ಬಡವರಿಗೆ ದಾನದಿಂದ ಸಂತೃಪ್ತ: ಉದ್ಯಮಿ ಕನ್ಯಾನ ಸದಾಶಿವ ಕೆ. ಶೆಟ್ಟಿ

KannadaprabhaNewsNetwork |  
Published : Nov 17, 2024, 01:19 AM IST
ಕನ್ಯಾನ ಸದಾಶಿವ ಶೆಟ್ಟಿಗೆ ಅಭಿನಂದನೆ | Kannada Prabha

ಸಾರಾಂಶ

ವೇದಿಕೆಯಲ್ಲಿದ್ದ ಅತಿಥಿಗಳು ವ್ಯವಸ್ಥಿತವಾಗಿ ಒಂದೊಂದು ವಸ್ತುಗಳನ್ನು ಸದಾಶಿವ ಶೆಟ್ಟಿ ಅವರಿಗೆ ಅರ್ಪಿಸಿ, ಗೌರವ ಸಲ್ಲಿಸಿದರು. ಈ ಸಂದರ್ಭ ಸೌಮ್ಯಾ ಅವರ ಹಾಡಿನೊಂದಿಗೆ ಮಂಜುಶ್ರೀ ಚಂದ್ರಹಾಸ್ ಶೆಟ್ಟಿ ಅವರು ಆರತಿ ಬೆಳಗಿದರು. ಬಳಿಕ ಸತೀಶ್ ಶೆಟ್ಟಿ ಪಟ್ಲ ಅಭಿನಂದನಾ ಗೀತೆಯ ಮೂಲಕ ಗೌರವ ಸಲ್ಲಿಸಿದರು. ಬೃಹತ್ ಗಾತ್ರದ ಹೂವಿನ ಹಾರ ಹಾಗೂ ಆಪಲ್ ಹಾರ ಹಾಕಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಮಾಜ ಸೇವೆ ಮಾಡಲು ಬದುಕಿನಲ್ಲಿ ಸಿಕ್ಕಿದ ಯೋಗ ಎಂದು ಭಾವಿಸಿದ್ದೇನೆ. ಬಡವರಿಗೆ ಮಾಡುವ ದಾನದಿಂದ ತೃಪ್ತನಾಗಿದ್ದೇನೆ. ನನ್ನ ಸಾಧನೆಗೆ ಸಮಾಜದ ಸರ್ವರ ಸಹಕಾರ ಇದೆ ಎಂದು ಉದ್ಯಮಿ, ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಕನ್ಯಾನ ಸದಾಶಿವ ಕೆ. ಶೆಟ್ಟಿ ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿಯವರ ವ್ಯಕ್ತಿತ್ವದ ಪೂಜೆ ನಡೆದಿದೆ. ದೇವರು ಕೊಟ್ಟ ಸಂಪತ್ತನ್ನು ಭಗವಂತನ ಪ್ರಸಾದ ಎಂದು ಊರಿಗೆ ಹಂಚುವ ಅವರ ಮನಸ್ಸು ವಿಶಾಲವಾದುದು ಎಂದು ಬಣ್ಣಿಸಿದರು.

