ಬಿರಡಹಳ್ಳಿ ಗ್ರಾ.ಪಂ ಗೆ ಪಂಚಾಯತ್‌ ಪುರಸ್ಕಾರ

KannadaprabhaNewsNetwork | Published : Apr 27, 2025 1:32 AM

ಸಾರಾಂಶ

ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್.ಡಿ ಸತೀಶ್, ಕೇಂದ್ರ ಸರ್ಕಾರ ಬಿಹಾರ ರಾಜ್ಯದ ಮಧುಬನಿಯಲ್ಲಿ ಏ ೨೪ ರಂದು ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.

ವಿದ್ಯಾಕಾಂತರಾಜ್

ಕನ್ನಡಪ್ರಭವಾರ್ತೆ ಸಕಲೇಶಪುರ

ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್.ಡಿ ಸತೀಶ್, ಕೇಂದ್ರ ಸರ್ಕಾರ ಬಿಹಾರ ರಾಜ್ಯದ ಮಧುಬನಿಯಲ್ಲಿ ಏ ೨೪ ರಂದು ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಕ್ಲೇಮೆಟ್ ಆಕ್ಷನ್ ಸ್ಪೆಷಲ್ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲೆ ದ್ವಿತೀಯ ಸ್ಥಾನ ಪಡೆದಿರುವ ಗ್ರಾ.ಪಂಗೆ ೭೫ ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಯನ್ನು ಗೌರವಿಸಲಾಗಿದೆ. ಶೂನ್ಯ ಇಂಗಾಲ ಹೊರಸೂಸುವಿಕೆ ಹಾಗೂ ನವೀಕರಿಸಬಹುದಾದ ಇಂದನ ಬಳಕೆಯಲ್ಲಿನ ಗಮನಾರ್ಹ ಸಾಧನೆಗಾಗಿ ಪ್ರತಿಷ್ಠಿತ ಪುರಸ್ಕಾರ ಪಡೆಯುವ ಮೂಲಕ ಇತರೆ ಗ್ರಾ.ಪಂಗಳಿಗೆ ಮಾದರಿಯಾಗಿದೆ.

೧೧ ಗ್ರಾಮ ಪಂಚಾಯತ್ ಸದಸ್ಯರನ್ನು ಹೊಂದಿರುವ ಪಂಚಾಯತ್ ವ್ಯಾಪ್ತಿಯಲ್ಲಿ ೪೧೪೫ ಜನಸಂಖ್ಯೆ ಇದ್ದು, ಗ್ರಾ,ಪಂ ಕಚೇರಿಗೆ ಸೌರ ಛಾವಣಿ ಆಳವಡಿಸಲಾಗಿದ್ದು, ಸಂಪೂರ್ಣ ಕಚೇರಿಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಿಕೊಳ್ಳಲಾಗುತ್ತಿದ್ದು, ಅಂಚೆ ಕಚೇರಿ ಸಹ ಈ ಸೌರ ವಿದ್ಯುತ್‌ನಿಂದ ನಡೆಯುತ್ತಿದೆ. ಇದಲ್ಲದೆ ಸೌರ ತಂತಿ ಬೇಲಿ ಆಳವಡಿಕೆಗೆ ಹೆಚ್ಚಿನ ಒತ್ತು ನೀಡಲಾಗಿದ್ದರೆ. ಮಳೆ ಮಾಪನ ಯಂತ್ರ ಆಳವಡಿಸಿ ರೈತರಿಗೆ ನೆರವಾಗುತ್ತಿದೆ.

ಗ್ರಾ.ಪಂ ವ್ಯಾಪ್ತಿಯ ಹಲವೆಡೆ ೨೦ ಸೌರ ಹೈಮಾಸ್ಟ್ ಬೀದಿ ದೀಪಗಳನ್ನು ಆಳವಡಿಸಿ ಯಶಸ್ವಿಯಾಗಿ ನಿರ್ವಹಣೆ ನಡೆಸಲಾಗುತ್ತಿದೆ. ಅಲ್ಲದೆ ಗ್ರಾ.ಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳನ್ನು ೧೯೦ ಬೀದಿ ದೀಪಗಳು ಬೆಳಗುತ್ತಿದ್ದು, ಈ ಮೂಲಕ ವಿದ್ಯುತ್ ವೆಚ್ಚ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಗ್ರಾ.ಪಂ ಒತ್ತಾಸೆಯ ಮೇರೆಗೆ ಹಲವು ಕುಟುಂಬಗಳು ಸೌರ ವಿದ್ಯುತ್ ಉತ್ಪಾದಿಸುವ ಮೂಲಕ ವಿದ್ಯುತ್ ಅವಲಂಬನೆಯನ್ನು ಕಡಿಮೆಗೊಳಿಸಿವೆ. ಇದಲ್ಲದೆ ಗ್ರಾ.ಪಂ ವ್ಯಾಪ್ತಿಯ ದುರ್ಬಲ ಕುಟುಂಬಗಳಿಗೆ ಸೌರ ಲಾಟೀನ್‌ಗಳನ್ನು ವಿತರಿಸುವ ಮೂಲಕ ಇಂಗಾಲ ಹೊರಸೂಸುವಿಕೆಗೆ ಕಡಿವಾಣ ಹಾಕುವ ಯತ್ನ ನಡೆಸಲಾಗಿದೆ.

ಅಲ್ಲದೆ ಹಲವು ಕುಟುಂಬಗಳು ಸೌರ ವಿದ್ಯುತ್ ಮೂಲಕ ನೀರು ಬಿಸಿಮಾಡುವ ವ್ಯವಸ್ಥೆ, ಸೌರ ವಿದ್ಯುತ್ ಮೂಲಕ ಸಾಕಷ್ಟು ಬೆಳೆಗಾರರು ಹನಿ ನೀರಾವರಿ ವ್ಯವಸ್ಥೆ ಹೊಂದುವ ಮೂಲಕ ಗ್ರಾ.ಪಂ ಆಡಳಿತದ ಗುರಿಗೆ ಸಹಕಾರಿಯಾಗಿದ್ದಾರೆ. ಗ್ರಾ.ಪಂ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಸಂಪೂರ್ಣ ಯಶಸ್ವಿಯಾಗಿದ್ದು ಹಸಿ ಹಾಗೂ ಒಣ ಕಸ ವಿಂಗಡಣೆ ಮೂಲದಿಂದಲೇ ನಡೆಯುತ್ತಿದೆ.

ಜನರನ್ನು ಜಾಗ್ರತಿಗೊಳಿಸುವ ಕ್ರಿಯೆ:

ಗ್ರಾ.ಪಂ ಆಡಳಿತ ಸರಣಿ ಸಭೆಗಳ ಮೂಲಕ ಪ್ರತಿಜ್ಞೆ, ಜಾಥಾ, ಎಚ್ಚರಿಕೆ ಫಲಕಗಳನ್ನು ಆಳವಡಿಸುವ ಮೂಲಕ ಜನರನ್ನು ನಿಯಮಗಳ ಪಾಲನೆಗೆ ಅಣಿಗೊಳಿಸಲಾಗುತ್ತಿದೆ, ಪರಿಣಾಮ ಗ್ರಾ.ಪಂ ವ್ಯಾಪ್ತಿಯಲ್ಲಿ ಇಂಗಾಲ ಹೊರಸೂಸುವಿಕೆ ತಡೆಯುವ ಅಂಗವಾಗಿ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಬಳಕೆ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬಂದಿದೆ. ಶೇ ೧೦೦ ರಷ್ಟು ಅಡುಗೆ ಅನಿಲ ಬಳಕೆಯಾಗುತ್ತಿದೆ.

ಉತ್ತಮ ಆಡಳಿತ ಪುರಸ್ಕಾರ;

ಈಗಾಗಲೇ ಗ್ರಾ.ಪಂ ಆಡಳಿತ ಉತ್ತಮ ಆಡಳಿತ ವಿಭಾಗದಲ್ಲಿ ೨೦೨೩ ರಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದು, ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ರಾಜ್ಯಪಾಲರಿಂದ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳನ್ನು ಗೌರವಿಸಲಾಗಿದೆ. ಉತ್ತಮ ಸೌಲಭ್ಯ ವಿಭಾಗದಲ್ಲಿ ರಾಜ್ಯಮಟ್ಟದ ಮೊದಲ ಸ್ಥಾನ ಪಡೆದಿದ್ದ ಗ್ರಾ.ಪಂ ಆಡಳಿತದ ಮುಖ್ಯಸ್ಥರಾದ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯನ್ನು ದೆಹಲಿಯಲ್ಲಿ ೨೦೨೪ ನವಂಬರ್ ತಿಂಗಳಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪಧಿ ಮುರ್ಮು ಸನ್ಮಾನಿಸಿದ್ದರು. ಈ ಹಿನ್ನಲೆಯಲ್ಲಿ ೨೦೨೫ರ ಜನವರಿ ೨೬ ರಂದು ದೆಹಲಿಯ ಗಣರಾಜ್ಯೋತ್ಸವಕ್ಕೆ ಅಧ್ಯಕ್ಷ ದಂಪತಿಯನ್ನು ಆಹ್ವಾನಿಸಿ ಸನ್ಮಾನಿಸಲಾಗಿದೆ.

