ಧಾರವಾಡ:
ರಾಜ್ಯದಲ್ಲಿ ಸರ್ಕಾರಗಳು ಮತ್ತು ಮುಖ್ಯಮಂತ್ರಿಗಳು ಬದಲಾಗಬಹುದು. ಆದರೆ, ಪಂಚಮಸಾಲಿ ಸಮುದಾಯಕ್ಕೆ ಬೇಕಿರುವ 2ಎ ಮೀಸಲಾತಿ ಹೋರಾಟದ ಗುರಿ ಮಾತ್ರ ಬದಲಾಗದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಮೂರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದು, ತಾರ್ಕಿಕ ಅಂತ್ಯ ಹಾಡುವ ವರೆಗೂ ವಿರಮಿಸುವುದಿಲ್ಲ. ತಾವು ಹಾಗೂ ಸಮುದಾಯ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದ್ದೇವೆ ಎಂದರು.
ಜೋಯಿಡಾ ತಾಲೂಕಿನ ಉಳವಿಯಲ್ಲಿ ಮೇ 23ರಂದು ಮಧ್ಯಾಹ್ನ 3ಕ್ಕೆ ಸಮುದಾಯದ ಮುಖಂಡರನ್ನು ಒಳಗೊಂಡ ಸಂಕಲ್ಪ ಸಭೆ ಮಾಡಲಾಗುತ್ತಿದೆ. ಮರು ದಿನ ಬೆಳಗ್ಗೆ ಉಳವಿ ಚೆನ್ನಬಸವಣ್ಣನ ದೇವಸ್ಥಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕೂಡ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಜಿಲ್ಲೆಗಳಿಂದ ಸಮುದಾಯದ ಪದಾಧಿಕಾರಿಗಳು, ಹೋರಾಟಗಾರರು ಸಭೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ ಸ್ವಾಮೀಜಿ, ಮುಂದಿನ ಹೋರಾಟದ ಕುರಿತು ಸಲಹೆ -ಸೂಚನೆ ನೀಡಬೇಕು. ನಂತರ ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಹಾಕಲಾಗುವುದು ಎಂದು ತಿಳಿಸಿದರು.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ನಾವು ಮೀಸಲಾತಿ ಹೋರಾಟ ಮಾಡಿದ್ದೇವೆ. ಈಗ ಕಾಂಗ್ರೆಸ್ ಸರ್ಕಾರ ಬಂದಾಗಲೂ 12 ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಿದ್ದೇವೆ. ಇಷ್ಟಲಿಂಗ ಪೂಜೆ ಮಾಡುವುದರ ಮೂಲಕ ಹೋರಾಟ ಮಾಡಿದ್ದೇವೆ. ಇದೊಂದು ವಿಭಿನ್ನ ಹೋರಾಟವಾಗಿತ್ತು ಎಂದ ಅವರು, ಮಾರ್ಚ್ 12 ರಂದು ಕಲಬುರ್ಗಿಯಲ್ಲಿ ಹೋರಾಟ ಮಾಡಿದ್ದೆವು. ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹೋರಾಟವನ್ನು ಸ್ಥಗಿತಗೊಳಿಸಲಾಯಿತು. ಈಗ ಮತ್ತೆ 18 ಜಿಲ್ಲೆಗಳಲ್ಲಿ ಮೀಸಲಾತಿ ಸಂಬಂಧ ಹೋರಾಟ ಮಾಡಲು ಮುಂದಾಗಿದ್ದೇವೆ. ಜೂನ್ ತಿಂಗಳಲ್ಲಿ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಬೃಹತ್ ಸಭೆ ನಡೆಸಿ ಮಳೆಗಾಲದ ಅಧಿವೇಶನದಲ್ಲಿ ಮೀಸಲಾತಿ ವಿಷಯ ಚರ್ಚೆಯಾಗಿ ಅಂತಿಮ ರೂಪುರೇಷೆ ಸಿಗುವಂತೆ ನೋಡಿಕೊಳ್ಳಬೇಕಿದೆ ಎಂದರು.
ನಮ್ಮ ಸಮಾಜದ ಎಲ್ಲ ಜನಪ್ರತಿನಿಧಿಗಳು ಮೀಸಲಾತಿ ಸಂಬಂಧ ಮಾತನಾಡಬೇಕು. ಮುಂದಿನ ತಿಂಗಳು ಮಳೆಗಾಲದ ಅಧಿವೇಶನ ನಡೆಯಬಹುದು. ಆಗ ನಮ್ಮ ಸಮಾಜದ ಶಾಸಕರು ಮೀಸಲಾತಿ ಸಂಬಂಧ ಮಾತನಾಡಬೇಕು. ಈಗಾಗಲೇ ಶಾಸಕರಾದ ಬಸನಗೌಡ ಯತ್ನಾಳ ಹಾಗೂ ಅರವಿಂದ ಬೆಲ್ಲದ ಧ್ವನಿ ಎತ್ತಿದ್ದಾರೆ. ಅದೇ ರೀತಿ ಉಳಿದ ಶಾಸಕರೂ ಮಾತನಾಡಬೇಕು. ಇದುವರೆಗೂ ನಾವು ಶಾಂತ ರೀತಿಯ ಹೋರಾಟ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಹೋರಾಟ ಮಾಡಬೇಕು ಎಂಬುದನ್ನು ಉಳವಿಯ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದರು.