ನಕ್ಷತ್ರಗಳು ಮತ್ತು ರಾಶಿಚಕ್ರಗಳ ಲೆಕ್ಕಾಚಾರವು ಸಹ ಖಗೋಳಶಾಸ್ತ್ರದ ಮಹತ್ವದ ಭಾಗವಾಗಿದೆ.
ಬಳ್ಳಾರಿ: ಪಂಚಾಂಗ ಪಠಣವೆಂದರೆ ಕೇವಲ ಧಾರ್ಮಿಕ ಆಚರಣೆ ಅಥವಾ ಸಂಪ್ರದಾಯ ಮಾತ್ರವಲ್ಲ; ಅದು ಆಳವಾದ ವೈಜ್ಞಾನಿಕ ಆಧಾರವನ್ನು ಹೊಂದಿರುವ ಜ್ಞಾನಸಂಪತ್ತಾಗಿದೆ ಎಂದು ಹಿರಿಯ ಲೆಕ್ಕಪರಿಶೋಧಕ ಹಾಗೂ ಅಯ್ಯಪ್ಪಸ್ವಾಮಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಯಪ್ರಕಾಶ್ ಜೆ.ಗುಪ್ತ ತಿಳಿಸಿದರು.ಶಬರಿ ಅಯ್ಯಪ್ಪ ಟ್ರಸ್ಟ್, ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಸಹಯೋಗದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಂಚಾಂಗ ಶ್ರವಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಕಲ್ಯಾಣಸ್ವಾಮಿ ಮಾತನಾಡಿ, ನಕ್ಷತ್ರಗಳು ಮತ್ತು ರಾಶಿಚಕ್ರಗಳ ಲೆಕ್ಕಾಚಾರವು ಸಹ ಖಗೋಳಶಾಸ್ತ್ರದ ಮಹತ್ವದ ಭಾಗವಾಗಿದೆ. ಚಂದ್ರನು ಪ್ರತಿದಿನ ಯಾವ ನಕ್ಷತ್ರದಲ್ಲಿ ಸಂಚರಿಸುತ್ತಾನೆ ಎಂಬುದನ್ನು ಗಮನಿಸಿ ಪಂಚಾಂಗದಲ್ಲಿ ದಾಖಲಿಸಲಾಗುತ್ತದೆ. ಇದು ಭೂಮಿಯ ಮೇಲಿನ ಸಮಯದ ನಿರ್ವಹಣೆಗೆ ಸಹಕಾರಿ ಆಗುತ್ತದೆ. ಯೋಗ ಮತ್ತು ಕರಣಗಳ ಲೆಕ್ಕಾಚಾರವೂ ಗಣಿತದ ಸೂತ್ರಗಳನ್ನು ಬಳಸಿಕೊಂಡು ಮಾಡಲಾಗುತ್ತದೆ. ಇದರಿಂದ ಪಂಚಾಂಗ ಪಠಣವು ಕೇವಲ ಧಾರ್ಮಿಕ ನಂಬಿಕೆಯಲ್ಲ, ಗಣಿತ ಮತ್ತು ಖಗೋಳಶಾಸ್ತ್ರದ ಸಮನ್ವಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಹಿರಿಯ ಉದ್ಯಮಿ ಪೋಲಾ ರಾಧಾಕೃಷ್ಣ, ಮಾಜಿ ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಅಯ್ಯಪ್ಪಸ್ವಾಮಿ ಟ್ರಸ್ಟ್‌ನ ಎಚ್.ಎಂ. ಮಂಜುನಾಥ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಮಧುಸೂದನ್ ರೆಡ್ಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಜ್ಯೋತಿಷ್ಯ ರತ್ನ ಪಂ.ಮಠಂ ಗುರುಪ್ರಸಾದ್ ಪಂಚಾಂಗ ಪಠಣ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಶೀಲಾಬ್ರಹ್ಮಯ್ಯ ಅವರು ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿದರು.
ಕೆ.ಬಿ. ಸಂಜೀವ್ ಪ್ರಸಾದ್ ಹಾಗೂ ಎಂ.ಟಿ.ಮಲ್ಲೇಶಪ್ಪ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.