ಮಾವಿನ ಫಸಲು ರಕ್ಷಣೆಗೆ ಪೇಪರ್ ಕವರ್‌ ರಕ್ಷಾಕವಚ

KannadaprabhaNewsNetwork |  
Published : Apr 23, 2025, 12:35 AM IST
೨೨ಕೆಎಲ್‌ಆರ್-೨ಮಾವಿನಕಾಯಿಗಳಿಗೆ ರೋಗ ರುಜಿನಗಳು ಬರದಂತೆ ರಕ್ಷಣೆ ಕವಚವಾಗಿ ಪೇಪರ್ ಕವರ್‌ಗಳನ್ನು ರೈತರು ಕಾಯಿಗಳಿಗೆ ಕಟ್ಟಿರುವುದು.  | Kannada Prabha

ಸಾರಾಂಶ

ಮಾವಿನಕಾಯಿ ೧.೫ ಗ್ರಾಮ್ ಗಾತ್ರ ಆದ ನಂತರ ಪ್ರತಿ ಕಾಯಿಗೆ ಪೇಪರ್ ಕವರ್‌ನ್ನು ಕವಚವಾಗಿ ಕಟ್ಟುವುದರಿಂದ ಕಾಯಿ ದೊಡ್ಡದಾಗಿ ಋತುವಿಗೆ ಬರುವ ತನಕ ಮಚ್ಚೆ ಸೇರಿದಂತೆ ಯಾವುದೇ ಗಾಯ, ಊಜಿ ಮತ್ತು ಕೀಟಭಾದೆ ಇಲ್ಲದಂತೆ ಪೇಪರ್ ಕವರ್ ರಕ್ಷಣೆ ಮಾಡುತ್ತದೆ. ತೋಟಗಾರಿಕೆ ಇಲಾಖೆಯು ರಿಯಾಯಿತಿ ದರದಲ್ಲಿ ಪೇಪರ್‌ ಕವರ್‌ ನೀಡುತ್ತಿದೆ

ಕನ್ನಡಪ್ರಭ ವಾರ್ತೆ ಕೋಲಾರ ಮಾವಿನ ಫಸಲಿನ ಗುಣಮಟ್ಟ ಕಾಪಾಡಿಕೊಳ್ಳಲು ಮತ್ತು ಊಜಿ ಸೇರಿದಂತೆ ಕೀಟಭಾದೆಯಿಂದ ರಕ್ಷಿಸಲು ರೈತರು ಮಾವಿನ ಕಾಯಿಗೆ ರಕ್ಷಣಾ ಕವಚಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಮಾವು ಮತ್ತು ಟೊಮೆಟೋ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಟೊಮೆಟೋಗೆ ಕೀಟಭಾದೆ ತಗುಲುವಂತೆ ಮಾವಿಗೂ ಕೀಟಭಾದೆಗಳ ಕಾಟ ಹೆಚ್ಚಾಗುತ್ತಿವೆ. ಇದರಿಂದ ಔಷಧಿ ಸಿಂಪಡಣೆ ಮಾಡಿದರು ಕಾಯಿಗಾತ್ರ ಹೆಚ್ಚಾಗುತ್ತಿದ್ದಂತೆ ಕಾಯಿ ಮೇಲೆ ಊಜಿ ಸೇರಿದಂತೆ ಇತರೆ ಕೀಟಗಳು ದಾಳಿ ಮಾಡಿ ಗಾಯಗೊಳಿಸುತ್ತವೆ. ಕೀಟಬಾಧೆಯಿಂದ ರಕ್ಷಣೆ

