ಗರ್ಭಿಣಿಯರು ಮಧ್ಯಾಹ್ನ ಮನೆಯಿಂದ ಹೊರಗಡೆ ಓಡಾಡಬಾರದು: ಡಾ. ಯಲ್ಲಾ ರಮೇಶ್ ಬಾಬು

KannadaprabhaNewsNetwork | Published : Apr 3, 2025 12:33 AM

ಸಾರಾಂಶ

ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆ ಗರ್ಭಿಣಿಯರು ಮಧ್ಯಾಹ್ನ ಅವಧಿಯಲ್ಲಿ ಮನೆಯಿಂದ ಹೊರಗಡೆ ಓಡಾಡಬಾರದು. ಹೆಚ್ಚಾಗಿ ನೀರು ಕುಡಿಯಲು ಆದ್ಯತೆ ನೀಡಬೇಕು.

ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಅಧಿಕಾರಿ ಭೇಟಿ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆ ಗರ್ಭಿಣಿಯರು ಮಧ್ಯಾಹ್ನ ಅವಧಿಯಲ್ಲಿ ಮನೆಯಿಂದ ಹೊರಗಡೆ ಓಡಾಡಬಾರದು. ಹೆಚ್ಚಾಗಿ ನೀರು ಕುಡಿಯಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಹೇಳಿದರು.

ಕುರುಗೋಡು ತಾಲೂಕಿನ ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತನಾಡಿದ ಅವರು, ಮಧ್ಯಾಹ್ನ 12ರಿಂದ 3 ಗಂಟೆ ಅವಧಿಯಲ್ಲಿ ಬಿಸಿಲಿನ ತೀವ್ರತೆಯು ಹೆಚ್ಚು ಕಂಡುಬರುತ್ತಿದ್ದು, ಗರ್ಭಿಣಿಯರು ಮನೆಯಲ್ಲಿಯೇ ಇರುವ ಮೂಲಕ ಆರೋಗ್ಯದ ಕಾಳಜಿಗೆ ಕುಟುಂಬದ ಸದಸ್ಯರು ಸಹ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಗರ್ಭಿಣಿಯರು ಮಧ್ಯಾಹ್ನದ ಅವಧಿಯಲ್ಲಿ ಮನೆಯಿಂದ ಹೊರಗಡೆಯ ಕೆಲಸ ಕಾರ್ಯ ಮಾಡಬಾರದು. ದೇಹದಲ್ಲಿ ನೀರಿನಾಂಶ ಕೊರತೆಯಿಂದ ಆಗಬಹುದಾದ ಅನಾನುಕೂಲತೆಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದರು.

ಬೇಸಿಗೆ ಹಿನ್ನೆಲೆ ಬಾಣಂತಿಯರು ಸಹ ನವಜಾತ ಶಿಶುವಿಗೆ ತಾಯಿ ಹಾಲು ನೀಡಬೇಕು. ಬೇರೆ ಏನನ್ನೂ ಕೊಡಬಾರದು. ತಾಯಿ ಹಾಲಿನಲ್ಲಿ ಸಾಕಷ್ಟು ನೀರಿನಾಂಶ ಇರುವುದರಿಂದ ದಿನಕ್ಕೆ ಕನಿಷ್ಠ 10 ರಿಂದ 12 ಬಾರಿ ಅಥವಾ ಮಗು ಅತ್ತಾಗಲೆಲ್ಲಾ ಹಾಲುಣಿಸಬೇಕು ಎಂದು ಸೂಚಿಸಿದರು.

ಈಗಾಗಲೇ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರ ನಿರ್ಜಲೀಕರಣ ತಡೆಗಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಓ.ಆರ್.ಎಸ್. ಕಾರ್ನರ್ ಮಾಡಲಾಗಿದ್ದು, ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಓ.ಆರ್.ಎಸ್ ದ್ರಾವಣ ಸೇವಿಸುವ ಮೂಲಕ ದೇಹದಲ್ಲಿ ನಿರ್ಜಲೀಕರಣದಿಂದಾಗುವ ಅಪಾಯ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಈಗಾಗಲೇ ಬಿಸಿಲಿನ ಶಾಖಾಘಾತದಿಂದ ಸಂಭವಿಸಬಹುದಾದ ತೊಂದರೆ ತಪ್ಪಿಸಲು ಮತ್ತು ತಕ್ಷಣ ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 1 ಬೆಡ್ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಬೆಡ್ ಕಾಯ್ದಿರಿಸಲಾಗಿದೆ ಎಂದು ಡಿಎಚ್‌ಒ ಹೇಳಿದರು.

ಜಿಲ್ಲೆಯ ಗ್ರಾಮ ಮಟ್ಟದಲ್ಲಿರುವ ಆಯುಷ್ಮಾನ್ ಆರೋಗ್ಯ ಮಂದಿರ ಸೇರಿದಂತೆ ಎಲ್ಲ ಆರೋಗ್ಯ ಕೇಂದ್ರಗಲ್ಲಿ ಬಿಸಿಲಿನ ಶಾಖಾಘಾತದ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ತುರ್ತು ಔಷಧಿಗಳನ್ನು ಕೊರತೆಯಾಗದಂತೆ ದಾಸ್ತಾನು ಇರಿಸಲಾಗಿದೆ ಎಂದರು.

ತಾರನಾಥ ಆರ್ಯುವೇದ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ್, ಆಯುಷ್ ಪ್ರಾಧ್ಯಾಪಕ ಡಾ. ರಾಜಶೇಖರ್ ಗಾಣಿಗೇರ್, ಡಾ. ಫಣೀಂದ್ರ, ಡಾ. ಕಲ್ಯಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಕಚೇರಿ ಅಧೀಕ್ಷಕ ಬಸವರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವೀರೇಶ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶರಣಮ್ಮ, ಸಿದ್ದಮ್ಮ, ಫಾರ್ಮಸಿಸ್ಟ್ ಕ್ರಿಷ್ಣಮೂರ್ತಿ, ಆಶಾ ಕಾರ್ಯಕರ್ತೆ ರಾಧ ಸೇರಿದಂತೆ ತಾಯಂದಿರು ಹಾಗೂ ಸಾರ್ವಜನಿಕರು ಇದ್ದರು.

Share this article