ಪಟ್ಲ ಫೌಂಡೇಷನ್‌ನ ಪ್ರಧಾನ ಸಂಚಾಲಕ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಸದಾಶಿವ ಶೆಟ್ಟಿಯವರು ೧೫೦ ಕೋಟಿ ರು.ಗಿಂತಲೂ ಅಧಿಕ ಮೊತ್ತವನ್ನು ಸಮಾಜಕ್ಕೆ ದೇಣಿಗೆಯಾಗಿ ನೀಡಿದ್ದಾರೆ ಎಂದರು.ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಅಪಾರ ಸಂಪತ್ತು ಇದ್ದರೂ ಅದನ್ನು ದಾನ ಮಾಡುವ ಮನಸ್ಸು ಎಲ್ಲರಿಗೂ ಇರುವುದಿಲ್ಲ. ದಾನ ಮಾಡಿದಾಗ ಸಮಾಜ ಅವರನ್ನು ಗುರುತಿಸುತ್ತದೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳೇಪಾಡಿ, ಉದ್ಯಮಿಗಳಾದ ಸಿ.ಎ. ದಿವಾಕರ ರಾವ್, ಕೆ.ಎಂ. ಶೆಟ್ಟಿ, ಸುದೇಶ್ ಕುಮಾರ್ ರೈ, ಪಟ್ಲ ಫೌಡೇಷನ್‌ನ ಪದಾಧಿಕಾರಿಗಳಾದ ಬಾಳ ಜಗನ್ನಾಥ ಶೆಟ್ಟಿ ಮತ್ತಿತರರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ನಿರೂಪಿಸಿದರು. ಪಟ್ಲ ಫೌಂಡೇಶನ್‌ನ ಸರ್ವ ಘಟಕಗಳ ವತಿಯಿಂದ ಸದಾಶಿವ ಶೆಟ್ಟಿ ಅವರನ್ನು ಗೌರವಿಸಲಾಯಿತು.

ವಿನೂತನ ಶೈಲಿಯಲ್ಲಿ ಸನ್ಮಾನ

ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಚಂದ್ರಹಾಸ ಶೆಟ್ಟಿ ಅವರ ಪರಿಕಲ್ಪನೆಯಲ್ಲಿ ವಿನೂತನವಾಗಿ ಸನ್ಮಾನಿಸಲಾಯಿತು. ಸನ್ಮಾನದ ಪೇಟ, ಶಾಲು, ಸ್ಮರಣಿಕೆ, ತೈಲಚಿತ್ರವನ್ನ ಒಳಗೊಂಡ ವಸ್ತುಗಳನ್ನು ಸಭಾಂಗಣದ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು. ಜತೆಗೆ ಗೆಂದಾಳೆ ಸಿಯಾಳ, ಅಡಕೆ ಗೊನೆ, ತರಕಾರಿ, ಹಣ್ಣು ಹಂಪಲು, ಅಕ್ಕಿ ಹಾಗೂ ಭತ್ತದ ಮುಡಿ, ಹಿಂಗಾರ ಮೊದಲಾದ ಬುಟ್ಟಿಗಳನ್ನು ೬ ಜೊತೆ ಪತಾಕೆ, ಬಣ್ಣದ ಕೊಡೆ, ಕೊಂಬು, ವಾಲಗದೊಂದಿಗೆ ವೇದಿಕೆಗೆ ಮೆರವಣಿಗೆ ಮೂಲಕ ತರಲಾಯಿತು.

ವೇದಿಕೆಯಲ್ಲಿದ್ದ ಅತಿಥಿಗಳು ವ್ಯವಸ್ಥಿತವಾಗಿ ಒಂದೊಂದು ವಸ್ತುಗಳನ್ನು ಸದಾಶಿವ ಶೆಟ್ಟಿ ಅವರಿಗೆ ಅರ್ಪಿಸಿ, ಗೌರವ ಸಲ್ಲಿಸಿದರು. ಈ ಸಂದರ್ಭ ಸೌಮ್ಯಾ ಅವರ ಹಾಡಿನೊಂದಿಗೆ ಮಂಜುಶ್ರೀ ಚಂದ್ರಹಾಸ್ ಶೆಟ್ಟಿ ಅವರು ಆರತಿ ಬೆಳಗಿದರು. ಬಳಿಕ ಸತೀಶ್ ಶೆಟ್ಟಿ ಪಟ್ಲ ಅಭಿನಂದನಾ ಗೀತೆಯ ಮೂಲಕ ಗೌರವ ಸಲ್ಲಿಸಿದರು. ಬೃಹತ್ ಗಾತ್ರದ ಹೂವಿನ ಹಾರ ಹಾಗೂ ಆಪಲ್ ಹಾರ ಹಾಕಿ ಗೌರವಿಸಲಾಯಿತು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು