ನಕಲಿ ಫೋನ್‌ ಪೇ ಮೂಲಕ ವ್ಯಾಪಾರಿಗಳಿಗೆ ಪಂಗನಾಮ!

KannadaprabhaNewsNetwork | Published : Jan 22, 2025 12:31 AM

ಸಾರಾಂಶ

Panganama for merchants through fake phone pay!

-ಶಹಾಪುರ ನಗರದ ವೈನ್ ಶಾಪ್ ವೊಂದರಲ್ಲಿ ನಕಲಿ ಫೋನ್ ಪೇ ಮೂಲಕ ಹಣ ಪಾವತಿ । ಪ್ರಕರಣ ದಾಖಲು: ಓರ್ವ ಯುವಕನ ಬಂಧನ

-----

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ನಗರದಲ್ಲಿ ಖತರ್ನಾಕ್ ಖದೀಮರು ಗ್ರಾಹಕರ ಸೋಗಿನಲ್ಲಿ ಬರುವ ಇವರು ನಕಲಿ ಫೋನ್ ಪೇ ಅಪ್ಲಿಕೇಷನ್ ಮೂಲಕ ಅಂಗಡಿ ಮಾಲೀಕರ ಫೋನ್ ಪೇ ಕ್ಯೂಆರ್‌ ಕೋಡನ್ನು ಸ್ಕ್ಯಾನ್ ಮಾಡುತ್ತಾರೆ. ಅಂಗಡಿ ಮಾಲೀಕರಿಗೆ ಹಣ ಸಂದಾಯವಾದಂತೆ ಮೆಸೇಜ್ ಸಹ ಹೋಗುತ್ತದೆ. ಆದರೆ, ಅಕೌಂಟ್‌ಗೆ ಹಣ ಜಮಾ ಆಗಿರುವುದಿಲ್ಲ. ಇತ್ತೀಚೆಗೆ ಇಂತಹ ಪ್ರಕರಣಗಳು ನಗರದಲ್ಲಿ ಬೆಳಕಿಗೆ ಬರುತ್ತಿವೆ. ಇಂಥ ಪ್ರಕರಣಗಳಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೆ ಉದಾಸೀನತೆ ತೋರಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ನಗರದ ಇಂಡಸ್ಟ್ರಿಯಲ್ ಏರಿಯಾದ ಬಳಿ ಇರುವ ರೇಣುಕಾ ವೈನ್ ಶಾಪ್ ಮಾಲೀಕ ಉಮೇಶ್ ಕಟ್ಟಿಮನಿ ಅವರಿಗೆ ಕಳೆದ ನವೆಂಬರ್ 2024 ತಿಂಗಳಿನಿಂದ ಇಲ್ಲಿವರೆಗೆ ಬರೋಬ್ಬರಿ 3 ರಿಂದ 3.80 ಲಕ್ಷ ರು. ಗಳವರೆಗೆ ಖದೀಮರು ಪಂಗನಾಮ ಹಾಕಿದ್ದಾರೆ. ಜ.15, 2025 ರಂದು ವೈನ್ ಶಾಪಿಗೆ ಗ್ರಾಹಕರ ಸೋಗಿನಲ್ಲಿ ಬಂದವರು 2600, 3640 ಹಾಗೂ 810 ರು.ಗಳ ಮೊತ್ತದ ವಿವಿಧ ವೈನ್ ಒಂದೇ ದಿನ ಖರೀದಿಸಿದ್ದಾರೆ. ಈ ಪ್ರಕರಣದಲ್ಲಿ ಮೂರು ಜನ ಅಪ್ರಾಪ್ತ ಬಾಲಕರು ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವಕನನ್ನು ಹಿಡಿದು ಖುದ್ದಾಗಿ ವೈನ್ ಶಾಪ್ ಮಾಲೀಕರೆ ಪೊಲೀಸರಿಗೆ ಒಪ್ಪಿಸಿದ್ದಾರೆ.ಬಾಕಲ