ಹೂವಿನಿಂದ ಕಾಯಿ ಕಚ್ಚಿದ ನಂತರ ೧೨೦ ದಿನಗಳಲ್ಲಿ ಕಾಯಿ ಋತುವಿಗೆ ಬರುತ್ತದೆ. ಕಾಯಿ ಮೇಲೆ ಯಾವುದೇ ಕೀಟಭಾದೆ ಮತ್ತು ಊಜಿ ಬೀಳದಂತೆ ರಕ್ಷಣಾ ಕವಚವನ್ನು ಹೊದಿಕೆ ಮಾಡಿದರೆ ೧೨೦ ದಿನಗಳ ಬದಲಾಗಿ ೧೩೦ ದಿನಗಳಿಗೆ ಋತುವಿಗೆ ಬರುತ್ತದೆ. ಕಾಯಿಯ ಗಾತ್ರವೂ ಹೆಚ್ಚಾಗುತ್ತದೆ. ಹಾಗೂ ಯಾವುದೇ ಕೀಟಭಾದೆಗಳು ಮತ್ತು ಕಾಯಿಯ ಮೇಲೆ ಗಾಯ ಆಗದಂತೆ ಜೋಪಾನವಾಗಿ ನೋಡಿಕೊಂಡರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಗುತ್ತದೆ. ಮಾವಿನಕಾಯಿ ೧.೫ ಗ್ರಾಮ್ ಗಾತ್ರ ಆದ ನಂತರ ಪ್ರತಿ ಕಾಯಿಗೆ ಪೇಪರ್ ಕವರ್‌ನ್ನು ಕವಚವಾಗಿ ಕಟ್ಟುವುದರಿಂದ ಕಾಯಿ ದೊಡ್ಡದಾಗಿ ಋತುವಿಗೆ ಬರುವ ತನಕ ಮಚ್ಚೆ ಸೇರಿದಂತೆ ಯಾವುದೇ ಗಾಯ, ಊಜಿ ಮತ್ತು ಕೀಟಭಾದೆ ಇಲ್ಲದಂತೆ ಪೇಪರ್ ಕವರ್ ರಕ್ಷಣೆ ಮಾಡುತ್ತದೆ. ತೋಟಗಾರಿಕೆ ಇಲಾಖೆಯು ರಿಯಾಯಿತಿ ದರದಲ್ಲಿ ಪೇಪರ್‌ ಕವರ್‌ ನೀಡುತ್ತಿದೆ.

ಉಷ್ಣಾಂಶದಿಂದಾಗಿ ಫಸಲು ಕುಸಿತ

ತೋರಾಪುರಿ ಹೊರತುಪಡಿಸಿ ಉಳಿದಂತೆ ದಸೇರಿ, ಮಲಗೂಬ, ಮಲ್ಲಿಕ, ಬಾದಾಮಿ, ರಸಪುರಿ, ರಾಜಗಿರ, ಬೇನಿಷ ಮುಂತಾದ ತಳಿಗಳ ಕಾಯಿಗಳಿಗೆ ಈ ರಕ್ಷಣಾ ಕವಚವನ್ನು ಬಳಸುವುದರಿಂದ ಉತ್ತಮ ಇಳುವರಿಯ ಜೊತೆಗೆ ಗುಣಮಟ್ಟವನ್ನು ಕಾಪಾಡಬಹುದಾಗಿದೆ. ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಉಷ್ಣಾಂಶದಲ್ಲಿನ ಏರುಪೇರಿನಿಂದಾಗಿ ಬಿಟ್ಟ ಹೂವೆಲ್ಲ ಕಾಯಿ ಕಚ್ಚಲಿಲ್ಲ. ನುಸಿರೋಗ ಮತ್ತು ಕೀಟಭಾದೆಯಿಂದ ಗೋಲಿಗಾತ್ರದ ಪಿಂದೆಗಳು ಉದುರುತ್ತಿದ್ದ ಕಾರಣ ಫಸಲು ಕಡಿಮೆಯಾಗಿದೆ. ಇರುವ ಫಸಲನ್ನು ಕಾಪಾಡಿಕೊಳ್ಳಲು ರೈತರು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿ ನೀಡಿದ ಮಾವು ಬೆಳೆಗಾರ ರಾಜಾರೆಡ್ಡಿ ಎಂಬುವರು,

ಈ ವರ್ಷ ಫಸಲು ಕಡಿಮೆಯಿರುವ ಕಾರಣ ಇರುವ ಫಸಲನ್ನು ಕಾಪಾಡಿಕೊಳ್ಳಲು ತಿನ್ನಲು ರುಚಿಕರವಾಗಿರುವಂತಹ ವಿವಿಧ ಜಾತಿಯ ಮಾವಿನ ಕಾಯಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪೇಪರ್ ಕವರ್‌ನ್ನು ಬಳಸುವುದು ಸೂಕ್ತ. ಇದರಿಂದ ಊಜಿ ಕಾಟ ಇರುವುದಿಲ್ಲ. ಕೀಟಬಾಧೆಯಿಂದ ರಕ್ಷಣೆ ಮಾಡಬಹುದು. ಪೇಪರ್ ಕವರ್ ಬಳಸಿದ ಕಾಯಿ ಗಾತ್ರವು ಹೆಚ್ಚಾಗುತ್ತದೆ ಎಂದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