ಪಂಚಮಸಾಲಿ ಮೀಸಲಾತಿ: ಡಿಸೆಂಬರ್‌ 10ಕ್ಕೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ

KannadaprabhaNewsNetwork |  
Published : Nov 17, 2024, 01:19 AM IST
44 | Kannada Prabha

ಸಾರಾಂಶ

ಡಿ. 9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ಸಂತಾಪ ಸೂಚಕ ನಡೆಯುವುದರಿಂದ ಅದರ ಮರುದಿನ ಅಂದರೆ ಡಿ. 10ಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ:

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಡಿ. 10ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. 5 ಲಕ್ಷಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಳ್ಳಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಪಂಚಮಸಾಲಿ ಸಮಾಜದ ಮುಂದಿನ ಹೋರಾಟದ ಕುರಿತು ಶನಿವಾರ ನಡೆದ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಹೆದ್ದಾರಿ ತಡೆ, ವಿಧಾನಸೌಧಕ್ಕೆ ಮುತ್ತಿಗೆ, ರಸ್ತೆ ತಡೆ ಸೇರಿದಂತೆ ಎಲ್ಲ ಬಗೆಯ ಹೋರಾಟ ನಡೆಸಲಾಗಿದೆ. ಆದರೂ ಇನ್ನು ಸಿಗುತ್ತಿಲ್ಲ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀತಿ ಸಂಹಿತೆ ನೆಪ ಮಾಡಿಕೊಂಡು ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಡಿ. 9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ಸಂತಾಪ ಸೂಚಕ ನಡೆಯುವುದರಿಂದ ಅದರ ಮರುದಿನ ಅಂದರೆ ಡಿ. 10ಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಒಂದು ವೇಳೆ ಅಧಿವೇಶನದ ದಿನ ಮುಂದೂಡಿದರೆ, ಯಾವಾಗ ಪ್ರಾರಂಭವಾಗುತ್ತದೆಯೋ ಅದರ ಮರುದಿನ ಮುತ್ತಿಗೆ ಹಾಕಲಾಗುವುದು. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಪ್ರತಿ ಹಳ್ಳಿಯಿಂದ ಕನಿಷ್ಠ 5 ಟ್ರ್ಯಾಕ್ಟರ್‌ನಷ್ಟಾದರೂ ಜನರು ಬರಬೇಕು. ಅಂದಿನ ಮುತ್ತಿಗೆಗೆ ಕನಿಷ್ಠ ಪಕ್ಷ 5 ಲಕ್ಷ ಜನರು ಸೇರಬೇಕು. ಇದೀಗ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ಹೀಗಾಗಿ ಎಲ್ಲರೂ ಪಾಲ್ಗೊಳ್ಳಬೇಕು. ಪೊಲೀಸರು ಬರಲು ಅಡ್ಡಿಪಡಿಸಿದರೆ, ಎಲ್ಲಿ ನಿಲ್ಲಿಸುತ್ತಾರೋ ಅಲ್ಲೇ ರಸ್ತೆ ತಡೆ ನಡೆಸಬೇಕು ಎಂದು ಕರೆ ಕೊಟ್ಟರು.

ಸರ್ಕಾರ ಈ ಮುತ್ತಿಗೆಗೆ ಅವಕಾಶ ಕೊಡದೇ ಡಿ. 10ರೊಳಗೆ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಹೋರಾಟದ ವೇಳೆ ಏನಾದರೂ ಅನಾಹುತವಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಸಮಾಜದ ಕಾಂಗ್ರೆಸ್‌ ಶಾಸಕರು ಹೋರಾಟದ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂಬ ಬೇಸರ ಜನರಲ್ಲಿದೆ. ಅವರು ಜನಪ್ರತಿನಿಧಿಯಾಗಿರುವುದು ಸಮಾಜದಿಂದ ಎಂಬುದನ್ನು ಮರೆಯಬಾರದು. ಇನ್ನು ಮುಂದಾದರೂ ಸದನದಲ್ಲಿ ಪಂಚಮಸಾಲಿ ಹೋರಾಟದ ಬಗ್ಗೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಸಿ.ಸಿ. ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ಎಸ್‌.ಎಸ್‌. ನಾಗನಗೌಡರ, ರಾಜಶೇಖರ ಮೆಣಸಿನಕಾಯಿ, ನಿಂಗಣ್ಣ ಕರಿಕಟ್ಟಿ, ಶಶಿಶೇಖರ ಡಂಗನವರ, ಶಶಿಧರ ಕೊಟಗಿ, ಶ್ರೀಕಾಂತ ಗುಳೇದ, ವೈ.ವಿ. ಮುದಿಗೌಡರ, ಅನಿತಾ ಪಾಟೀಲ, ಜೆ.ಜಿ. ದ್ಯಾಮನಗೌಡರ ಸೇರಿದಂತೆ ಹಲವರಿದ್ದರು.ಅಹೋರಾತ್ರಿ ಧರಣಿ

ಸದನದ ಹೊರಗೆ ನೀವು ಹೋರಾಟ ನಡೆಸಿ ಸದನದೊಳಗೆ ಅಹೋರಾತ್ರಿ ಧರಣಿ ನಾನು ನಡೆಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸರ್ಕಾರದ ಅವಧಿಯಲ್ಲೂ ನಾನು ಸಾಕಷ್ಟು ಹೋರಾಟ ನಡೆಸಿದ್ದೇನೆ. ಈಗಲೂ ನಡೆಸಲು ಸಿದ್ಧ. ಚಳಿಗಾಲದ ಅಧಿವೇಶನದ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಅಂದು ನೀವು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರೆ, ತಾವು ಸದನದೊಳಗೆ ಅಹೋರಾತ್ರಿ ಧರಣಿ ನಡೆಸುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