ಹಾವೇರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ಸೆ. 19ರಂದು ಜರುಗಲಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಪಂಚಪೀಠಾಧೀಶರರು ಪಾಲ್ಗೊಳ್ಳುವರೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.ಶುಕ್ರವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ, ವೀರಶೈವ ಧರ್ಮ ಬಹುಪ್ರಾಚೀನವಾಗಿದ್ದು, ಸಕಲ ಜೀವಾತ್ಮರಿಗೆ ಒಳಿತನ್ನೆ ಬಯಸುತ್ತಾ ಬಂದಿದೆ. ಲಿಂ. ಹಾನಗಲ್ಲ ಕುಮಾರಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ಮೊದಲ ಅಧಿವೇಶನದಲ್ಲಿನ ನಿರ್ಣಯಗಳಂತೆ ನಡೆದುಕೊಂಡು ಬರುತ್ತಿದೆ.
ಈ ಸಮಾರಂಭದಲ್ಲಿ ಪಂಚಪೀಠದ ಜಗದ್ಗುರುಗಳು ವಿರಕ್ತಮಠಾಧೀಶರು ಹಾಗೂ ಶರಣ ಪರಂಪರೆಯ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಾಡಿನೆಲ್ಲೆಡೆಯಿಂದ ಈ ಬೃಹತ್ ಸಮಾವೇಶಕ್ಕೆ ವೀರಶೈವ ಲಿಂಗಾಯತ ಸಮಾಜದವರು ಪಾಲ್ಗೊಳ್ಳಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ ಎಂದರು.
ಸಮಾರಂಭದಲ್ಲಿ ಹಾವೇರಿ ಗೌರಿಮಠದ ಮತ್ತು ಬಣ್ಣದ ಮಠದ ಶ್ರೀಗಳು ಉಪಸ್ಥಿತರಿದ್ದರು.