ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಐದು ದೀಪ ಬಳಿ ಸೇರಿದ ಪ್ರತಿಭಟನಾಕಾರರು, ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ಮೂಲಕ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಪಡಿಸಿದರು.
ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಕಂಪನಿಯವರಿಗೆ ವರ್ಗಾಯಿಸದೇ ರೈತರು, ಗ್ರಾಹಕರು ಮತ್ತು ನಿಗಮದ ನೌಕರರರಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸರ್ಕಾರ ಟಾಟಾ ಸಂಸ್ಥೆಯವರು ವಿತರಣಾ ಪರವಾನಗಿ ನೀಡಿರುವ ಅರ್ಜಿಯನ್ನು ತಿರಸ್ಕರಿಸಿ ಎಲ್ಲರ ಹಿತ ಕಾಪಾಡಬೇಕು ಎಂದು ಘೋಷಣೆಗಳ ಮೂಲಕ ಆಗ್ರಹಿಸಿದರು.ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸರ್ಕಾರಿ ಸ್ವಾಮ್ಯದ ನಿಗಮ ಮತ್ತು ಇಲಾಖೆಗಳನ್ನು ಖಾಸಗಿಕರಗೊಳಿಸುವುದು ಬಿಟ್ಟರೆ ಬೇರೇನೂ ಕೆಲಸವಿಲ್ಲ. ರೈತರ ಹಿಡಿತದಲ್ಲಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಈಗಾಗಲೇ ಖಾಸಗಿ ಅವರಿಗೆ ಗುತ್ತಿಗೆ ನೀಡಿದ್ದಾರೆ. ಇದೇ ರೀತಿ ಹಲವು ಕಾರ್ಖಾನೆಗಳನ್ನು ಖಾಸಗೀಕರಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು ಮಾತನಾಡಿ, ವಿದ್ಯುತ್ ಇಲಾಖೆ ಖಾಸಗೀಕರಣಗೊಂಡರೆ ನಿಗಮದ 55 ಸಾವಿರ ನೌಕರರ ಭವಿಷ್ಯ ಬೀದಿಗೆ ಬೀಳುತ್ತದೆ. ಅನುಮತಿ ಪಡೆಯುವ ಮುನ್ನ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸುವುದಾಗಿ ಭರವಸೆ ನೀಡುತ್ತಾರೆ. ಆ ನಂತರದಲ್ಲಿ ನಿರ್ವಹಣಾ ವೆಚ್ಚ ಸರಿದೂಗಿಸಲು ಸಾದ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಯೋಜನೆಗಳನ್ನು ಕಡಿತಗೊಳಿಸುವ ಜೊತೆಗೆ ದರ ಏರಿಸುತ್ತಾರೆ. ಒಮ್ಮೆ ಖಾಸಗೀಕರಣಗೊಂಡರೆ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ನಿಗಮವನ್ನು ಸರ್ಕಾರಿ ಸ್ವಾಮ್ಯದಲ್ಲೇ ಇಟ್ಟುಕೊಂಡು ಗುಣಮಟ್ಟದ ವಿದ್ಯುತ್ ಪೂರೈಸಲಿ ಎಂದು ಒತ್ತಾಯಿಸಿದರು.