ಪಟ್ಟಣ ಪಂಚಾಯಿತಿಯ ಆಸ್ತಿಗಳು ಹಣವಂತರ ಪಾಲು

KannadaprabhaNewsNetwork | Published : Apr 16, 2025 12:36 AM

ಸಾರಾಂಶ

ತುರುವೇಕೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾಕಷ್ಟು ಪಂಚಾಯಿತಿಯ ಆಸ್ತಿಗಳು ಹಣವಂತರ ಪಾಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಚೆಂಡೂರು ಮೋಹನ್ ಕುಮಾರ್ ಆಪಾದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುರುವೇಕೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾಕಷ್ಟು ಪಂಚಾಯಿತಿಯ ಆಸ್ತಿಗಳು ಹಣವಂತರ ಪಾಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಚೆಂಡೂರು ಮೋಹನ್ ಕುಮಾರ್ ಆಪಾದಿಸಿದ್ದಾರೆ. ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆಲವು ದಾಖಲೆಗಳ ಸಹಿತ ಅವರು ಆರೋಪ ಮಾಡಿದರು. ತಿಪಟೂರು ರಸ್ತೆಯ ಕೋಟೆ ದಿಣ್ಣೆ ರಸ್ತೆಯ ಅಸೆಸ್ ಮೆಂಟ್ ನಂಬರ್ 567 ಮತ್ತು 535 ರಲ್ಲಿ ನ 45/35 ಅಳತೆಯ ನಿವೇಶನವನ್ನು ಖಾಸಗಿ ವ್ಯಕ್ತಿಯೋರ್ವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದರೂ ಸಹ ಕ್ರಮ ಕೈಗೊಂಡಿಲ್ಲ. ಈ ಕುರಿತು ಲೋಕಾಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಪಟ್ಟಣದ ತಾಲೂಕು ಕಛೇರಿಯ ಮುಂಭಾಗದ ರಸ್ತೆಯಲ್ಲಿರುವ ಜನತಾ ಕ್ಲಿನಿಕ್ ನ ಮಂಭಾಗದ ಪಂಚಾಯಿತಿಯ ಆಸ್ತಿಯನ್ನು ಸುಳ್ಳು ದಾಖಲೆ ಸೃಷ್ಠಿಸಿ ವ್ಯಕ್ತಿಯೋರ್ವರಿಗೆ ನೀಡಲಾಗಿದೆ. ಆ ನಿವೇಶನ ಪಂಚಾಯಿತಿಯ ಆಸ್ತಿಯಾಗಿದ್ದರಿಂದ ಅಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕುಡಿಯುವ ನೀರಿನ ಬಾವಿ ಸಹ ಇತ್ತು. ಅವೆಲ್ಲವನ್ನೂ ಮುಚ್ಚಿ ಅನಧಿಕೃತವಾಗಿ ವಿತರಿಸಲಾಗಿದೆ. ಈ ನಿವೇಶನವನ್ನು ಹರಾಜು ಪ್ರಕ್ರಿಯೆಯಲ್ಲಿ ನೀಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಲಾಗಿದೆ. ಈ ಕುರಿತು ಲೋಕಾಯುಕ್ತ ಮತ್ತು ಭೂಕಬಳಿಕೆಯ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡಿ ಎಂದು ಮನವಿ ಸಲ್ಲಿಸಿದರೂ ಸಹ ಇದುವರೆಗೂ ನೀಡಿಲ್ಲ ಎಂದು ಮೋಹನ್ ಕುಮಾರ್ ದೂರಿದರು. ಇನ್ನೂ ಹಲವಾರು ಸರ್ಕಾರಿ ಆಸ್ತಿ ಹಣವಂತರ ಪಾಲಾಗಿರುವುದನ್ನು ಕಂಡುಹಿಡಿದು ತನಿಖೆಗೆ ಆಗ್ರಹಿಸಿರುವುದರಿಂದ ಪಟ್ಟಣ ಪಂಚಾಯಿತಿಯ ಕೆಲವು ಸದಸ್ಯರು ಹಾಗೂ ಇನ್ನಿತರರು ತಮಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿಯೂ ಮೋಹನ್ ಹೇಳಿದರು. ಪಟ್ಟಣ ಪಂಚಾಯಿತಿ ವತಿಯಿಂದ ಇಲ್ಲಿಯ ಪಟ್ಟಣ ಬ್ಯಾಂಕ್ ಗೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಸುಮಾರು 25 ಲಕ್ಷ ರುಗಳನ್ನು ಠೇವಣಿ ಇಡಲಾಗಿತ್ತು. ಅದನ್ನು ಬ್ಯಾಂಕ್ ಹಿಂತಿರುಗಿಸಿರಲಿಲ್ಲ, ಆದರೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಮತ್ತು ಬ್ಯಾಂಕಿನ ಆಡಳಿತ ಮಂಡಲಿಯ ಪದಾಧಿಕಾರಿಗಳು ಕೇವಲ ಅಸಲು ಹಣವನ್ನು ನೀಡಲು ಒಪ್ಪಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಸಾರ್ವಜನಿಕರ ಹಣ ದುರುಪಯೋಗ ಆಗಕೂಡದು. ಬ್ಯಾಂಕ್ ನ ಬಡ್ಡಿ ಹಣದಲ್ಲಿ ಪಟ್ಟಣದಲ್ಲಿ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಯನ್ನು ಮಾಡಬಹುದಾಗಿದೆ. ಈ ಕುರಿತು ಮಾಡಲಾಗಿರುವ ಒಳ ಒಪ್ಪಂದದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ರ್ ಎಚ್ಚರಿಕೆ ನೀಡಿದರು. ಇದೇ ಪಟ್ಟಣ ಬ್ಯಾಂಕ್ ನೂತನ ಕಟ್ಟಡ ಕಟ್ಟಲು ಸುಳ್ಳು ದಾಖಲಾತಿ ಸೃಷ್ಠಿಸಿ ಕಟ್ಟಡದ ನೀಲ ನಕ್ಷೆ ಸಿದ್ದಪಡಿಸಿದೆ. ಬ್ಯಾಂಕ್ ಸುಳ್ಳು ದಾಖಲೆ ನೀಡಿದಲ್ಲಿ ಆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಮೋಹನ್ ಕುಮಾರ್ ಆಗ್ರಹಿಸಿದರು.

ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ , ಈ ಹಿಂದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಬೇಡ್ಕರ್ ಭವನದ ನಿವೇಶನ ಒತ್ತುವರಿಯಾಗಿತ್ತು. ಅದನ್ನೂ ಸಹ ಹೋರಾಟ ಮಾಡೇ ತೆರವುಗೊಳಿಸಲಾಗಿತ್ತು. ಈಗ ಪಟ್ಟಣದ ಆಯಕಟ್ಟಿನ ಜಾಗದಲ್ಲಿದ್ದ ನಿವೇಶನಗಳನ್ನು ಬಲಾಡ್ಯರು ಪಡೆದಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿ ಸಿದ್ಧವಿದೆ ಎಂದರು.

ಈ ಸಂಧರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಮುನಿಯೂರು ಮಂಜುನಾಥ್, ಹರೀಶ್, ಕನ್ನಡದ ಕಂದ ವೆಂಕಟೇಶ್, ಸೂಳೇಕೆರೆ ದೊರೆಸ್ವಾಮಿ, ಸಾಮಾಜಿಕ ಹೋರಾಟ ಸಮಿತಿಯ ಅಧ್ಯಕ್ಷ ರುದ್ರೇಶ್, ಸೋಮೇನಹಳ್ಳಿ ಆಕಾಶ್, ನರಸಿಂಹಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article