ಪಂಡಿತ್‌ ವೆಂಕಟೇಶ್‌ ಕುಮಾರ್‌ಗೆ ‘ಆಳ್ವಾಸ್‌ ವಿರಾಸತ್‌’ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Dec 12, 2024 12:32 AM

ಸಾರಾಂಶ

ಸ್ಯಾಕ್ಸೋಫೋನ್, ಗಟ್ಟಿಮೇಳ, ಚೆಂಡೆ, ಛತ್ರಿ ಚಾಮರ ಮತ್ತಿತರ ಗೌರವ ವಾದ್ಯಪರಿಕರಗಳ ನಿನಾದಗಳ ಮೂಲಕ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರನ್ನು ವೇದಿಕೆಗೆ ಕರೆತರಲಾಯಿತು. ಪ್ರಶಸ್ತಿಯು 1 ಲಕ್ಷ ರು. ಒಳಗೊಂಡಿದ್ದು ಹೂ, ಪನ್ನೀರು, ಗಂಧ, ಚಂದನದ ಮೂಲಕ ಸಾಂಪ್ರದಾಯಿಕವಾಗಿ ಗೌರವಿಸುತ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ನನ್ನ ಗುರುಗಳಾದ ಪುಟ್ಟರಾಜ ಗವಾಯಿಗಳಿಗೆ ಅರ್ಪಿಸುವೆ ಎಂದು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಹೇಳಿದರು. ಮೂಡುಬಿದಿರೆ ಪುತ್ತಿಗೆ ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಬುಧವಾರ, ಆಳ್ವಾಸ್ ವಿರಾಸತ್ 2024ರ ರಾಷ್ಟ್ರೀಯ ಉತ್ಸವದ ‘ಆಳ್ವಾಸ್ ವಿರಾಸತ್ 2024’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಪುಟ್ಟರಾಜ ಗವಾಯಿಗಳು ಸಂಗೀತ ತ್ರಿಭಾಷಕವಿಗಳು , ಹಳ್ಳಿಯಲ್ಲಿದ್ದ ನನಗೆ ಹನ್ನೆರಡು ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿಸಿದ್ದಾರೆ. ತಂದೆ ತಾಯಿಗಳ ಬಳಿಕ ಗುರು ನಮಗೆ ಮುಖ್ಯ. ದೀನರಿಗೆ ದಲಿತರಿಗೆ ಕಣ್ಣಿಲ್ಲದವರಿಗೆ ಪುಟ್ಟರಾಜ ಗವಾಯಿಗಳು ಆಶ್ರಯ ನೀಡಿದರು ಎಂದು ಗುರುಗಳನ್ನು ಸ್ಮರಿಸಿದರು. ಆಳ್ವಾಸ್‌ ಸಂಸ್ಥೆ ಸಮಾಜಕ್ಕೆ ಮಾದರಿ: ಮೋಹನ್ ಆಳ್ವರು ಕಳೆದ 30 ವರ್ಷಗಳಿಂದ ಶಿಸ್ತು ಸಂಯಮ ಸಮಯಪಾಲನೆಗಳಿಂದ ಕಾರ್ಯಕ್ರಮಗಳನ್ನು ಪಾಲಿಸಿಕೊಂಡು ಬರುತ್ತಿರುವ ಮೂಲಕ ಆಳ್ವಾಸ್ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ. ನೂರ ಒಂದು ವರ್ಷಗಳ ಕಾಲ ಇಂಥ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಶುಭಹಾರೈಸಿದರು.

ಸ್ಯಾಕ್ಸೋಫೋನ್, ಗಟ್ಟಿಮೇಳ, ಚೆಂಡೆ, ಛತ್ರಿ ಚಾಮರ ಮತ್ತಿತರ ಗೌರವ ವಾದ್ಯಪರಿಕರಗಳ ನಿನಾದಗಳ ಮೂಲಕ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರನ್ನು ವೇದಿಕೆಗೆ ಕರೆತರಲಾಯಿತು. ಪ್ರಶಸ್ತಿಯು 1 ಲಕ್ಷ ರು. ಒಳಗೊಂಡಿದ್ದು ಹೂ, ಪನ್ನೀರು, ಗಂಧ, ಚಂದನದ ಮೂಲಕ ಸಾಂಪ್ರದಾಯಿಕವಾಗಿ ಗೌರವಿಸುತ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹಾಗೂ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಸ್ಠಾನದ ಅಧ್ಯಕ್ಷ ಮೋಹನ್ ಆಳ್ವ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿ.ಎಲ್. ಧರ್ಮ‌, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಜಿ ನಿರ್ದೇಶಕ ಎಸ್.ಎಲ್. ಮಂಜುನಾಥ್. ಸ್ಕೌಟ್ಸ್ ಗೈಡ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಬೆಂಗಳೂರು ಪ್ರಾರ್ಥನಾ ಶಾಲೆಯ ಮುಖ್ಯಸ್ಥ ಕರ್ಣ ಬೆಳಗೆರೆ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌, ಉದ್ಯಮಿ ಶ್ರೀಪತಿ ಭಟ್, ಎಕ್ಸಲೆಂಟ್ ಕಾಲೇಜಿನ ಮುಖ್ಯಸ್ಥ ನರೇಂದ್ರ ನಾಯಕ್ ಉಪಸ್ಥಿತರಿದ್ದರು. ಅತಿಥಿಗಳನ್ನು ಸ್ಕೌಟ್ಸ್ ಗೈಡ್ಸ್‌, ಎನ್‌ಸಿಸಿ ಬ್ಯಾಂಡ್ ತಂಡಗಳು ಮೆರವಣಿಗೆ ಮೂಲಕ ‌ವೇದಿಕೆಗೆ ಕರೆತರಲಾಯಿತು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share this article