ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ರೈಲ್ವೇ ಸ್ಟೇಷನ್ ಬಳಿ ಇರುವ ನಿರಾಣಿ ಷುಗರ್ಸ್(ಪಿಎಸ್‌ಎಸ್‌ಕೆ) ಕಾರ್ಖಾನೆ ಮುಂಭಾಗ ಸೇರಿದ ಲಾರಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ಧರಣಿ ನಡೆಸಿ ರಾಜ್ಯ ಸರ್ಕಾರ, ಸಕ್ಕರೆ ಇಲಾಖೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.
ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಾರ್ಖಾನೆಗೆ ಕಬ್ಬು ಸಾಗಾಣಿಕೆ ಮಾಡುವ ಲಾರಿ ಹಾಗೂ ಟ್ರ್ಯಾಕ್ಟರ್ ಮಾಲೀಕರಿಗೆ ಸರ್ಕಾರ ನಿಗದಿಪಡಿಸಿರುವ ದರ ನೀಡದೆ ವಂಚನೆ ಮಾಡುತ್ತಿವೆ. ಎಫ್‌ಆರ್‌ಪಿ ದರ ಹಾಗೂ ಇಳುವರಿ ಆಧಾರದ ಮೇಲೆ 30 ಕಿ.ಮೀ.ವರೆಗೆ ಪ್ರತಿ ಕಿಮೀ ಗೆ 335 ರು. ಕಬ್ಬು ಸಾಗಾಣಿಕೆ ವೆಚ್ಚ ನೀಡಬೇಕು ಎಂದು ಆಗ್ರಹಿಸಿದರು.30 ಕಿಮೀ ಮೇಲೆ ಹೋದರೆ ಪ್ರತಿ ಕಿಮೀ ಗೆ 5 ರು. ಹೆಚ್ಚುವರಿಯಾಗಿ ನೀಡಬೇಕು ಎಂದು ಸರ್ಕಾರದ ಆದೇಶವಿದೆ. ಆದರೆ, ಕಾರ್ಖಾನೆ ಮಾಲೀಕರು 295 ರು. ನೀಡುತ್ತಿದ್ದಾರೆ. ನಾವು ಕಬ್ಬಿನ ಎಫ್‌ಆರ್‌ಪಿ ದರದ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ 310 ರು. ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಆಡಳಿತ ಮಂಡಳಿ ಕ್ರಮ ವಹಿಸುತ್ತಿಲ್ಲ. ಜೊತೆಗೆ ಕಾರ್ಖಾನೆ ಮಾಲೀಕರು ರೈತರ ಬಳಿ ಕಬ್ಬು ಸಾಗಾಣಿಕೆ ವೆಚ್ಚವೆಂದು ಪ್ರತಿ ಟನ್‌ಗೆ 50 ರು. ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು.
ನಿರಾಣಿ ಶುಗರ್ಸ್ ಸಕ್ಕರೆ ಕಾರ್ಖಾನೆಯೂ ನಿತ್ಯ 3500 ಟನ್ ಕಬ್ಬು ನುರಿಸಲು ಮಾತ್ರ ಅವಕಾಶವಿದೆ, ಆದರೆ. ಆದೇಶ ಉಲ್ಲಂಘನೆ ಮಾಡಿ 5 ರಿಂದ 5,500 ಟನ್ ವರೆಗೂ ಹೆಚ್ಚುವರಿಯಾಗಿ ಕಬ್ಬು ನುರಿಸುತ್ತಿದ್ದಾರೆ. ಇದು ಗೊತ್ತಿದ್ದರೂ ಸಂಬಂಧ ಪಟ್ಟ ಇಲಾಖೆ ಕ್ರಮವಹಿಸುತ್ತಿಲ್ಲ ಎಂದು ದೂರಿದರು.
ಡೀಸೆಲ್ ದರ, ಟೈಯರ್ ದರ, ಚಾಲಕರ ಸಂಬಳ ಹೆಚ್ಚಳವಾಗಿದೆ. ಆದರೆ, ಕಾರ್ಖಾನೆ ಮಾಲೀಕರು ನೀಡುತ್ತಿರುವ ಸಾಗಾಣಿಕೆ ದರ ಮಾತ್ರ ಕಡಿಮೆಯಾಗಿದೆ. ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಮಾಲೀಕರು ಡೀಸೆಲ್‌ಗೆ ಸಬ್ಸಡಿ ನೀಡುತ್ತಿದ್ದಾರೆ. ಇಲ್ಲಿ ಯಾವುದೇ ಸಬ್ಸಡಿಯೂ ನೀಡುತ್ತಿಲ್ಲ. ಬೇರೆಡೆಯಿಂದ ಇಲ್ಲಿಗೆ ಬಂದಿರುವ ಟ್ರ್ಯಾಕ್ಟರ್ ಮಾಲೀಕರಿಗೆ ಯಾವುದೇ ಮೂಲಸೌಕರ್ಯಗಳ ವ್ಯವಸ್ಥೆಯೂ ಇಲ್ಲ. ಕೂಡಲೇ ಕಾರ್ಖಾನೆ ಮಾಲೀಕರು ಸರಕಾರದ ಆದೇಶದಂತೆ ಸಾಗಾಣಿಕೆ ದರ ನೀಡುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.
ಪ್ರತಿಭಟನೆಯಲ್ಲಿ ದಕ್ಷಿಣ ಕರ್ನಾಟಕ ಕಬ್ಬು ಸಾಗಾಣಿಕೆ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಎಸ್.ವೇಣುಗೋಪಾಲ, ಟ್ರ್ಯಾಕ್ಟರ್ ಮಾಲೀಕರ ಸಂಘದ ಕಾರ್ಯದರ್ಶಿ ಬಲರಾಮು, ರವಿನಂದನ್ ಕೆ.ಎನ್.,ರಾಘವೇಂದ್ರ, ಚಿಕ್ಕರಾಮೇಗೌಡ, ಸಂತೋಷ, ಗುರುಲಿಂಗಪ್ಪ, ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.