ಶಿವಾನಂದ ಗೊಂಬಿ
ಹುಬ್ಬಳ್ಳಿ: ಬಿಜೆಪಿಯಿಂದ ಉಚ್ಚಾಟಿತರಾಗಿರುವ ಬಸನಗೌಡ ಪಾಟೀಲ ಯತ್ನಾಳ ಪರ ಬ್ಯಾಟಿಂಗ್ ಮಾಡಿದ್ದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಶ್ರೀಗಳಿಗೆ ಮುಳುವಾಗುತ್ತಿದೆ. ಅವರ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆಗಳಿವೆ.ಶ್ರೀಗಳ ನಡೆಯ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. 6 ವರ್ಷಗಳ ಹಿಂದೆ ಇದೇ ರೀತಿ ಆಗಿತ್ತು. 2019ರಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಆಗ ಕಾಂಗ್ರೆಸ್ ಪರವಾಗಿ ಶ್ರೀಗಳು ಬ್ಯಾಟಿಂಗ್ ಮಾಡಿದ್ದರು. ಆಗ ಚುನಾವಣೆಗೆ ನಿಂತಿದ್ದ ವಿನಯ ಕುಲಕರ್ಣಿ, ವೀಣಾ ಕಾಶಪ್ಪನವರ ಪರವಾಗಿ ಬಹಿರಂಗವಾಗಿಯೇ ಪ್ರಚಾರ ನಡೆಸಿದ್ದುಂಟು. ಆದರೆ, ಅವರಿಬ್ಬರೂ ಸೋತಿದ್ದರು. ಅದು ಬೇರೆ ವಿಷಯ. ಆದರೆ, ಹೀಗೆ ಬಹಿರಂಗವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಕ್ಕೆ ಕೂಡಲಸಂಗಮ ಪೀಠದ ಜವಾಬ್ದಾರಿ ಹೊತ್ತಿರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಸೇರಿದಂತೆ ಸಮಾಜದಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಆಗ ಈ ವಿಷಯವಾಗಿ ಟ್ರಸ್ಟ್ ಶ್ರೀಗಳಿಗೆ ತಿಳಿವಳಿಕೆ ನೋಟಿಸ್ ನೀಡಿತ್ತು.
ಸಮಾಜ ಮತ್ತು ಪೀಠದ ಅಭಿವೃದ್ಧಿಗಾಗಿ ಕೆಲಸ ಮಾಡಿ. ರಾಜಕಾರಣಿಗಳ ಓಲೈಕೆ, ರಾಜಕೀಯ ಪಕ್ಷದ ಪರವಾಗಿ ಹೇಳಿಕೆ ನೀಡುವುದು ಬಿಡಿ. ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಸ್ಪಷ್ಟವಾಗಿಯೇ ತಿಳಿಸಿತ್ತು. ಇದಕ್ಕೆ ಉತ್ತರ ನೀಡಿದ್ದ ಶ್ರೀಗಳು, ಸಮಾಜದ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದರಂತೆ. ಬಳಿಕ ಸಂಧಾನ ನಡೆದು ಶ್ರೀಗಳೇ ಪೀಠದ ಅಧ್ಯಕ್ಷರಾಗಿ ಮುಂದುವರೆದರು.ಸುಧಾರಿಸಲಿಲ್ಲ:
ಈ ನೋಟಿಸ್ ನೀಡಿದ್ದು, ಸಂಧಾನ ನಡೆದು ಜುಲೈ ತಿಂಗಳಿಗೆ ಬರೋಬ್ಬರಿ ಆರು ವರ್ಷವಾಗುತ್ತದೆ. ಆದರೂ ಶ್ರೀಗಳ ನಡವಳಿಕೆಯಲ್ಲಿ ಮಾತ್ರ ಬದಲಾವಣೆಯಾಗಲೇ ಇಲ್ಲ. ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುತ್ತಿದ್ದಂತೆ ಅವರ ಪರ ಬ್ಯಾಟಿಂಗ್ ಶುರು ಮಾಡಿದರು. ಕೆಲ ತಾಲೂಕು, ಜಿಲ್ಲೆಗಳಲ್ಲಿ ಹೋಗಿ ಯತ್ನಾಳ ಪರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿ ಎಂದು ಕೂಡ ಕರೆ ನೀಡಿದರು. ಶ್ರೀಗಳ ಈ ನಡೆ ಟ್ರಸ್ಟ್ ಮತ್ತೆ ಕೆಂಡಾಮಂಡಲ ಆಗುವಂತೆ ಮಾಡಿದೆ. ಈ ಸಂಬಂಧ ಈಗಾಗಲೇ ಒಂದು ಸಭೆ ನಡೆಸಿರುವ ಟ್ರಸ್ಟ್ ಹಾಗೂ ಸಮಾಜದ ಹಿರಿಯರು, ಶ್ರೀಗಳು ಒಬ್ಬ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರವಾಗಿ ಹೇಳಿಕೆ ನೀಡುವುದನ್ನು ಬಿಡಬೇಕು. ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಸೂಚ್ಯವಾಗಿ ಹೇಳಿದ್ದುಂಟು.ಪೀಠ ಸ್ಥಾಪಿಸಿ 15 ವರ್ಷ ಕಳೆದಿವೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪೀಠ ಅಭಿವೃದ್ಧಿಯಾಗುತ್ತಿಲ್ಲ. ಪೀಠದಲ್ಲೂ ಶ್ರೀಗಳು ಉಳಿಯಲ್ಲ. ಬರೀ ಬೆಂಗಳೂರು, ದೆಹಲಿ ಸೇರಿದಂತೆ ವಿವಿಧೆಡೆ ಓಡಾಡಿಕೊಂಡು ಇರುತ್ತಾರೆ. ಪೀಠದ ಅಭಿವೃದ್ಧಿಗೆ ಕೆಲಸವನ್ನೇ ಮಾಡುತ್ತಿಲ್ಲ. ಬಸವಣ್ಣ, ಬಸವಾದಿ ಶರಣರ ವಚನ, ಧಾರ್ಮಿಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ. ಹೀಗೆ ಸಮಾಜ, ಜನರ ಹಿತಕ್ಕಾಗಿ ಕೆಲಸವೇ ಆಗುತ್ತಿಲ್ಲ. ಬರೀ ಒಂದು ಪಕ್ಷ ಅಥವಾ ವ್ಯಕ್ತಿ ಪರವಾಗಿ ಕೆಲಸ ಮಾಡುತ್ತ ಸಾಗುತ್ತಿದ್ದಾರೆ ಎಂಬ ಅಸಮಾಧಾನ ಸಮಾಜ ಬಾಂಧವರಲ್ಲಿದೆ.
14ರ ನಂತರ ಸಭೆಈ ನಡುವೆ ಟ್ರಸ್ಟ್ ಇದೀಗ ಶ್ರೀಗಳ ನಡವಳಿಕೆ ಕುರಿತಂತೆ ಸಮಾಜದ ಹಿರಿಯರು, ಶಾಸಕರು, ಮಂತ್ರಿಗಳು, ಮಾಜಿ ಶಾಸಕರು, ಸಮಾಜದ ಗಣ್ಯರ ಸಭೆ ಕರೆಯಲು ನಿರ್ಧರಿಸಿದೆ. ಅಲ್ಲಿ ಶ್ರೀಗಳ ನಡವಳಿಕೆ ಕುರಿತಂತೆ ಚರ್ಚಿಸಿ ಶ್ರೀಗಳಿಗೆ ಮತ್ತೆ ನೋಟಿಸ್ ನೀಡಬೇಕೋ? ಬೇಡವೋ? ಶ್ರೀಗಳು ಒಬ್ಬ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಹೇಳಿಕೆ ನೀಡುವುದನ್ನು ಬಿಡಬೇಕೆಂದರೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಜತೆಗೆ ಪೀಠಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸೂಕ್ತ ಎಂಬ ಅಭಿಪ್ರಾಯ ಕೂಡ ಕೆಲ ಮುಖಂಡರು ವ್ಯಕ್ತಪಡಿಸಿದ್ದಾರೆ. ಆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸುತ್ತವೆ.ಸಭೆಯಲ್ಲಿ ನಿರ್ಧಾರ
ಒಬ್ಬ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಪರವಾಗಿ ಹೇಳಿಕೆ ನೀಡಬಾರದು ಎಂದು ಹೇಳಿದ್ದೇವೆ. ಈ ಬಗ್ಗೆ ಸಮಾಜದ ಮುಖಂಡರು, ಮಂತ್ರಿಗಳು, ಮಾಜಿ ಶಾಸಕರು ಎಲ್ಲರ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.- ನೀಲಕಂಠ ಅಸೂಟಿ, ಟ್ರಸ್ಟ್‌ನ ಮುಖಂಡರು