರ ನಿವಾಸಿ ಮಂಜುನಾಥ್ ಮಾತನಾಡಿ, ಕೆಂಚಣ್ಣ ಮತ್ತು ಕರಿಯಣ್ಣ ದೇವರುಗಳ ಪಂಚಲೋಹದ ಹರಿಗೆ ಹಬ್ಬವು 20ವರ್ಷಕ್ಕೊಮ್ಮೆ ಭಕ್ತಿ ಪ್ರಧಾನವಾಗಿ ನೆರೆವೇರಿಸಲಾಗುತ್ತಿದೆ. ದೇವರ ಕುಲದವರಿಂದ ಪಂಚಲೋಹದ ಕೆಂಚಣ್ಣ, ಕರಿಯಣ್ಣ ಹರಿಗೆಯನ್ನು ಮಾಡಿಸಲಾಗಿದೆ ಎಂದರು.
ಹೊಂಬಾಳೆ ಮಾಡಿ ದೇವರಿಗೆ ವಿಶೇಷ ಪೂಜೆ ಕೈಂಕರ್ಯಗಳನ್ನು ಸಲ್ಲಿಸಿ ನೂತನ ಕೆಂಚಣ್ಣ ಕರಿಯಣ್ಣ ಹರಿಗೆ ದೇವರಿಗೆ ದೃಷಿಯನ್ನು ನೀಡಲಾಗಿದೆ. ಹುಲಿವಾಹನ ಉತ್ಸವ, ಪಂಚಕಳಸದಿಂದ ಹೊಸನೀರು ತಂದು , ಜಾನಪದ ಕಲಾ ಮೇಳದೊಂದಿಗೆ ದೇವರ ಉತ್ಸವ ನಡೆಸಲಾಯಿತು.ಮೂರನೇ ದಿನವಾದ ಭಾನುವಾರದಂದು ಮಾಂಸಹಾರದ ಅನ್ನಸಂತರ್ಪಣೆಯನ್ನು ನೆರೆವೇರಿಸಲಾಗುತ್ತಿದೆ. ಹಬ್ಬದ ಯಶಸ್ವಿಗೆ ಕೈಜೋಡಿಸಿದ ಅಶೋಕ್ ನಗರದ ಮುಖಂಡರಿಗೆ ಹಾಗೂ ಯವಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಸದಸ್ಯ ಶಿವಸ್ವಾಮಿ ದೇವರಿಗೆ ಪುಷ್ಪನಮನ ಸಲ್ಲಿಸಿ ಪೂಜೆ ಸಲ್ಲಿಸಿದರು. ಮುಖಂಡರಾದ ಮಂಜು, ಕುಮಾರ್, ಚಾಮರಾಜು, ಸ್ವಾಮಿ, ನರಸಿಂಹಮೂರ್ತಿ ಯಜಮಾನರಾದ ಶ್ರೀನಿವಾಸ್, ಕೃಷ್ಣ, ಸುರೇಶ್, ಮುಕುಂದ, ಕೃಷ್ಣ ಸೇರಿದಂತೆ ಇತರರು ಹಬ್ಬದ ನೇತೃತ್ವ ವಹಿಸಿದ್ದರು.