ಯತ್ನಾಳ್ ಚಿತ್ರಕ್ಕೆ ಕ್ಷೀರಾಭಿಷೇಕ । ಬಿಎಸ್ವೈ, ಬಿವೈವಿ ಚಿತ್ರಕ್ಕೆ ಚಪ್ಪಲಿಯೇಟು । ನಾಯಕರ ಪ್ರತಿಕೃತಿ ದಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ದಾವಣಗೆರೆವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಉಚ್ಚಾಟಿಸಿದ್ದನ್ನು ಖಂಡಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾವಚಿತ್ರಕ್ಕೆ ಚಪ್ಪಲಿಯೇಟು ಹಾಕಿ, ಪ್ರತಿಕೃತಿ ದಹಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ನೇತೃತ್ವದಲ್ಲಿ ಸಮಾಜ ಬಾಂಧವರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಜಯದೇವ ವೃತ್ತದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಅಶೋಕ ಗೋಪನಾಳ್ ಇತರರ ನೇತೃತ್ವದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ, ಯಡಿಯೂರಪ್ಪ-ವಿಜಯೇಂದ್ರ ಭಾವಚಿತ್ರಗಳನ್ನು ಚಪ್ಪಲಿ ಕಾಲಿನಲ್ಲಿ ತುಳಿದು, ನಂತರ ಅವುಗಳನ್ನು ಸುಟ್ಟು ಹಾಕುವ ಮೂಲಕ ಅಪ್ಪ ಸುಳ್ಳ-ಮಗ ಕಳ್ಳ ಎಂದು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಅಶೋಕ ಗೋಪನಾಳ್, ದೇಶ, ರಾಜ್ಯ ಕಂಡ ನಿಷ್ಟಾವಂತ, ಪ್ರಾಮಾಣಿಕ ರಾಜಕಾರಣಿ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿದ್ದು ನಿಜಕ್ಕೂ ಖಂಡನೀಯ ಸಂಗತಿ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ವ್ಯಾಮೋಹದಿಂದ ಯತ್ನಾಳರನ್ನು ಉಚ್ಚಾಟನೆ ಮಾಡಲಾಗಿದೆ ಎಂದರು.
ಪಕ್ಷದ ವ್ಯಾಕರಣವೇ ಗೊತ್ತಿಲ್ಲದ, ಪಕ್ಷದ ಹಿರಿಯರೊಂದಿಗೆ ಒಡನಾಟವೇ ಇಲ್ಲದ ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂಡಿಸಲಾಗಿದೆ. ರಾಜ್ಯದ 2 ಕೋಟಿ ವೀರಶೈವ ಲಿಂಗಾಯತರಲ್ಲಿ ಸುಮಾರು 1.20 ಕೋಟಿ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜದವರಿಗೆ ಅಧಿಕಾರವನ್ನು ಕೊಟ್ಟರೆ ಮುಂದೆ ತಮಗೆ ಅಧಿಕಾರ ಸಿಗುವುದಿಲ್ಲವೆಂಬ ದುರಾಸೆಯಿಂದ ಯತ್ನಾಳ್‌ರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಲು ಮುಂದಾಗದ ಯಡಿಯೂರಪ್ಪ ಅದನ್ನು ತಮ್ಮ ಮಗ ವಿಜಯೇಂದ್ರಗೆ ಕೊಡಿಸಿದ್ದಾರೆ ಎಂದು ಆರೋಪಿಸಿದರು.ಬಿಜೆಪಿಯ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತ, ನಾಯಕನಾಗಿ ಜನರ ಮನಸ್ಸಿನಲ್ಲಿ ಬೇರೂರಿರುವ ಬಸನಗೌಡ ಪಾಟೀಲ ಯತ್ನಾಳ್ ಪಕ್ಷ ನಿಷ್ಠೆ ಪ್ರಶ್ನಾತೀತವಾದುದು. ಅನ್ಯಾಯವನ್ನು ಯಾವುದೇ ಮುಲಾಜಿಲ್ಲದೇ ನೇರವಾಗಿ ಧ್ವನಿ ಎತ್ತುವ ಮೂಲಕ ತಮ್ಮ ಬದ್ಧತೆಯನ್ನು ಯತ್ನಾಳ್ ನಿರಂತರ ಪ್ರದರ್ಶಿಸಿದ್ದಾರೆ. ಇಂತಹ ನಾಯಕ ಕೇವಲ ಒಂದು ಜಾತಿಗೆ ಸೀಮಿತರಲ್ಲ. ಇಡೀ ಹಿಂದು ಸಮಾಜದ ಧ್ವನಿಯಾಗಿದ್ದ ಯತ್ನಾಳರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವೂ ಇಲ್ಲ ಎಂದು ಹೇಳಿದರು.
ರಾಷ್ಟ್ರೀಯ ನಾಯಕರಿಗೆ ತಪ್ಪು ಮಾಹಿತಿ ನೀಡಿ, ಒತ್ತಡ ಹೇರುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈಗಾಗಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ಯತ್ನಾಳರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಬಿಜೆಪಿಯ ಭವಿಷ್ಯ ಹಾಗೂ ಸಂಘಟನೆ ದೃಷ್ಟಿಯಿಂದ ಬಿಜೆಪಿ ರಾಷ್ಟ್ರೀಯ ನಾಯಕರು ಯತ್ನಾಳ್‌ರನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.ಪಂಚಮಸಾಲಿ ಸಮಾಜದ ಮುಖಂಡರಾದ ರುದ್ರೇಗೌಡ, ಎಚ್.ಎಚ್.ಯೋಗೇಶ, ಕೊಟ್ರೇಗೌಡ ಕ್ಯಾರೆಕಟ್ಟೆ, ಚನ್ನಬಸಪ್ಪ ಚಿಕ್ಕಮೇಗಳಗೆರೆ, ಎಪಿಎಂಸಿ ಶಂಕರ, ವಿರುಪಣ್ಣ ಕೊಳೇನಹಳ್ಳಿ, ವಿಜಯ ಬೆಂಡಿಗೇರಿ, ನೂರಾರು ಯುವಕರು, ಹಿರಿಯರು, ಮಹಿಳೆಯರು ಇದ್ದರು.