‘ಪೇಪರ್ ಟು ಫ್ಲೈಟ್’ ಕೃತಿ ಲೋಕಾರ್ಪಣೆ

KannadaprabhaNewsNetwork | Published : Oct 20, 2024 2:03 AM

ಸಾರಾಂಶ

ಸಾಹಸಗಾಥೆ ಹೇಳುವ ಸ್ವರಚಿತ ‘ಪೇಪರ್ ಟು ಫ್ಲೈಟ್’ ಪುಸ್ತಕವನ್ನು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ಮಾಜಿ ನಿರ್ದೇಶಕ ಸಿ.ಡಿ.ಬಾಲಾಜಿ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಚ್‌ಎಎಲ್ ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ ‘ಎಲ್‌ಸಿಎ ತೇಜಸ್’ ಅನ್ನು ನೌಕಾಪಡೆಯ ಅಗತ್ಯತೆಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲು ಎದುರಾದ ಸವಾಲುಗಳ ಸಾಹಸಗಾಥೆ ಹೇಳುವ ‘ಪೇಪರ್ ಟು ಫ್ಲೈಟ್’ ಪುಸ್ತಕವು ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಸ್ಫೂರ್ತಿ ನೀಡಲಿದೆ ಎಂದು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ಮಾಜಿ ನಿರ್ದೇಶಕ ಸಿ.ಡಿ.ಬಾಲಾಜಿ ಹೇಳಿದರು.

ಶನಿವಾರ ನಗರದ ಎಚ್‌ಎಎಲ್‌ನಲ್ಲಿರುವ ಎಡಿಎ ಸಭಾಂಗಣದಲ್ಲಿ ಪೆಂಟಗನ್ ಪ್ರೆಸ್ ಪ್ರಕಾಶನದ, ಸ್ವರಚಿತ ಪುಸ್ತಕ ‘ಪೇಪರ್ ಟು ಫ್ಲೈಟ್’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2003ರಲ್ಲಿ ನೌಕಾಪಡೆಗಾಗಿ ತೇಜಸ್ ವಿಮಾನ ಅಭಿವೃದ್ಧಿ ಯೋಜನೆಗೆ ಸರ್ಕಾರದ ಅನುಮೋದನೆಯಿಂದ ಹಿಡಿದು ಪರೀಕ್ಷಾರ್ಥ ಹಾರಾಟದವರೆಗಿನ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ.

ವಿಮಾನವನ್ನು ನೌಕಾಪಡೆ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಶೇ.15ರಿಂದ ಶೇ.20ರಷ್ಟು ಬದಲಾವಣೆ ಮಾಡಿಕೊಂಡರೆ ಸಾಕು ಎಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಆದರೆ, ಯೋಜನೆ ಆರಂಭಿಸಿದ ಬಳಿಕ ನಮ್ಮ ಲೆಕ್ಕಾಚಾರ ತಪ್ಪೆಂದು ಅರಿವಾಯಿತು. ವಿಮಾನದ ವಿನ್ಯಾಸ, ಲ್ಯಾಂಡಿಂಗ್ ಗೇರ್, ಅರ್ರೆಸ್ಟರ್ ಹುಕ್ ಅಳವಡಿಕೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಯಿತು ಎಂದರು.

ಎಡಿಎ ಮಾಜಿ ನಿರ್ದೇಶಕ ಡಾ। ಕೋಟಾ ಹರಿನಾರಾಯಣ ಮಾತನಾಡಿ, ಯೋಜನೆಯಿಂದ ಭಾರತವು ಅನೇಕ ಮಹತ್ವದ ತಂತ್ರಜ್ಞಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ ಕರಗತ ಮಾಡಿಕೊಳ್ಳಲು ಸಾಧ್ಯವಾಯಿತು. ಅತ್ಯಂತ ಸಂಕೀರ್ಣವಾಗಿರುವ ಯೋಜನೆಯ ಕುರಿತು ಹಲವು ಆಯಾಮಗಳಲ್ಲಿ ವಿವರಣೆಯನ್ನು ಪುಸ್ತಕದಲ್ಲಿ ನೀಡಲಾಗಿದೆ. ಇದು ಸಾಮಾನ್ಯರಿಗೂ ಅರ್ಥವಾಗುವ ಜೊತೆಗೆ ಮುಂದಿನ ತಲೆಮಾರಿಗೆ ಮಾರ್ಗದರ್ಶಕ ಗ್ರಂಥವಾಗಲಿದೆ ಎಂದು ಹೇಳಿದರು.

ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್, ಡಿಆರ್‌ಡಿಒ ಮಾಜಿ ಮುಖ್ಯಸ್ಥ ಡಾ। ವಿ.ಕೆ ಅತ್ರೆ, ಪೆಂಟಗನ್ ಪ್ರೆಸ್‌ನ ಸಿಇಒ ರಾಜನ್ ಆರ್ಯ ಉಪಸ್ಥಿತರಿದ್ದರು.

Share this article