ಟಿ. ಎನ್. ಸೀತಾರಾಂಗೆ ಪಂಚಮಿ ಪುರಸ್ಕಾರ

KannadaprabhaNewsNetwork |  
Published : Dec 31, 2025, 03:00 AM IST
29ಸೀತಾರಾಮ್ | Kannada Prabha

ಸಾರಾಂಶ

ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ ''''ಪಂಚಮಿ ಪುರಸ್ಕಾರ 2026'''' ಕ್ಕೆ ಕನ್ನಡದ ಹಿರಿಯ ಹಿರಿ-ಕಿರುತೆರೆ ನಟ, ನಿರ್ದೇಶಕ, ಸಾಹಿತಿ ಟಿ. ಎನ್. ಸೀತಾರಾಂ ಆಯ್ಕೆಯಾಗಿದ್ದಾರೆ.

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ ‘ಪಂಚಮಿ ಪುರಸ್ಕಾರ 2026’ ಕ್ಕೆ ಕನ್ನಡದ ಹಿರಿಯ ಹಿರಿ-ಕಿರುತೆರೆ ನಟ, ನಿರ್ದೇಶಕ, ಸಾಹಿತಿ ಟಿ. ಎನ್. ಸೀತಾರಾಂ ಆಯ್ಕೆಯಾಗಿದ್ದಾರೆ.ಜನವರಿ ತಿಂಗಳಲ್ಲಿ ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಈ ಪ್ರಶಸ್ತಿಯನ್ನು ಒಂದು ಲಕ್ಷ ರು, ಗೌರವಧನದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್‌.ಪಿ. ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಪ್ರಶಸ್ತಿ ಸಮಿತಿಯ ಸಂಚಾಲಕ ಜನಾರ್ದನ ಕೊಡವೂರು​, ಉಪಾಧ್ಯಕ್ಷ ಮಧುಸೂದನ ಹೇರೂರು ಉಪಸ್ಥಿತರಿದ್ದರು.ಟಿ. ಎನ್. ಸೀತಾರಾಂ: ಕಿರುತೆರೆ ದಾರಾವಾಹಿ ಮೂಲಕ ಮನೆಮಾತಾಗಿರುವ​ ಟಿ. ಎನ್. ಸೀತಾರಾಂ ಪತ್ರಕರ್ತ, ಕತೆಗಾರ, ನಾಟಕಕಾರ, ನಟ, ಚಿತ್ರ ನಿರ್ದೇಶಕರಾಗಿಯೂ ಛಾಪು ಮೂಡಿಸಿದವರು. ಮೂಲತಃ ಗೌರಿಬಿದನೂರಿನವರಾದ ಸೀತಾರಾಂ ಬಿಎಸ್ಸಿ, ಬಿಎಲ್ ಓದಿ ನ್ಯಾಯವಾದಿಯಾಗಿಯೂ ಕೆಲಸ ಮಾಡಿದರಾದರೂ, ಆಂತರ್ಯದ ತುಡಿತ ಅವರನ್ನು ಬರಹಗಾರನನ್ನಾಗಿಸಿತು. ಲೋಹಿಯಾ ತತ್ತ್ವಗಳನ್ನು ನಂಬಿ, ತಮ್ಮ ಬದುಕು ಮತ್ತು ಕಾರ್ಯ ಕ್ಷೇತ್ರಗಳೆಲ್ಲದರಲ್ಲಿ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಂಡು ಬಂದಿರುವವರು.ಅವರ ಪ್ರಥಮ ನಾಟಕ ‘ಯಾರಾದರೇನಂತೆ?’ ನಂತರದ ‘ಮನ್ನಿಸು ಪ್ರಭುವೆ’ ಅವರಿಗೆ ಪ್ರಶಸ್ತಿಗಳನ್ನು ತಂದಿತು. ಮುಂದೆ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ನಾಟಕಗಳು ನೂರಾರು ಪ್ರಯೋಗಗಳನ್ನು ಕಂಡು ಜನಪ್ರಿಯಗೊಂಡಿವೆ. ಅವರ 22 ಸಣ್ಣ ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಕ್ರೌರ್ಯ ಸಣ್ಣ ಕತೆಯನ್ನು ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿ ನಿರ್ಮಿಸಿದ್ದರು. ಅದಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.

ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಪಲ್ಲವಿ’ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಮಾಡಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಾನಸ ಸರೋವರ’ ಹಾಗೂ ಪಿ.ಎಚ್.ವಿಶ್ವನಾಥ್ ನಿರ್ದೇಶನದ ‘ಪಂಚಮವೇದ’ ಚಿತ್ರಗಳ ಸಂಭಾಷಣೆಗೆ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. ಟಿ.ಎಸ್. ನಾಗಾಭರಣ ನಿರ್ದೇಶನದ ‘ಬ್ಯಾಂಕರ್ ಮಾರ್ಗಯ್ಯ’ ಚಿತ್ರಕ್ಕೂ ಸೀತಾರಾಂ ರಾಷ್ಟ್ರಪ್ರಶಸ್ತಿ ಪಡೆದುಕೊಂಡರು.

ಸೀತಾರಾಮ್ ನಿರ್ದೇಶಿಸಿದ ಮೊದಲ ಚಲನಚಿತ್ರ ಭೈರಪ್ಪನವರ ‘ಮತದಾನ’ ಕಾದಂಬರಿ ಆಧರಿಸಿದ ಅದೇ ಹೆಸರಿನ ಚಿತ್ರ. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರವೆಂಬ ಮನ್ನಣೆ – ಪ್ರಶಸ್ತಿಗೆ ಪಾತ್ರವಾಯಿತು. ಅವರ ನಿರ್ದೇಶನದ ಸದಭಿರುಚಿಯ ಚಲನಚಿತ್ರಗಳು ‘ಮೀರಾ, ಮಾಧವ, ರಾಘವ’ ಮಕ್ಕು ಕಾಫಿ ತೋಟ. ಬೆಂಗಳೂರು ದೂರದರ್ಶನಕ್ಕಾಗಿ ನಿರ್ದೇಶಿಸಿದ ‘ಮಾಯಾಮೃಗ’ ಧಾರಾವಾಹಿ 435 ಕಂತುಗಳಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯಗೊಂಡಿದೆ. ಮನ್ವಂತರ ಮತ್ತು ಮುಕ್ತ, ಮಗಳು ಜಾನಕಿ ಧಾರಾವಾಹಿಗಳು. ಖಾಸಗಿ ವಾಹಿನಿಗಳಲ್ಲಿ ನೂರಾರು ಕಂತುಗಳಲ್ಲಿ ಪ್ರಸಾರಗೊಂಡಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