ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳಿಂದ ಸ್ಥಳೀಯ ಸರ್ಕಾರದ ಉಳಿವಿಗಾಗಿ ಪ್ರತಿಭಟನೆ: ಕೋಟ ಭೇಟಿ
ಕನ್ನಡಪ್ರಭ ವಾರ್ತೆ ಮಣಿಪಾಲಪಂಚಾಯತ್ ರಾಜ್ ವ್ಯವಸ್ಥೆಯನ್ನು ಉಳಿಸಲು ಚುನಾಯಿತ ಪ್ರತಿನಿಧಿಗಳ ಸಂಘಟಿತ ಹೋರಾಟದಿಂದ ಮಾತ್ರ ಸಾಧ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಮಂಗಳವಾರ ಇಲ್ಲಿನ ರಜತಾದ್ರಿಯ ಜಿಲ್ಲಧಿಕಾರಿ ಕಚೇರಿ ಸಂಕೀರ್ಣದ ಬಳಿ ವಿವಿಧ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ನಡೆಸಿದ ಸ್ಥಳೀಯ ಸರ್ಕಾರದ ಉಳಿವಿಗಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪಂಚಾಯಿತಿ ಪ್ರತಿನಿಧಿಗಳು ಮಾಡಿದ ಹಕ್ಕೊತ್ತಾಯಗಳಿಗೆ ಪ್ರತಿಕ್ರಿಯೆ ನೀಡಿದರು.ಇಂದು ಸರ್ಕಾರ ಹೊರಡಿಸುವ ಸುತ್ತೋಲೆ, ಆದೇಶಗಳು ಪಂಚಾಯತ್ ರಾಜ್ ವ್ಯವಸ್ಥೆಯ ಒಂದೊಂದೇ ಕಲ್ಲುಗಳನ್ನು ಬೀಳಿಸುತ್ತಿದೆ. ಇದನ್ನು ತಡೆದು ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕಾದರೆ, ಸ್ಥಳೀಯವಾಗಿ ಗ್ರಾಮ ಸರ್ಕಾರಗಳು ಬಲವಾಗಬೇಕು. ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ಧ್ವನಿ ಎತ್ತಬೇಕು. ಈ ಹೋರಾಟಕ್ಕೆ ನನ್ನ ವ್ಯಾಪ್ತಿಯಲ್ಲಿ ಆಗುವ ಎಲ್ಲ ಸಹಕಾರಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಇಂದಿನ ಪ್ರತಿಭಟನೆಯು ಸಂವಿಧಾನದತ್ತ ಗ್ರಾಮಸಭಾದ ಹಕ್ಕು ಮತ್ತು ಸ್ಥಳೀಯ ಸರ್ಕಾರದ ಅಧಿಕಾರವನ್ನು ಎತ್ತಿಹಿಡಿಯುವುದಕ್ಕಾಗಿ. ಇಂದು ನಮ್ಮ ಹಕ್ಕೊತ್ತಾಯಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಕಳುಹಿಸಿದ್ದೇವೆ ಎಂದರು.ಅಲ್ಲದೇ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಸಿಬ್ಬಂದಿ ನೇಮಕಾತಿ ಮತ್ತು ಏಕ ವಿನ್ಯಾಸ ನಕ್ಷೆಯಲ್ಲಿ ಇರುವ ಗೊಂದಲಗಳ ಕುರಿತಾಗಿ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲು ಒಕ್ಕೂಟ ನಿರ್ಧರಿಸಿರುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದ ವಿವಿಧ ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳಾದ ಬಿ. ದಿನಕರ ಶೆಟ್ಟಿ ಬಸ್ರೂರು, ಬಸವ ಪಿ. ಮೊಗವೀರ ಹಕ್ಲಾಡಿ, ಎಚ್. ಪ್ರಕಾಶ್ ಶೆಟ್ಟಿ ಯಡ್ತಾಡಿ, ಇಂದಿರಾ ಶೆಟ್ಟಿ ಮೊಳಹಳ್ಳಿ, ಚಂದ್ರಿಕಾ ಮೊಳಹಳ್ಳಿ, ಮೋಹನ್‌ಚಂದ್ರ ಉಪ್ಪುಂದ, ರಮೇಶ್ ಶೆಟ್ಟಿ ಕಾಳಾವರ, ಜಿ. ಮಂಜುನಾಥ್ ಹಟ್ಟಿಯಂಗಡಿ, ಉದಯಕುಮಾರ್ ತಲ್ಲೂರು ಮುಂತಾದವರು ಮಾತನಾಡಿದರು.ಈ ಹಕ್ಕೊತ್ತಾಯದ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಉಡುಪಿ, ಹೆಬ್ರಿ, ಬ್ರಹ್ಮಾವರ, ಕಾಪು ತಾಲೂಕುಗಳ ಗ್ರಾಮ ಪಂಚಾಯಿತಿಗಳಿಂದ ಸುಮಾರು 300ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯದ ಸದಸ್ಯರಾದ ಶ್ರೀನಿವಾಸ ಗಾಣಿಗ ಅವರು ನಿರ್ವಹಿಸಿದರು.