ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು:
ರಾಜ್ಯದ ಬಹುತೇಕ ಪಂಚಾಯತಿಗಳ ಆಡಳಿತಾವಧಿ ಮುಗಿದಿದೆ. ತಿಂಗಳಾಂತ್ಯ ಅಥವಾ ಮುಂದಿನ ತಿಂಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ಮೀಸಲಾತಿಯೊಂದಿಗೆ ಆಯೋಗಕ್ಕೆ ವರದಿ ಸಲ್ಲಿಸುತ್ತೇವೆ. ಹೀಗಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೆಲ ಪಂಚಾಯತಿಗಳ ಮೇಲ್ದರ್ಜೆಯಿಂದಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕಾಗಿ ಬಂದಿದೆ. ಮೀಸಲಾತಿ ನಿರ್ಧರಿಸಿ ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಸಲಾಗುವುದು. ಆಯೋಗ 45 ದಿನಗಳಲ್ಲಿ ಚುನಾವಣೆ ನಡೆಸುತ್ತದೆ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಿಬ್ಬಂದಿ ಅದರಲ್ಲಿ ನಿರತರಾಗಿದ್ದಾರೆ. ಹೀಗಾಗಿ ಕಾಲಾವಕಾಶ ಕೇಳಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಮನೆ ಮನೆಗೆ ಇ-ಸ್ವತ್ತು:
ಇ-ಸ್ವತ್ತಿಗೆ ಸಂಬಂಧಿಸಿ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ಇದ್ದು ಸಾಕಷ್ಟು ದೂರುಗಳು ಬರುತ್ತಿವೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆ ಮುಗಿದ ನಂತರ ಗ್ರಾಮೀಣ ಭಾಗದ ಜನರ ಮನೆ ಬಾಗಿಲಿಗೇ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗುವುದು. ಬಿ ಖರಾಬು ಜಮೀನು ಬಳಸಿಕೊಂಡು ಲೇಔಟ್ ನಿರ್ಮಿಸಿದ್ದರೆ ಅಲ್ಲಿ ಇ-ಸ್ವತ್ತು ನೀಡುವುದಿಲ್ಲ. ಇದಕ್ಕೆ ಕಂದಾಯ ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಬೇಕಾಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ತಾಂತ್ರಿಕ ನೆಪವೊಡ್ಡಿ 2,186 ಕೋಟಿ ರು. ನೀಡದ ಕೇಂದ್ರ:
ಕರ್ನಾಟಕದ ಗ್ರಾಪಂಗಳಿಗೆ ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬರಬೇಕಾದ 2186.20 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಹಣ ಬಿಡುಗಡೆ ಮಾಡುವುದಿಲ್ಲ ಎನ್ನುವುದು ಸರಿಯಲ್ಲ. ರಾಜ್ಯದ ಸಂಸತ್ ಸದಸ್ಯರು ಒಕ್ಕೂರಲಿನಿಂದ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಈಶ್ವರ್ ಖಂಡ್ರೆ ಹೇಳಿದರು.
ಒಂದು ದೇಶ ಒಂದು ಚುನಾವಣೆ ಎನ್ನುತ್ತಿರುವ ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ತೋರುತ್ತಿದೆ. ದೇಶವೇ ತಮ್ಮ ಕೈಗೊಂಬೆ ಆಗಿರಬೇಕು ಎಂದು ಬಯಸುತ್ತಿದೆ. ಈ ವಿಚಾರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ತನ್ನ ನಿಲುವು ತಿಳಿಸಿದೆ. ಪಕ್ಷದ ನಿಲುವೇ ನನ್ನ ನಿಲುವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬರದಲ್ಲೂ ಕುಡಿವ ನೀರಿನ ಪೂರೈಕೆಗೆ ಬದ್ಧ: ಖಂಡ್ರೆ
ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಪೂರೈಸಲು ಹಣಕಾಸು ಕೊರತೆ ಇಲ್ಲ. ಈಗಾಗಲೇ 117 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರು. ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಹೀಗಾಗಿ ಬರ ಪರಿಸ್ಥಿತಿ ನಡುವೆಯೂ ನೀರು ಪೂರೈಕೆಗೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಅದೇ ರೀತಿ ಜನರೂ ನೀರು ಪೋಲು ಮಾಡದೆ ಬಳಕೆ ಮಾಡಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.ಗುಳೆ ಹೋಗದಂತೆ ಮನವಿ:
ರಾಜ್ಯ ಸರ್ಕಾರ ಆರ್ಥಿಕ ಹೊರೆ ನಡುವೆಯೂ ಮನರೇಗಾ ಬದಲು ಜಾರಿ ಮಾಡಿರುವ ವಿ-ಬಿಜಿ ಗ್ರಾಮ್‌ಜಿಯನ್ನು ಜಾರಿಗೆ ತಂದಿದೆ. ಆ ಮೂಲಕ ಬಡವರು, ದಲಿತರು, ವಂಚಿತರು, ಗ್ರಾಮೀಣ ಬಡವರ ಹಿತ ಕಾಯಲು ನಿರ್ಧರಿಸಿದ್ದೇವೆ. ಹೀಗಾಗಿ ಗ್ರಾಮಗಳಲ್ಲೇ ಉದ್ಯೋಗ ಸೃಷ್ಟಿಯಾಗಲಿದ್ದು ಯಾರೂ ಗುಳೆ ಹೋಗುವ ಅಗತ್ಯವಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.