ಎಂ.ಬಿ.ಅಯ್ಯನಹಳ್ಳಿಯಲ್ಲಿ ಗಾಳೆ-ಮಳೆ ನೆಲಕ್ಕುರುಳಿದ ಪಪ್ಪಾಯಿ ಬೆಳೆ

KannadaprabhaNewsNetwork | Published : Apr 16, 2025 12:36 AM

ಸಾರಾಂಶ

ತಾಲೂಕಿನ ಎಂ.ಬಿ. ಅಯ್ಯನಹಳ್ಳಿ, ನೆಲಬೊಮ್ಮನಹಳ್ಳಿ ಸುತ್ತಮುತ್ತ ಮಂಗಳವಾರ ಸಂಜೆ ಭಾರಿ ಮಳೆ-ಗಾಳಿಗೆ ಫಲಕ್ಕೆ ಬಂದ ಪಪ್ಪಾಯಿ ತೋಟ ಬಹುತೇಕ ನೆಲಕ್ಕುರುಳಿದ್ದರಿಂದ ಅಂದಾಜು ₹1 ಕೋಟಿ ಮೌಲ್ಯದ ಪಪ್ಪಾಯಿ ಬೆಳೆ ನಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ತಾಲೂಕಿನ ಎಂ.ಬಿ. ಅಯ್ಯನಹಳ್ಳಿ, ನೆಲಬೊಮ್ಮನಹಳ್ಳಿ ಸುತ್ತಮುತ್ತ ಮಂಗಳವಾರ ಸಂಜೆ ಭಾರಿ ಮಳೆ-ಗಾಳಿಗೆ ಫಲಕ್ಕೆ ಬಂದ ಪಪ್ಪಾಯಿ ತೋಟ ಬಹುತೇಕ ನೆಲಕ್ಕುರುಳಿದ್ದರಿಂದ ಅಂದಾಜು ₹1 ಕೋಟಿ ಮೌಲ್ಯದ ಪಪ್ಪಾಯಿ ಬೆಳೆ ನಷ್ಟವಾಗಿದೆ.

ಗ್ರಾಮದ ಪ್ರಗತಿಪರ ರೈತ ಕೆ.ವೀರಭದ್ರಪ್ಪರ 11 ಎಕರೆ ಫಲಕ್ಕೆ ಬಂದ ಪಪ್ಪಾಯಿ ತೋಟ ಗಾಳಿಮಳೆಗೆ ಸಂಪೂರ್ಣ ನೆಲಕ್ಕುರಳಿದ್ದು ₹35 ಲಕ್ಷ ನಷ್ಟವಾಗಿದೆ. ಇದೇ ಗ್ರಾಮದ ಮಲ್ಲಿಕಾರ್ಜುನ ಅವರ 4 ಎಕರೆ ಪಪ್ಪಾಯಿ ತೋಟ, ದ್ಯಾಮಣ್ಣನ 8 ಎಕರೆ ಪಪ್ಪಾಯಿ, ಕ್ಯಾಸನಕೆರೆ ಸಿದ್ದಪ್ಪರ ನಾಲ್ಕಾರು ಎಕರೆ ಪಪ್ಪಾಯಿ, ಅಜ್ಜನಗೌಡ್ರು ಅವರ 8 ಎಕರೆ ಪಪ್ಪಾಯಿ, ಶಿವಣ್ಣ ಅವರ 5 ಎಕರೆ ಪಪ್ಪಾಯಿ ತೋಟ, ದೇವರಾಜ ಅವರ 5 ಎಕರೆ ಪಪ್ಪಾಯಿ ತೋಟ ಬಹುತೇಕ ನೆಲಕಚ್ಚಿದೆ. ಒಟ್ಟು ಅಂದಾಜು ₹1 ಕೋಟಿ ನಷ್ಟವಾಗಿದೆ ಎಂದು ರೈತರು ಅಂದಾಜಿಸಿದ್ದಾರೆ. ಅಲ್ಲದೇ ಇತರೆ ಹಲವಾರು ರೈತರ ಮೆಕ್ಕೆಜೋಳ, ವೀಳ್ಯದೆಲೆ ತೋಟ ಸೇರಿದಂತೆ ಹತ್ತು ಹಲವು ಬೆಳೆಗಳಿಗೆ ಹಾನಿಯಾಗಿದೆ. ಕೂಡ್ಲಿಗಿ ತಹಶೀಲ್ದಾರ್ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬುಧವಾರ ತೋಟಕ್ಕೆ ಬಂದು ಪರಿಶೀಲನೆ ಮಾಡಿ ನಷ್ಟದ ಅಂದಾಜು ಮಾಡಿ ಈ ರೈತರಿಗೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಎಂ.ಬಿ. ಅಯ್ಯನಹಳ್ಳಿಯಲ್ಲಿ ಹಾರಕಬಾವಿ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಸೀಟ್ ಸೇರಿದಂತೆ ಕೆಲವು ಮನೆಗಳ ಮೇಲ್ಚಾವಣಿ ಹಾರಿಹೋಗಿವೆ.

ಚಂದ್ರಶೇಖರಪುರದಲ್ಲಿ ಸಿಡಿಲಿಗೆ ರೇಷ್ಮೆ ಗುಡಿಸಲು ಭಸ್ಮ:

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಚಂದ್ರಶೇಖರಪುರ ಗ್ರಾಮದ ಹೊರವಲಯದಲ್ಲಿ ವೀರಣ್ಣ ಎನ್ನುವವರಿಗೆ ಸೇರಿದ ಜಮೀನೊಂದರಲ್ಲಿದ್ದ ರೇಷ್ಮೆಯ ಮನೆಗೆ ಸಿಡಿಲು ಅಪ್ಪಳಿಸಿದ ಪರಿಣಾಮ ಗುಡಿಸಲು ಹೊತ್ತಿ ಉರಿದು ಲಕ್ಷಾಂತರ ಮೌಲ್ಯದ ಗುಡಿಸಲು, ರೇಷ್ಮೆ ಪರಿಕರ ನಷ್ಟ ಸಂಭವಿಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.ಸಂಜೆ ಭಾರೀ ಗಾಳಿ, ಗುಡುಗು, ಸಿಡಿಲು ಬಂದಾಗ ಸಿಡಿಲಿಗೆ ಗುಡಿಸಲು ಮನೆಯೊಂದು ಆಹುತಿಯಾಗಿದ್ದು, ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದರಿಂದ ಇಡೀ ಗುಡಿಸಲು ಅಗ್ನಿಶಾಮಕ ಠಾಣೆಯವರು ಬರುವುದಕ್ಕಿಂತ ಮುಂಚೆಯೇ ಸುಟ್ಟುಭಸ್ಮವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಊರಲ್ಲಿ ಆಗಿದ್ದರೆ ಭಾರೀ ನಷ್ಟ ಸಂಭವಿಸುತ್ತಿತ್ತು. ಸುತ್ತಮುತ್ತ ಹಸಿರು ಜಮೀನು ಇದ್ದುದರಿಂದ ಬೆಂಕಿಯ ಕೆನ್ನಾಲಗೆ ಬೇರೆ ಕಡೆ ವ್ಯಾಪಿಸಲು ಆಗಿಲ್ಲ. ಹೀಗಾಗಿ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಗುಡೇಕೋಟೆ ಭಾಗದಲ್ಲಿ ಸಿಡಿಲಿಗೆ ಪ್ರತಿವರ್ಷ ಜೀವಹಾನಿ, ಪ್ರಾಣಹಾನಿ ಸೇರಿದಂತೆ ಇಂತಹ ಘಟನೆಗಳಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.

Share this article