ಹುಬ್ಬಳ್ಳಿಯಲ್ಲೂ ಪಂಚಮಸಾಲಿ ಹೋರಾಟದ ಕಿಚ್ಚು

KannadaprabhaNewsNetwork | Published : Dec 13, 2024 12:49 AM

ಸಾರಾಂಶ

ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಲಾಠಿಚಾರ್ಜ್‌ ಮೂಲಕ ಬೆದರಿಸಲು ಮುಂದಾಗಿದೆ. ಲಾಠಿ ಚಾರ್ಜ್ ಮಾಡಿದ ಪೊಲೀಸ್‌ ಅಧಿಕಾರಿಗಳನ್ನು ಈ ಕೂಡಲೇ ಅಮಾನತು ಮಾಡಬೇಕು. ಸಮುದಾಯಕ್ಕೆ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು.

ಹುಬ್ಬಳ್ಳಿ:

ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿರುವುದನ್ನು ಖಂಡಿಸಿ ಗುರುವಾರ ನಗರದ ವಿವಿಧೆಡೆ ಸಮಾಜ ಬಾಂಧವರು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಉಣಕಲ್‌ ಕೆರೆಯ ಮುಂಭಾಗ, ಇಂಡಿ ಪಂಪ್‌ ಹಾಗೂ ಗೋಕಲ ರಸ್ತೆಯ ಮಂಜುನಾಥ ನಗರ ಕ್ರಾಸ್‌, ಗೋಕುಲ ಗ್ರಾಮದ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಯಿತು.ಇಲ್ಲಿನ ಉಣಕಲ್ಲ ಕೆರೆಯ ಮುಂಭಾಗದಲ್ಲಿ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯ ಮೇಲೆ ಟೈರ್‌ಗೆ ಬೆಂಕಿ ಹಚ್ಚಿ, 10 ನಿಮಿಷಕ್ಕೂ ಹೆಚ್ಚುಕಾಲ ರಸ್ತೆ ಬಂದ್‌ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಈ ವೇಳೆ ಮಾತನಾಡಿ ಮುನೇನಕೊಪ್ಪ, ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಲಾಠಿಚಾರ್ಜ್‌ ಮೂಲಕ ಬೆದರಿಸಲು ಮುಂದಾಗಿದೆ. ಲಾಠಿ ಚಾರ್ಜ್ ಮಾಡಿದ ಪೊಲೀಸ್‌ ಅಧಿಕಾರಿಗಳನ್ನು ಈ ಕೂಡಲೇ ಅಮಾನತು ಮಾಡಬೇಕು. ಸಮುದಾಯಕ್ಕೆ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು. ಒಂದು ವೇಳೆ ಸರ್ಕಾರ ಹೋರಾಟಕ್ಕೆ ಬಗ್ಗದೆ ಹೋದರೆ ಮತ್ತೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿ.ಜಿ. ದ್ಯಾವನಗೌಡ್ರ, ಎಸ್.ಕೆ. ಕೋಟ್ರೇಶ, ಜಗದೀಶ ಬಳ್ಳಾರಿ, ವಿನೋದ ಮಲ್ನಾಡಿ, ಬಸವರಾಜ ಬಳಿಗಾರ, ಸಿದ್ದೇಶ ಕಬಾಡರ, ಶಿವಬಸಪ್ಪ ಗಚ್ಚಿನವರ, ಚಂದ್ರಶೇಖರ ಹಾದಿಮನಿ, ಪ್ರಮೋದ ಅಲಾಡಿ, ಶಿವಾನಂದ ಮಾಯಕಾರ, ಪ್ರವೀಣ ಬಳ್ಳಾರಿ, ಕಲ್ಲಪ್ಪ ಶಿಶುವಿನಹಳ್ಳಿ, ಭೀಮರಾಯಪ್ಪ ರಾಯಾಪುರ, ಸಂತೋಷ ಮಾರಡಗಿ, ಸಂತೋಷ ಕಂಟೆಪ್ಪಗೌಡರ, ವೆಂಕನಗೌಡ್ರ ಕಂಟೆಪ್ಪಗೌಡರ, ಲಕ್ಷ್ಮಿ ಬಿಜ್ಜರಗಿ, ಮಹಾಲಕ್ಷ್ಮಿ ಸಣ್ಣಗೌಡರ, ಚಂದ್ರು ಮಲಕಣ್ಣವರ ಪಾಲ್ಗೊಂಡಿದ್ದರು.

ಬಿಜೆಪಿಯಿಂದ:

ಹಳೇ ಹುಬ್ಬಳ್ಳಿಯ ಇಂಡಿ ಪಂಪ್‌ ವೃತ್ತದಲ್ಲಿ ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ ಹುಬ್ಬಳ್ಳಿ-ಕಾರವಾರ ರಸ್ತೆ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಾಜು ಜರತಾರಘರ, ಸತೀಶ ಶೇಜವಾಡಕರ, ಮಂಜುನಾಥ ಕಾಟಕರ, ಶಿವಾನಂದಪ್ಪ ಹೊಸೂರ, ತೋಟಪ್ಪ ನಿಡಗುಂದಿ, ಅನುಪ ಬಿಜವಾಡ, ಶಿವಯ್ಯ ಹಿರೇಮಠ, ವಿನಾಯಕ ಲದವಾ, ಎಂ.ಸಿ. ಹೊರಡಿ, ಲೋಕೇಶ ಗುಂಜಾಳ, ಸಂಜು ಬುಗಡಿ, ರಾಜು ಕೊರ್ಯಾಣಮಠ, ಲಕ್ಷ್ಮೀಕಾಂತ ಘೋಡಕೆ, ನೀಲಕಂಠ ತಡಸದಠ ಸೇರಿದಂತೆ ಹಲವರಿದ್ದರು.

ಗೋಕುಲ ರಸ್ತೆ:

ಇಲ್ಲಿನ ಗೋಕುಲ ರಸ್ತೆಯ ಮಂಜುನಾಥ ನಗರದ ಮುಖ್ಯ ರಸ್ತೆಯನ್ನು ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಕೆಲಕಾಲ ಬಂದ್‌ ಮಾಡಿ ಪ್ರತಿಭಟಿಸಿದರು. ಪ್ರತಿಭಟನಾ ನಿರತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿಯ ಮೆರವಣಿಗೆ ನಡೆಸಿದರು. ಈ ವೇಳೆ ಸಮಾಜದ ನೂರಾರು ಜನರು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Share this article