ತಲೆ ಎತ್ತಿದ ನಕಲಿ ಫೋನ್ ಪೇ ಗ್ಯಾಂಗ್: ನಕಲಿ ಫೋನ್ ಪೇ ಮೂಲಕ ವ್ಯಾಪಾರಸ್ಥರನ್ನು ವಂಚಿಸುವ ಗ್ಯಾಂಗೊಂದು ನಗರದಲ್ಲಿ ಸಕ್ರಿಯವಾಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಇಂಥ ಘಟನೆ ಮರುಕಳಿಸದಂತೆ ತಡೆಯಲು ಪೋಲಿಸ್ ಇಲಾಖೆ ಒಬ್ಬರಿಂದ ಸಾಧ್ಯವಿಲ್ಲ. ಆದರೆ, ಇದಕ್ಕೆ ಸಾರ್ವಜನಿಕ ಸಹಕಾರ ಅಗತ್ಯ. ಆದರೂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಹಲವು ಅನುಮಾನ ಮೂಡುತ್ತಿವೆ ಎನ್ನುತ್ತಾರೆ ಜಿಲ್ಲಾ ದಲಿತ ಮುಖಂಡ ನಿಂಗಣ್ಣ ನಾಟೇಕಾರ.

* ಮಕ್ಕಳ ಬಳಕೆ: ಆತಂಕದ ಸಂಗತಿ: ತೆರೆ ಮನೆಯಲ್ಲಿ ಇದ್ದುಕೊಂಡು ಚಿಕ್ಕ ಮಕ್ಕಳಿಗೆ ಅಮಿಷವೊಡ್ಡಿ 12-14 ವರ್ಷದ ಮಕ್ಕಳಿಗೆ ತಮ್ಮ ಪಾಲಕರ ಮೊಬೈಲ್ ತರುವಂತೆ ಹೇಳಿ ಆ ಮೊಬೈಲ್ ನಲ್ಲಿ ಹೇಗೆ ವಂಚನೆ ಮಾಡಬೇಕು ಎಂಬುದರ ಬಗ್ಗೆ ತರಬೇತಿ ಕೊಟ್ಟು ಗದ್ದಲಿರುವ ಅಂಗಡಿಗಳಿಗೆ ಕಳುಹಿಸಿ, ಈ ದುಷ್ಕೃತ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ ಎಂದು ನಾಗರಿಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.

* ಪೊಲೀಸರ ಹಿಂದೇಟು: ಪೊಲೀಸರಿಗೆ ಇದರ ಮೂಲ ಗೊತ್ತಿದ್ದರೂ ಅದನ್ನು ಅವರು ಬುಡ ಸಮೇತ ಕಿತ್ತಿಹಾಕಲು ಮನಸ್ಸು ಮಾಡುತ್ತಿಲ್ಲ. ಮೋಸ ಹೋಗಿರುವ ಬಗ್ಗೆ ದೂರು ಕೊಡಲು ಹೋದ ವ್ಯಾಪಾರಸ್ಥರಗೆ ಇನ್ನಿಲ್ಲದ ಪ್ರಶ್ನೆಗಳನ್ನು ಕೇಳುವ ಮೂಲಕ ಕಂಪ್ಲೇಂಟ್ ಕೊಡದ ಹಾಗೆ ನೋಡಿಕೊಳ್ಳುತ್ತಿದ್ದಾರೆಂದು ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.

