ತಾಲೂಕಿನಲ್ಲಿ ಸಂಚರಿಸುವ ಗ್ರಾಮೀಣ ಭಾಗದ ಬಸ್‌ಗಳಿಗೆ ಕಾಗದದ ಬೋರ್ಡ್ ಹಾಕುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.
ಸರಿಯಾದ ಬಸ್ ಗುರುತಿಸಲು ಪ್ರಯಾಣಿಕರಿಗೆ ತೊಂದರೆ । ಸ್ಪಷ್ಟ ಮಾರ್ಗ ಸೂಚನಾ ಫಲಕ ಅಳವಡಿಕೆಗೆ ಆಗ್ರಹ
ಪ್ರಸಾದ್ ನಗರೆ
ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನಲ್ಲಿ ಸಂಚರಿಸುವ ಗ್ರಾಮೀಣ ಭಾಗದ ಬಸ್‌ಗಳಿಗೆ ಕಾಗದದ ಬೋರ್ಡ್ ಹಾಕುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.
ಸುಮಾರು ಐದಾರು ತಿಂಗಳಿಂದ ಹೀಗೆಯೇ ಬಸ್ ಓಡಾಡುತ್ತಿವೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಪ್ರವಾಸಿಗರು ಹಾಗೂ ಹೊರ ಊರಿನಿಂದ ಬರುವ ಪ್ರಯಾಣಿಕರು ಸರಿಯಾದ ಬಸ್ ಗುರುತಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ತಪ್ಪು ಬಸ್ ಹತ್ತುವ ಘಟನೆಗಳೂ ನಡೆಯುತ್ತಿವೆ. ಡಿಜಿಟಲ್ ಯುಗದಲ್ಲಿ ಇನ್ನೂ ಕಾಗದದ ಬೋರ್ಡ್‌ಗಳ ಬಳಕೆ ಮುಂದುವರಿಯುತ್ತಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ಕಾಗದದ ಬೋರ್ಡ್ ಒದ್ದೆಯಾಗುವ, ಹರಿದು ಹೋಗುವ ಸಾಧ್ಯತೆ ಇರುತ್ತದೆ. ಹೊನ್ನಾವರ ಪ್ರವಾಸೋದ್ಯಮ, ಶಿಕ್ಷಣ ಹಾಗೂ ವ್ಯಾಪಾರದ ದೃಷ್ಟಿಯಿಂದ ಪ್ರಮುಖ ತಾಲೂಕಾಗಿದೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಗ್ರಾಮೀಣ ಭಾಗದ ಜನರು ಬಸ್ ಸೇವೆಯನ್ನೇ ಅವಲಂಬಿಸಿದ್ದಾರೆ. ಆದರೆ ಕಾಗದದ ಬೋರ್ಡ್‌ಗಳಿಂದ ಬಸ್‌ಗಳನ್ನು ಗುರುತಿಸಲು ಕಷ್ಟವಾಗುತ್ತಿದೆ. ದೃಷ್ಟಿದೋಷ ಇರುವವರು ಹಾಗೂ ಹೊರ ಊರಿನಿಂದ ಬರುವವರಿಗೆ ಈ ಸಮಸ್ಯೆ ಇನ್ನಷ್ಟು ತೀವ್ರವಾಗಿರುತ್ತದೆ.
ಕುಮಟಾ ಡಿಪೋದಿಂದ ಹೊನ್ನಾವರ ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಗ್ರಾಮೀಣ ಭಾಗಕ್ಕೆ ಒಟ್ಟೂ 44 ಬಸ್ ಓಡಾಡುತ್ತವೆ. ಕೆಲವು ರೂಟ್‌ಗಳಿಗೆ ಹೋಗುವ ಬಸ್‌ಗಳು ಇರದೇ ಇದ್ದಾಗ ಬೇರೆ ಕಡೆ ಹೋಗುವ ಬಸ್ ಗಳನ್ನು ಬಿಡುತ್ತೇವೆ. ದಿನದಲ್ಲಿ ಇಂತಹ ಸಂದರ್ಭ ಐದಾರು ಬಸ್‌ಗಳಿಗೆ ಬರುತ್ತದೆ. ಶಿರಸಿ ವಿಭಾಗಕ್ಕೆ ಹೊನ್ನಾವರ ಬಸ್ ನಿಲ್ದಾಣದಿಂದ ಗ್ರಾಮೀಣ ಭಾಗಕ್ಕೆ ಹೋಗುವ ಎಲ್ಲಾ ಬಸ್‌ಗಳ ಬೋರ್ಡ್ ಹೊಸದಾಗಿ ಮಾಡಲು ಕಳಿಸಿದ್ದೇವೆ ಎನ್ನುತ್ತಾರೆ ಹೊನ್ನಾವರ ಬಸ್ ನಿಲ್ದಾಣದ ಕಂಟ್ರೋಲರ್.
ಸಾಧ್ಯವಾದರೆ ಬಸ್‌ನಲ್ಲಿ ಎಲ್‌ಇಡಿ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಸುಲಭವಾಗಿ ಮಾಹಿತಿ ದೊರೆಯುವಂತೆ ಮಾಡಬೇಕು. ಇಲ್ಲವಾದಲ್ಲಿ ಈ ಮೊದಲಿನಂತೆಯೇ ತಗಡಿನ ಮೇಲೆ ಸ್ಪಷ್ಟವಾಗಿ ಊರಿನ ಹೆಸರನ್ನು ಬರೆದಿರಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರಯಾಣಿಕ ಸ್ನೇಹಿಯಾಗಿರುವುದು ಅತ್ಯಗತ್ಯ ಎನ್ನುತ್ತಾರೆ ಪ್ರಯಾಣಿಕ ಜಗದೀಶ್.
ಶಿರಸಿ ವಿಭಾಗಕ್ಕೆ ಬೋರ್ಡ್ ಹೊಸದಾಗಿ ಬರೆಸುವ ವಿಚಾರ ತಿಳಿಸಿದ್ದೇವೆ. ಹಳೇ ಬೋರ್ಡ್ ಕಳುಹಿಸಿ ಸುಮಾರಷ್ಟು ಬೋರ್ಡ್ ಸರಿಪಡಿಸಿದ್ದೇವೆ. ಹಳೆಯದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಇನ್ನು ಒಂದು ತಿಂಗಳಲ್ಲಿ ಎಲ್ಲಾ ಬಸ್‌ಗಳ ಬೋರ್ಡ್ ಸರಿ ಮಾಡಿಸಲಾಗುವುದು ಎಂದು ಕುಮಟಾ ಬಸ್ ಡಿಪೋ ಮ್ಯಾನೇಜರ್ ವಿನಾಯಕ್ ದೇಶಭಂಡಾರಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.