ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದಲ್ಲಿ ಏ. 27ರಂದು ಬೆಳಗ್ಗೆ 10.30ಕ್ಕೆ ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಜ. ಪಂಚಾಚಾರ್ಯರ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜ. ಪ್ರಸನ್ನ ರೇಣುಕ ಡಾ. ವೀರಸೋಮೆಶ್ವರ ಭಗವತ್ಪಾದರು ಹೇಳಿದರು.
ಸುಳ್ಳ ಗ್ರಾಮದಲ್ಲಿ ಏ. 23ರಿಂದ ಏ. 28ರ ವರೆಗೆ ಜಾತ್ರಾಮಹೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಏ. 27ರಂದು ಬೆಳಗ್ಗೆ 10.30ಕ್ಕೆ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ ಎಂದರು.
ಗ್ರಾಮದಲ್ಲಿ ಪುನರ್ ನಿರ್ಮಾಣಗೊಂಡ ಕಲ್ಮೇಶ್ವರ ದೇವಸ್ಥಾನ ಉದ್ಘಾಟನೆ ಮತ್ತು ಕಳಸಾರೋಹಣ, ಶ್ರೀ ಗುರು ಸಿದ್ಧರಾಮೇಶ್ವರ ಮಂಗಲ ಭವನ ಉದ್ಘಾಟನೆ, ಕಲ್ಮೇಶ್ವರ ಪಾಲಕಿ ಉತ್ಸವ ಹಾಗೂ ಮಹಾರಥೋತ್ಸವ ಮತ್ತು ಜೀವನ ದರ್ಶನ ಪ್ರವಚನ- ಧರ್ಮ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದರು.ಇದೇ ಪ್ರಥಮ ಬಾರಿಗೆ ಗ್ರಾಮದಲ್ಲಿ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುತ್ತಿದೆ. ನಾಡಿನ ಅನೇಕ ಶಿವಾಚಾರ್ಯರು, ಪಂಚ ಪೀಠದ ಜಗದ್ಗುರುಗಳು ಮತ್ತು ಸಾಧಕರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವಳಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಧರ್ಮಾಭಿಮಾನಿಗಳು, ಭಕ್ತರು ಪಂಚಗೃಹ ಹಿರೇಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಧಾರ್ಮಿಕ ಜಾಗೃತಿ ಯಶಸ್ವಿಗೊಳಿಸಬೇಕು ಎಂದರು.