* ನಕಲಿ ಸ್ಕ್ರೀನ್‌ಶಾಟ್‌: ಮೂಲ ಪಾವತಿ ದೃಢೀಕರಣ ಸಂದೇಶ ಹಾಗೂ ಆ್ಯಪ್ ಪುಟ ಎಡಿಟ್‌ ಮಾಡಿ ನಕಲಿ ಸ್ಕ್ರೀನ್‌ಶಾಟ್‌ ರಚಿಸಲು ವಂಚಕರಿಗೆ ಅವಕಾಶ ನೀಡುವ ವೆಬ್‌ಸೈಟ್‌ ಮತ್ತು ಆ್ಯಪ್‌ ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಸರಳವಾದ ಗೂಗಲ್ ಸರ್ಚ್‌ನಿಂದ ವಂಚಕರಿಗೆ ಇಂತಹ ವಂಚನೆಗಳನ್ನು ನಡೆಸಲು ಸಾಕಷ್ಟು ಆಯ್ಕೆಗಳು ದೊರೆಯುತ್ತವೆ. ಅಂತ ನಕಲಿ ಆ್ಯಪ್ ಗಳನ್ನು ಬಳಸಿಕೊಂಡು ರಾಜಾರೋಷವಾಗಿ ದುಷ್ಕೃತ್ಯಗಳನ್ನು ಎಸಗುತ್ತಿದ್ದಾರೆ.

* ಆಫ್‌ಲೈನ್ ಮೂಲಕ ಕುತಂತ್ರ: ವ್ಯಾಪಾರಿಗಳು ಬೇರೆ ಕಡೆಗೆ ಗಮನಹರಿಸಿದ್ದಾಗ ಪಾವತಿ ದೃಢೀಕರಣವನ್ನು ಪರಿಶೀಲಿಸಲು ಸಾಧ್ಯವಾಗದ ಪರಿಸ್ಥಿತಿ ಇದ್ದಾಗ, ವಂಚಕರು ವ್ಯಾಪಾರಿಯಿಂದ ಉತ್ಪನ್ನ ಅಥವಾ ಸೇವೆಗಳನ್ನು ಪಡೆಯುವುದಕ್ಕಾಗಿ ನಕಲಿ ಸ್ಕ್ರೀನ್‌ಶಾಟ್ ಬಳಸಲು ಈ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಾರೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ವ್ಯಾಪಾರಸ್ಥ ವಿಜಯಕುಮಾರ್.

-------

ಕೋಟ್ -1:

ಫೋನ್ ಪೇ ಮೂಲಕ ವಂಚಿಸಿರುವದು ನನ್ನ ಗಮನಕ್ಕೆ ಬಂದಿದೆ. ಶಹಾಪುರ ಪೊಲೀಸರಿಗೆ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಜನರಿಗೆ ಮೋಸ ಹೋಗದಂತೆ ಇದರ ಬಗ್ಗೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ಪ್ರಕರಣದ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

- ಪೃಥ್ವಿಕ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾದಗಿರಿ.

-----

ಕೋಟ್ -2

ಕಳೆದೆರಡು ಮೂರು ತಿಂಗಳಿಂದ ನಮ್ಮ ವೈನ್ ಶಾಪ್ ನಲ್ಲಿ ನಕಲಿ ಫೋನ್ ಪೇ ಮೂಲಕ 3 ರಿಂದ 3.50 ಲಕ್ಷ ರು.ಗಳವರೆಗೆ ವಂಚನೆ ನಡೆದಿದೆ. ಇದರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾದರೆ ಇನ್ನೊಬ್ಬರು ಮೋಸ ಹೋಗುವುದಿಲ್ಲ.

- ಉಮೇಶ್ ಕಟ್ಟಿಮನಿ, ವಂಚನೆಗೆ ಒಳಗಾದ ರೇಣುಕಾ ವೈನ್ ಶಾಪ್ ಮಾಲೀಕ.

---------

21ವೈಡಿಆರ್7: ಶಹಾಪುರ ನಗರದ ವೈನ್ ಶಾಪ್ ವೊಂದರಲ್ಲಿ ನಕಲಿ ಫೋನ್ ಪೇ ಮೂಲಕ ಹಣ ಪಾವತಿ ಮಾಡುತ್ತಿರುವ ದೃಶ್ಯ.

Share this article