ಅಪ್ಪಾರಾವ್ ಸೌದಿ
ಕನ್ನಡಪ್ರಭ ವಾರ್ತೆ ಬೀದರ್ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಪಡೆಗಳಿಂದ ಪ್ರತಿ ವರ್ಷ ನಡೆಯುವ ಮೈನವಿರೇಳಿಸುವಂಥ ಪಂಜಿನ ಕವಾಯಿತು ಪ್ರದರ್ಶನ ಪ್ರಥಮ ಬಾರಿಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಪೊಲೀಸ್ ಸೇರಿದಂತೆ ಮತ್ತಿತರ ಎಲ್ಲ ಸಮವಸ್ತ್ರಧಾರಿ ಇಲಾಖೆಗಳ ಸಿಬ್ಬಂದಿಯಿಂದ ಜ.19ರಂದು ಸಂಜೆ 5ರಿಂದ ನಡೆಯಲಿದ್ದು ಈ ಪ್ರದರ್ಶನಕ್ಕೆ ಕ್ರೀಡಾಂಗಣ ಸರ್ವ ಸಿದ್ಧವಾಗಿದೆ.
ಸಂಜೆ 5ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಪೊಲೀಸ್ ಇಲಾಖೆಯು ಆಯೋಜಿಸಿರುವ ಈ ಪಂಜಿನ ಕವಾಯಿತು ಎಲ್ಲರ ಮೈಮನ ಸೆಳೆಯಲಿದೆ. ಅದರಲ್ಲಿಯೂ ಸುಮಾರು 200 ಜನ ಅಧಿಕಾರಿ, ಸಿಬ್ಬಂದಿ ಎರಡೂ ಕೈಗಳಲ್ಲಿ ಪಂಜುಗಳನ್ನು ಹಿಡಿದು ಪ್ರದರ್ಶನ ನೀಡಲಿದ್ದಾರೆ.ಪೊಲೀಸ್ ಇಲಾಖೆಯಿಂದ ಮೈಸೂರು ದಸರಾ ಹೊರತುಪಡಿಸಿದರೆ ರಾಜ್ಯದ ಬೀದರ್ ಜಿಲ್ಲಾ ಕೇಂದ್ರದಲ್ಲಿ ಇದೇ ಪ್ರಥಮವಾಗಿ ನಡೆಯಲಿದ್ದು ಇದಕ್ಕಾಗಿ ತಿಂಗಳುಗಟ್ಟಲೇ ತರಬೇತಿ ಅತ್ಯಗತ್ಯ. ಅದಾಗ್ಯೂ ಜಿಲ್ಲೆಯ ಸಮವಸ್ತ್ರಧಾರಿ ಇಲಾಖಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಶ್ರಮವಹಿಸಿ ಒಂದೇ ವಾರದಲ್ಲಿ ಎಲ್ಲವನ್ನೂ ಅರಿತು ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.
ಎಲ್ಲ ಸಮವಸ್ತ್ರ ಇಲಾಖೆಗಳ ಪೈಕಿ ಪೊಲೀಸ್, ಅಬಕಾರಿ, ಎಎಸ್‌ಐಎಸ್‌ಎಫ್, ಕೆಎಸ್‌ಆರ್‌ಪಿ, ಅಗ್ನಿಶಾಮಕ ದಳ, ಕಾರಾಗೃಹ ಇಲಾಖೆಯ ಸಿಬ್ಬಂದಿ ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಈ ಪಂಜಿನ ಕವಾಯಿತಿನಲ್ಲಿ ಪಾಲ್ಗೊಳ್ಳಲಿದ್ದಾರೆ.ಮೈಸೂರು ದಸರಾದದಲ್ಲಿ ನಡೆಯುವ ಈ ರೋಮಾಂಚನಕಾರಿ ಪ್ರದರ್ಶನ ವೀಕ್ಷಿಸಲಷ್ಟೇ ಅಲ್ಲ ಅಭ್ಯಾಸದ ಸಂದರ್ಭದಲ್ಲಿಯೂ ಸಾರ್ವಜನಿಕರು ಟಿಕೆಟ್ ಶುಲ್ಕ ಭರಿಸಬೇಕಾಗುತ್ತದೆ. ಇನ್ನು ಅಭ್ಯಾಸದ ಸಂದರ್ಭದಲ್ಲಿಯೇ ಈ ಕವಾಯಿತು ವೀಕ್ಷಿಸಲು ಮೈಸೂರು ದಸರಾದಲ್ಲಿ ಟಿಕೆಟ್ ಸಹ ಸಿಗದಷ್ಟು ಭಾರಿ ಸಂಖ್ಯೆಯ ಜನಸ್ತೋಮ ಇರುತ್ತದೆ. ಇಂತಹ ಪ್ರದರ್ಶನ ಬೀದರ್ ಜಿಲ್ಲೆಯ ಜನರಿಗೆ ಉಚಿತವಾಗಿ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಶನಿವಾರ ಸಂಜೆ 5ರಿಂದ ಕಾರ್ಯಕ್ರಮ ಆರಂಭವಾಗಲಿದ್ದು ರಾತ್ರಿ ಸುಮಾರು 9ರವರೆಗೆ ನಡೆಯಲಿದೆ.ಮೈಸೂರಿನಲ್ಲಿ ಜಿಲ್ಲಾ ಪೊಲೀಸ್ ಪ್ರೊಬೇಷನರಿ ಆಗಿ ಕಾರ್ಯನಿರ್ವಹಿಸಿತ್ತಿದ್ದಾಗ ಹಾಗೂ ಮೈಸೂರು ದಸರಾ ಸಂದರ್ಭದಲ್ಲಿ ನಡೆಯುವ ಈ ಪಂಜಿನ ಕವಾಯತು ಪ್ರದರ್ಶನದ ಉಸ್ತುವಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದು, ಜಿಲ್ಲೆಯ ಜನತೆಗೂ ಇಂಥದ್ದೊಂದು ಆಕರ್ಷಕ, ರೋಮಾಂಚನಕಾರಿ ಕವಾಯಿತು ವೀಕ್ಷಿಸಲು ಅವಕಾಶ ಕಲ್ಪಿಸುವ ಹಿನ್ನೆಲೆ ಬೀದರ್ ಜಿಲ್ಲೆಯಿಂದ ಪೊಲೀಸ್ ಸಿಬ್ಬಂದಿಯನ್ನು ಮೈಸೂರು ದಸರಾದ ಕವಾಯಿತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಕಳುಹಿಸಲಾಗಿತ್ತು. ಮೈಸೂರು ಜಿಲ್ಲೆಯಿಂದ ತರಬೇತಿ ನೀಡಲು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕರೆಸಿ ಒಂದು ವಾರ ತರಬೇತಿ ಕಲ್ಪಿಸಿಕೊಡಲಾಗಿದೆ. ಸಾರ್ವಜನಿಕರು ಸಂಜೆಯ ಈ ಆಕರ್ಷಕ ಪ್ರದರ್ಶನ ವೀಕ್ಷಿಸಲು ಕೋರುತ್ತೇವೆ.
ಚನ್ನಬಸವಣ್ಣ ಎಸ್‌ಎಲ್, ಎಸ್‌ಪಿ, ಬೀದರ್