ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿ ಒದಗಿಸಬೇಕೆಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡ ಹೋರಾಟದಲ್ಲಿ ನಡೆದ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಅವರ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಎಪಿಎಂಸಿ ಶ್ರೀ ಗಣೇಶ ದೇವಸ್ಥಾನದಿಂದ ಕಪ್ಪು ಪಟ್ಟಿ ಕಟ್ಟಿಕೊಂಡು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದಲ್ಲಿ ರಾಸ್ತಾ ರೋಕೋ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೋರಾಟಗಾರರ ಮೇಲೆ ಪೊಲೀಸರನ್ನು ಬಿಟ್ಟು ಲಾಠಿಚಾರ್ಜ್ ಮಾಡಿದೆ. ಇದರಿಂದ ಪಂಚಮಸಾಲಿ ಸಮುದಾಯ ಮತ್ತಷ್ಟು ಕೆರಳುವಂತೆ ಮಾಡಿದ್ದಲ್ಲದೇ ಇದು ವೀರಶೈವ ಲಿಂಗಾಯತ ಸಮಾಜ ವಿರೋಧಿ. ಈ ಘಟನೆಯನ್ನು ಬಲವಾಗಿ ಖಂಡಿಸುವುದಾಗಿ ತಿಳಿಸಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ಜಯಮೃತ್ಯುಂಜಯ ಶ್ರೀಗಳು 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಬಾಂಧವರು ಸೇರಿಕೊಂಡು ಪಾದಯಾತ್ರೆ ಕೈಗೊಂಡಿದ್ದರು. ಈ ವೇಳೆ ನಮ್ಮ ಸರ್ಕಾರ ಹೋರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಮೂಲಕ 2ಡಿ ಮೀಸಲಾತಿ ನೀಡಿ ಆದೇಶಿಸಿತು. ಮುಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಕೆಲ ಚೇಲಾಗಳಿಂದ ನ್ಯಾಯಾಲದಯಲ್ಲಿ ತಡೆಯಾಜ್ಞೆ ತರುವ ಮೂಲಕ ಪಂಚಮಸಾಲಿ ಸಮಾಜಕ್ಕೆ ಅನ್ಯಾಯ ಮಾಡಿದೆ. ಪ್ರಸ್ತುತ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಕೇವಲ ಅನುಷ್ಠಾನಗೊಳಿಸಬೇಕಾಗಿದೆ. ಆದರೆ, ಈ ಸರ್ಕಾರ ಮಾಡಲು ಸಾಧ್ಯವಿಲ್ಲದೇ ಶ್ರೀಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹತ್ತಿಕ್ಕಲು ನೀವು ಎಡಿಜಿಪಿ ಹಾಗು ಪೊಲೀಸ್ ಕಮಿಷನರ್‌ನ್ನು ಮುಂದೆ ಬಿಟ್ಟು ಸಮುದಾಯದ ರೈತರು, ವಕೀಲರು ಸೇರಿ ಎಲ್ಲರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ. ಕೆಲವರಿಗೆ ಕೈ ಕಾಲು ಸೇರಿದಂತೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗಿದೆ. ಹೀಗಾಗಿ, ಪಂಚಮಸಾಲಿ ಸಮಾಜ ಹಾಗೂ ಶ್ರೀಗಳಿಗೆ ಸಿಎಂ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.ನಾಲತವಾಡದ ಮುತ್ತು ಅಂಗಡಿ ಸಾಹುಕಾರ ಮಾತನಾಡಿ, ನಮ್ಮ ಸಮಾಜದವರು ಚನ್ನಮ್ಮನ ಆಶೀರ್ವಾದ ಪಡೆದಿದ್ದು, ಯಾವುದೇ ಗೊಡ್ಡ ಬೆದರಿಕೆಗೆ ಹಾಗೂ ಕಾಂಗ್ರೆಸ್ ಸರ್ಕಾರದ ಯಾವುದೇ ಗೂಂಡಾಗಿರಿಗೆ ಹೆದರುವುದಿಲ್ಲ. ಹೋರಾಟಗಾರರ ವಿರುದ್ಧ ಹಾಕಿದ ಎಲ್ಲಾ ಕೇಸ್‌ಗಳನ್ನು ಹಿಂಪಡೆದು ಸಮಾಜಕ್ಕೆ 2ಎ ಮೀಸಲಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಬಸವೇಶ್ವರ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಸುಮಾರು ಒಂದು ಗಂಟೆಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಗುರುನಾಥಗೌಡ ಬಿರಾದರ, ರವಿಕುಮಾರ ಕಮತ, ಸುಭಾಸ ಮಾದರ, ಸೋಮನಗೌಡ ಬಿರಾದಾರ(ಕವಡಿಮಟ್ಟಿ), ಯಮನಪ್ಪ ಹಡಲಗೇರಿ, ಶಿವನಗೌಡ ಶಿವಣಗಿ, ಬಸವರಾಜ ಗುಳಬಾಳ, ಅಶೋಕ ತಂಗಡಗಿ, ಗುರುನಾಥ ಬಿರಾದರ, ಸಿದ್ದರಾಜ ಹೊಳಿ, ಸಂಗಣ್ಣ ಹತ್ತಿ, ಗುರುಲಿಂಗಪ್ಪಗೌಡ ಪಾಟೀಲ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಯುವ ನಾಯಕಿ ಗೌರಮ್ಮ ಹುನಗುಂದ ಸೇರಿದಂತೆ ಇತರರು ಇದ್ದರು.
----------ಕೋಟ್ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮೀಸಲಾತಿಗೆ ಹೋರಾಟ ನಡೆಸಿದರೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅಂದು ಬಹಳಷ್ಟು ರಾಜಕೀಯ ಮುಖಂಡರು ಹಾಗೂ ಶಾಸಕರು ಹೋರಾಟಗಾರರ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದರು. ಆದರೆ, ಈಗ ಅದೇ ಹೋರಾಟಕ್ಕೆ ಅದೇ ನಾಯಕರು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಬೆಂಬಲ ಸೂಚಿಸಿ ಹೋರಾಟ ನಡೆಸಿದ್ದಾರೆ. ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದ್ದು ಬಿಜೆಪಿ ಬೆಂಬಲಿತ ಹೋರಾಟ.
ಅಮರೇಶ ಗೂಳಿ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