ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ಪಾಂಡುರಂಗ

KannadaprabhaNewsNetwork | Published : Jan 11, 2025 12:45 AM

ಸಾರಾಂಶ

ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣ ಹಾಗೂ ತಾಲೂಕಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಪ್ರಸಾದ ವಿನಿಯೋಗ , ಮಹಾಮಂಗಳಾರತಿ, ಭಕ್ತಾಧಿಗಳಿಂದ ಸೇವಾ ಕೈಂಕರ್ಯ ಸಾಂಘವಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವೈಕುಂಠ ಏಕಾದಶಿ ಅಂಗವಾಗಿ ಪಟ್ಟಣ ಹಾಗೂ ತಾಲೂಕಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಪ್ರಸಾದ ವಿನಿಯೋಗ , ಮಹಾಮಂಗಳಾರತಿ, ಭಕ್ತಾಧಿಗಳಿಂದ ಸೇವಾ ಕೈಂಕರ್ಯ ಸಾಂಘವಾಗಿ ಜರುಗಿತು.

ಪಟ್ಟಣದ ಪಾಂಡುರಂಗನಿಗೆ ವಿಶೇಷ ಪೂಜೆಯೊಂದಿಗೆ ಬೆಣ್ಣೆ ಅಲಂಕಾರವನ್ನು ಮಾಡಲಾಗಿತ್ತು. ಈ ಹಿನ್ನೆಲೆ ವಿವಿಧ ಸೇವಾ ಕೈಂಕರ್ಯ ಕೈಗೊಂಡ ಭಕ್ತ ಸಮೂಹ ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿ ಪಾಂಡರಂಗನ ದರ್ಶನ ಪಡೆದು ಪುನೀತರಾದರು. ದರ್ಶನದ ಬಳಿಕ ಭಕ್ತಾಧಿಗಳಿಗೆ ಸೇವಾರ್ಥದಾರರು ಪ್ರಸಾದ ವಿನಿಯೋಗಿಸಿದರು. ಅದೇ ರೀತಿ ತಾಲೂಕಿನ ಮಧ್ಯರಂಗನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ರೀತಿಯಲ್ಲಿ ಹೂವಿನ ಅಲಂಕಾರ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರಾತಃಕಾಲದಲ್ಲಿ ಮಧ್ಯರಂಗನಾಥ ಸ್ವಾಮಿಗೆ ಸುಪ್ರಭಾತ ಸೇವೆ, ಸಹಸ್ರ ನಾಮ, ತೋಮಾಲೆ ಸೇವೆ (ಹೂವಿನ ಅಲಂಕಾರ ಸೇವೆ), ನೈವೇದ್ಯ ನಡೆಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ನೆರೆದಿದ್ದ ಎಲ್ಲ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಬಳಿಕ ದೇವಾಲಯದಲ್ಲಿ ತೆರೆದಿದ್ದ ವೈಕುಂಠ ದ್ವಾರ (ಸ್ವರ್ಗದ ಬಾಗಿಲು) ತೆರೆಯುವ ಮೂಲಕ ಹೊರ ನಡೆದರು. ಮುಜರಾಯಿ ಇಲಾಖೆಯ ವತಿಯಿಂದ ಪ್ರಸಾದ ವಿನಿಯೋಗ ಭಕ್ತ ಸಮೂಹಕ್ಕೆ ವಿತರಣೆ ಮಾಡಲಾಯಿತು.

ದೇವಸ್ಥಾನಕ್ಕೆ ಮಳ್ಳವಳಿ ಶಾಸಕ ನರೇಂದ್ರಸ್ವಾಮಿ, ಹನೂರು ಮಾಜಿ ಶಾಸಕ ನರೇಂದ್ರ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್, ಉಪವಿಭಾಗಾಧಿಕಾರಿ ಮಹೇಶ್, ನ್ಯಾಯಾಧೀಶ ಆನಂದ್ ಸೇರಿದಂತೆ ಅನೇಕ ಗಣ್ಯರು ಬೇಟಿ ನೀಡಿ ಪೂಜೆ ಸಲ್ಲಿಸಿದರು. ಎಲ್ಲ ಪೂಜಾ ಕೈಂಕರ್ಯವನ್ನು ಪ್ರಧಾನ ಅರ್ಚಕ ಕೆ.ಮಾದವನ್ ಭಟ್ಟರು, ಶ್ರೀಧರ್ ಭಟ್ಟರು, ಗೋವಿಂದ ಭಟ್ಟರು, ಸತ್ಯನಾರಾಯಣ ಭಟ್ಟರು ಸಾಂಘವಾಗಿ ನೆರವೇರಿತು.

ಅದೇ ರೀತಿಯಲ್ಲಿ ಕೊಳ್ಳೇಗಾಲ ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿ ವಿಶೇಷ ಅಲಂಕಾರ ಮಾಡಲಾಗಿತ್ತು. ಪಟ್ಟಣದ ಕಾವೇರಿ ರಸ್ತೆ ಸಮೀಪವಿರುವ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಮುಂಜಾನೆ ಸುಪ್ರಭಾತ ಸೇವೆ, ಪೊಂಗಲ್ ನೈವ್ಯಧ್ಯ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಮಹಾಮಂಗಳಾರತಿ ನಡೆಸಿ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಪ್ರಧಾನ ಅರ್ಚಕ ಶೇಷಾದ್ರಿ ಭಟ್ಟರು, ಅರ್ಚಕ ಸುದರ್ಶನ ಭಟ್ಟರು ವಿಶೇಷ ರೀತಿಯಲ್ಲಿ ಲಕ್ಷ್ಮೀ ನಾರಾಯಣಸ್ವಾಮಿಯನ್ನು ಅಲಂಕರಿಸಿ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಿದರು. ಈ ವೇಳೆ ಲಕ್ಷ್ಮೀ ನಾರಾಯಣ ಸೇವಾ ಕೈಕರ್ಯ ಸಮಿತಿಯ ಸದಸ್ಯ ನರಸಿಂಹನ್, ಸಹಸ್ರನಾಮದ ಸದಸ್ಯರು ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು.

Share this article