ನಾಗೇಶ್ ಕನಸು ನನಸು;

ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿದ್ದ ಬೈಕೆರೆ ನಾಗೇಶ್ ಇದೆ ಗ್ರಾ.ಪಂಗೆ ಸೇರಿದ ಗ್ರಾಮದವರಾಗಿದ್ದು, ಹುಟ್ಟೂರಿನ ಗ್ರಾ.ಪಂ ಯನ್ನು ಮಾದರಿಯಾಗಿ ಮಾಡಬೇಕು ಎಂಬ ಕನಸು ಹೊತ್ತು ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರು. ಇವರ ಕನಸನ್ನು ನನಸು ಮಾಡುವತ್ತ ಸಾಗಿರುವ ಪ್ರಸಕ್ತ ಅಧ್ಯಕ್ಷ ಎಸ್.ಡಿ ಸತೀಶ್ ಭ್ರಷ್ಟಚಾರ ಹಾಗೂ ಸ್ವಜನ ಪಕ್ಷಪಾತಕ್ಕೆ ಎಡೆಮಾಡಿ ಕೊಡೆದ ಕರ್ತವ್ಯ ನಿರ್ವಹಿಸುತ್ತಿರುವುದು ಹಾಗೂ ಹಲವು ಪುಸ್ತಕಗಳನ್ನು ಹೊರತರುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅಭಿವೃದ್ಧಿ ಅಧಿಕಾರಿ ಗಿರೀಶ್ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ಕಾರ್ಯದಿಂದಾಗಿ ಕಳೆದ ಎರಡು ವರ್ಷದಿಂದ ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಿರಡಹಳ್ಳಿ ಗ್ರಾ.ಪಂ ಹೆಸರು ಕೇಳಿ ಬರುತ್ತಿದೆ.

ಪ್ರಶಸ್ತಿ ಆಯ್ಕೆ ಹೇಗೆ:

ರಾಷ್ಟ್ರೀಯ ಪಂಚಾಯತ್ ಪುರಸ್ಕಾರಕ್ಕೆ ಮೊದಲ ಹಂತವಾಗಿ ತಾಲೂಕು ಪಂಚಾಯತ್ ಆಡಳಿತ ಜಿ.ಪಂ ಗೆ ಹೆಸರನ್ನು ಕಳುಹಿಸಲಾಗುತ್ತದೆ. ಜಿ.ಪಂ ಅಧಿಕಾರಿಗಳು ಜಿಲ್ಲಾ ಮಟ್ಟದಿಂದ ನಾಲ್ಕು ಗ್ರಾ.ಪಂ ಹೆಸರನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ತೀವ್ರ ನಿಗಾವಹಿಸಿ ಎರಡು ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿ ರಾಜ್ಯ ಸರ್ಕಾರ ಕಳುಹಿಸಿಕೊಟ್ಟ ಎರಡು ಪಂಚಾಯತ್‌ಗಳ ಮೌಲ್ಯಮಾಪನ ನಡೆಸುವ ಮೂಲಕ ಪ್ರಶಸ್ತಿಗೆ ಹೆಸರು ಸೂಚಿಸುತ್ತಾರೆ.

--------

ಜನರ ಸಹಕಾರ ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಿಂದ ಇಂತಹ ಸಾಧನೆ ಸಾಧ್ಯವಾಗಿದೆ. ಸೌರ ವಿದ್ಯುತ್‌ಗೆ ಹೆಚ್ಚಿನ ಅನುದಾನ ನೀಡಿದ್ದರೆ ಮತ್ತಷ್ಟು ಸಾಧನೆ ಮಾಡಬಹುದಿತ್ತು

ಎಸ್.ಡಿ ಸತೀಶ್. ಅಧ್ಯಕ್ಷರು. ಗ್ರಾ.ಪಂ ಬಿರಡಹಳ್ಳಿ.

------

ಗ್ರಾ.ಪಂ ಸ್ವಂತ ಅನುದಾನ ಹಾಗೂ ೧೫ ನೇ ಹಣಕಾಸಿನ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಇಂಗಾಲ ಹೊರಸೂಸುವಿಕೆಯನ್ನು ತಡೆಗಟ್ಟುವ ಯತ್ನ ನಡೆಸಲಾಗಿದೆ. ಇದನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ

ಗೀರಿಶ್. ಅಭಿವೃದ್ಧಿ ಅಧಿಕಾರಿ.

Share this article