ಕನ್ನಡಪ್ರಭ ವಾರ್ತೆ, ತುಮಕೂರುಡೀಸೆಲ್ ಮೇಲಿನ ಸೆಸ್ ಕಡಿತ, ಅಂತಾರಾಜ್ಯ ಆರ್.ಟಿ.ಓ. ಚೆಕ್ ಪೋಸ್ಟ್ ರದ್ದು, ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜ್ ಮುಚ್ಚುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ಲಾರಿಗಳನ್ನು ರಸ್ತೆಗಿಳಿಸದೆ ಮುಷ್ಕರ ಆರಂಭಿಸಿದ್ದು, ಸರಕು ಸಾಗಣೆ ವಾಹನಗಳ ಸಂಚಾರ ಸ್ತಬ್ಧವಾಗಿದೆ.ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಇಳಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲಾರಿ ಮಾಲೀಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮುಷ್ಕರ ಕೈಗೊಂಡಿದ್ದಾರೆ. ಲಾರಿ ಮಾಲೀಕರ ಮುಷ್ಕರದಿಂದಾಗಿ ಲಾರಿಗಳು, ಸರಕು ಸಾಗಣೆ ವಾಹನಗಳು ರಸ್ತೆಗಿಳಿಯದೆ ನಗರದ ರಿಂಗ್ ರಸ್ತೆಯಲ್ಲಿರುವ ಲಾರಿ ನಿಲ್ದಾಣ ಸೇರಿದಂತೆ ರಸ್ತೆ ಬದಿಗಳಲ್ಲಿ ಸಂಚಾರ ಸ್ಥಗಿತಗೊಳಿಸಿ ಸಾಲು ಸಾಲಾಗಿ ನಿಂತಿವೆ. ಲಾರಿ ಮಾಲೀಕರು ಮುಷ್ಕರ ಕೈಗೊಂಡಿರುವುದರಿಂದ ನಗರ ಸೇರಿದಂತೆ ಹೊರ ಭಾಗದ ಯಾವುದೇ ರಸ್ತೆಗಳಲ್ಲಿ ಲಾರಿ ಸಂಚಾರ ಕಂಡು ಬರುತ್ತಿಲ್ಲ. ಲಾರಿ ಮಾಲೀಕರು ಮುಷ್ಕರ ನಡೆಸುತ್ತಿರುವುದರಿಂದ ಈಗಾಗಲೇ ರಾಜ್ಯ ಸರ್ಕಾರ ನೀಡಿರುವ ಬೆಲೆ ಏರಿಕೆ ಜತೆಗೆ ಮತ್ತಷ್ಟು ಬೆಲೆ ಏರಿಕೆಯನ್ನು ಜನಸಾಮಾನ್ಯರು ಹೊರ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ರಾಜ್ಯಾದ್ಯಂತ ಸರಕು ಸಾಗಾಣಿಕೆ ವಾಹನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಹೊರರಾಜ್ಯಗಳಿಂದ ಯಾವುದೇ ರೀತಿಯ ಸರಕು ಸಾಗಾಣಿಕೆಯ ಲಾರಿಗಳು ತುಮಕೂರಿಗೆ ಆಗಮಿಸುತ್ತಿಲ್ಲ.ನಿರಂತರ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಲಾರಿ ಮುಷ್ಕರದಿಂದ ಉಂಟಾಗಿರುವ ಸರಕು ಸಾಗಾಣಿಕೆ ವ್ಯತ್ಯಯದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಲ್ಲಿ, ಮರಳು, ಕಲ್ಲು, ಸಿಮೆಂಟು, ಕಬ್ಬಿಣ ಮತ್ತಿತರೆ ವಸ್ತುಗಳ ಸಾಗಾಟ ಸ್ಥಗಿತಗೊಂಡಿದೆ. ಹಾಲು, ಔಷಧಿ, ತರಕಾರಿ ಹೊರತುಪಡಿಸಿ ಎಲ್ಲಾ ವಸ್ತುಗಳ ಸಾಗಾಟ ನಿಂತುಹೋಗಿದೆ. ಮಾರುಕಟ್ಟೆ , ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲೆಡೆ ಲಾರಿಗಳು, ಗೂಡ್ಸ್ ವಾಹನಗಳು ನಿಂತಲ್ಲೇ ನಿಂತಿವೆ. ಮುಷ್ಕರಕ್ಕೆ ಸುಮಾರು 69 ಸಂಘಟನೆಗಳು ಬೆಂಬಲ ನೀಡಿದ್ದು 6 ಲಕ್ಷ ಲಾರಿಗಳು ಸಂಚಾರ ಸ್ತಬ್ದಗೊಳಿಸಿವೆ ಎಂದುಮೂಲಗಳು ತಿಳಿಸಿವೆ.