- ದತ್ತಮಾಲಾ ಅಭಿಯಾನದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಧರ್ಮ ಸಭೆ
ಪಂಡಿತಾರಾಧ್ಯರ ಬಗ್ಗೆ ಅಪಾರವಾದ ಗೌರವವಿದೆ. ನಾಟಕ, ಉತ್ಸವದ ಮೂಲಕ ಸಾಮಾಜಿಕವಾಗಿ ಬಹಳ ದೊಡ್ಡ ಕ್ರಾಂತಿ ಮಾಡಿದ ಮಠ ಅದು. ಅವರು ಸಣ್ಣ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದು ಸರಿಯಲ್ಲ, ನಿಮಗೆ ಶೋಭೆ ತರಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ದತ್ತಮಾಲಾ ಅಭಿಯಾನದ ಅಂಗವಾಗಿ ನಗರದ ಶಂಕರಮಠ ಮುಂಭಾಗದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಶುಭ ಕಾರ್ಯಗಳ ಆರಂಭಕ್ಕೂ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ ಎಂದ ಅವರು, ಗಣೇಶನ ಅಪ್ಪ ಶಿವನನ್ನ ಪೂಜೆ ಮಾಡ್ತೀರಾ, ಗಣೇಶ ಬೇಡ್ವಾ, ನಿಮ್ಮ ಲಾಜಿಕ್ ಏನು, ಗಣೇಶನ ಪೂಜೆಗೆ ಏಕೆ ವಿರೋಧ ಮಾಡ್ತೀರಾ ಎಂದು ಪ್ರಶ್ನಿಸಿದರು.ತಪ್ಪು ಅಂತ ಹೇಳ್ತೀರಾ, ಮೂಢ ನಂಬಿಕೆ ಅಂತ ಏಕೆ ಹೇಳ್ತೀರಾ ಎಂದು ಪ್ರಶ್ನಿಸಿದ ಅವರು, ಸಾವಿರಾರು ವರ್ಷಗಳ ನಂಬಿಕೆಯನ್ನು ವಿರೋಧಿಸೋದು ಸಂವಿಧಾನ ವಿರೋಧಿಯಾಗುತ್ತೆ. ಸಾರ್ವಜನಿಕವಾಗಿ ಒಂದು ನಂಬಿಕೆ ಘಾಸಿಗೊಳಿಸೋದು ನಿಮಗೆ ಶೋಭೆ ತರಲ್ಲ, ನಿಮ್ಮ ಹೇಳಿಕೆ ಹಿಂಪಡೆಯಿರಿ ಎಂದು ಆಗ್ರಹಿಸಿದರು.
ಮೈಸೂರಿನಲ್ಲಿ ಒಬ್ಬ ಭಗವಾನ್ ಇದ್ದಾರೆ. ಆತ ಭಗವಾನ್ ಅಲ್ಲ ಸೈತಾನ್, ಮಹಿಷಾಸುರ ಮರ್ಧನಿ ಸಹಸ್ರಾರು ವರ್ಷಗಳಿಂದ ನಡೆದು ಬಂದಿದೆ. ಆ ರಾಕ್ಷಸನೇ ನಮಗೆ ದೇವರು ಎನ್ನುತ್ತಾರೆ. ಇದೆಂತಹ ಮೂರ್ಖತನ. ಕಾನೂನು ಸಹ ಅಂತಹವರ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದರು.
ಗೋರಕ್ಷಕ ಸಂತೋಷ್‌ನನ್ನು ಬಿಗ್ ಬಾಸ್ ಒಳಗೆ ಹೋಗಿ ಹಿಡಿಯುತ್ತೀರಿ, ನಿಮಗೆ ಶಾಖಾದ್ರಿ ಸಿಗುವುದಿಲ್ಲವೇ ? ನವಿಲು ರಾಷ್ಟ್ರೀಯ ಪಕ್ಷಿ ಅದರ ಗರಿಗಳನ್ನೇ ಹಿಡಿದು ತಲೆಯ ಮೇಲೆ ಕುಟ್ಟುತ್ತಾರಲ್ಲಾ ಅವರಾರು ನಿಮಗೆ ಸಿಗಲಿಲ್ಲವೇ, ದರ್ಗಾದ ಒಳಗೆ ಹೋಗಿ ಅವರನ್ನು ಬಂಧಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹಿಂದೂಗಳನ್ನು ಹೇಗೆ ಗುರಿ ಮಾಡುತ್ತದೆ ಎನ್ನುವುದಕ್ಕೆ ಇದು ಜ್ವಲಂತ ಸಾಕ್ಷಿ ಎಂದರು.
ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿ, ದತ್ತಪೀಠದಲ್ಲಿ ಉರುಸ್ ಮಾಡುವು ದಾದರೆ ಮಸೀದಿಗಳಲ್ಲಿ ಗಣಪತಿ ಕೂರಿಸಲು, ದರ್ಗಾದಲ್ಲಿ ಲಕ್ಷ್ಮಿ ಪೂಜೆಗೆ ಅವಕಾಶ ನೀಡಬೇಕು ಆಗ ಮಾತ್ರ ಸೌಹಾರ್ದತೆ ಆಗುತ್ತದೆ ಎಂದರು.
1992ರ ಡಿ. 6 ರಂದು ಹಿಂದೂ ಸಮಾಜ ಕ್ರಾಂತಿ ಮಾಡಿ ಅಯೋಧ್ಯೆಯ ರಾಮನ ಜನ್ಮಸ್ಥಾನ ವಶಪಡಿಸಿಕೊಂಡಿತೋ ಅದೇ ಮಾದರಿಯಲ್ಲಿ ದತ್ತಪೀಠ ವಶಕ್ಕೆ ಪಡೆಯುತ್ತೇವೆ ಎಂದು ಹೇಳಿದರು.
ದತ್ತಮಾಲಾ ಅಭಿಯಾನದ ಅಂಗವಾಗಿ ಚಿಕ್ಕಮಗಳೂರಿನ ಶಂಕರಮಠ ಎದುರು ಏರ್ಪಡಿಸಲಾಗಿದ್ದ ಧರ್ಮ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿದರು.