ವಿದ್ಯಾವರ್ಧಕ ಸಂಘದ ಚುನಾವಣೆಗೆ ಪಾಪು ಅಭಿಮಾನಿ ಬಳಗ ಪ್ರವೇಶ

KannadaprabhaNewsNetwork | Published : May 8, 2025 12:35 AM

ಸಾರಾಂಶ

ಮೇ 25ರಂದು ಚುನಾವಣೆ ನಡೆಯಲಿದ್ದು, ನಾನು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ರಾಜಕೀಯೇತರ ಹಾಗೂ ಜಾತ್ಯಾತಿತವಾಗಿ ಚುನಾವಣೆ ನಡೆಸುತ್ತೇವೆ. ಇಷ್ಟು ವರ್ಷ ಸೇವೆ ಸಲ್ಲಿಸಿರುವ ಚಂದ್ರಕಾಂತ ಬೆಲ್ಲದ ವಿಶ್ರಾಂತಿ ಪಡೆಯುವ ಮೂಲಕ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಲಿ.

ಧಾರವಾಡ: ನಾಡೋಜ ಪಾಟೀಲ ಪುಟ್ಟಪ್ಪನವರ ಅಧಿಕಾರಾವಧಿ ಬಳಿಕ ಸಂಘದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಸರ್ಕಾರದಿಂದ ವಿಶೇಷ ಅನುದಾನ ತರುವಲ್ಲೂ ಸಂಘವು ವಿಫಲವಾಗಿದೆ. ಹೀಗಾಗಿ ಸಂಘವನ್ನು ಮತ್ತೆ ಸದೃಢಗೊಳಿಸಲು ಪಾಪು ಅವರ ಆಶಯದಂತೆ ಕಾರ್ಯ ನಿರ್ವಹಿಸಲು "ಪಾಪು ಅಭಿಮಾನಿ ಬಳಗ " ಚುನಾವಣೆ ಕಣಕ್ಕಿಳಿದಿದೆ ಎಂದು ವಿಪ ಮಾಜಿ ಸದಸ್ಯ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮೋಹನ ಲಿಂಬಿಕಾಯಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಬರುವ ಮೇ 25ರಂದು ಚುನಾವಣೆ ನಡೆಯಲಿದ್ದು, ನಾನು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ರಾಜಕೀಯೇತರ ಹಾಗೂ ಜಾತ್ಯಾತಿತವಾಗಿ ಚುನಾವಣೆ ನಡೆಸುತ್ತೇವೆ. ಇಷ್ಟು ವರ್ಷ ಸೇವೆ ಸಲ್ಲಿಸಿರುವ ಚಂದ್ರಕಾಂತ ಬೆಲ್ಲದ ವಿಶ್ರಾಂತಿ ಪಡೆಯುವ ಮೂಲಕ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಡಲಿ ಎಂದು ಮನವಿ ಮಾಡಿದ ಲಿಂಬಿಕಾಯಿ, ಸಂಘವನ್ನು ಆರ್ಥಿಕವಾಗಿ ಸಬಲಗೊಳಿಸುವುದೇ ನಮ್ಮ ಉದ್ದೇಶ ಎಂದರು.

ಸಂಘದ ಅಧ್ಯಕ್ಷನಾಗಿ ಆಯ್ಕೆಯಾದರೆ ಸಂಘದೊಳಗೆ ರಾಜಕೀಯ ನುಸುಳದಂತೆ ಎಚ್ಚರ ವಹಿಸಿ ಕೆಲಸ ಮಾಡುತ್ತೇನೆ. ಸಂಘಕ್ಕೆ ಹೊಸ ಚೈತನ್ಯ, ಹೊಸ ಕಾಯಕಲ್ಪ ನೀಡುವ ಕೆಲಸದ ಜತೆಗೆ ಸಂಘದ ಹೋರಾಟದ ಕಿಚ್ಚನ್ನು ಹೆಚ್ಚಿಸುವ, ಸಂಘಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಆರ್ಥಿಕವಾಗಿ ಬಲಿಷ್ಠಗೊಳಿಸುವ ಕೆಲಸ ಮಾಡುತ್ತೇವೆ ಎಂದರು.

ಪ್ರಧಾನ ಕಾರ್ಯದರ್ಶಿ ಆಕಾಂಕ್ಷಿ ಪ್ರಕಾಶ ಉಡಿಕೇರಿ ಮಾತನಾಡಿ, ಪಾಟೀಲ ಪುಟ್ಟಪ್ಪ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರುತ್ತಿದ್ದರು. ಈಗ ಆ ಕೆಲಸ ನಡೆಯುತ್ತಿಲ್ಲ. ಸರ್ಕಾರ ಕಡಿತಗೊಳಿಸಿರುವ ಶೇ. 50ರಷ್ಟು ಅನುದಾನವನ್ನು ಹೆಚ್ಚಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಸಂಘದಲ್ಲಿ ಕೂಡಿಟ್ಟಿದ್ದ ಠೇವಣಿ ಸಹ ಕರಗುತ್ತಿದೆ. ಆದಾಗ್ಯೂ ಸಂಘ ಯಾವುದೇ ಅಭಿವೃದ್ಧಿ ಕಂಡಿಲ್ಲ. ಸಂಘದ ಚುನಾವಣೆ ಘೋಷಣೆ ಬಳಿಕ ಯಾವುದೇ ಕಾರ್ಯಕ್ರಮ ನಡೆಯಬಾರದು. ಆದರೆ ನಿತ್ಯ, ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಚುನಾವಣಾಧಿಕಾರಿಗಳು ಪಾರದರ್ಶಕವಾಗಿ ಚುನಾವಣೆ ನಡೆಸಲಿ ಎಂದು ಮನವಿ ಮಾಡಿದರು.

ತಂಡದ ವಿವರ: ಪಾಪು ಅಭಿಮಾನಿ ಬಳಗದಿಂದ ಅಧ್ಯಕ್ಷ ಸ್ಥಾನಕ್ಕೆ ಮೋಹನ ಲಿಂಬಿಕಾಯಿ, ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಶರಣಪ್ಪ ಕೊಟಗಿ, ಕಾರ್ಯಾಧ್ಯಕ್ಷ ಮನೋಜ ಪಾಟೀಲ, ಕೋಶಾಧ್ಯಕ್ಷ ವೀರಣ್ಣ ಯಳಲ್ಲಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಕಾಶ ಉಡಿಕೇರಿ, ಸಹ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಕಾರ್ಯಕಾರಿ ಸಮಿತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಮೀಸಲಾತಿಯಲ್ಲಿ ಡಾ. ವಿಶ್ವನಾಥ ಚಿಂತಾಮಣಿ, ಮಹಿಳಾ ಮೀಸಲಾತಿಯಲ್ಲಿ ರತ್ನಾ ಐರಸಂಗ, ಸಾಮಾನ್ಯ ವರ್ಗದಲ್ಲಿ ವಿಶ್ವನಾಥ ಅಮರಶೆಟ್ಟಿ, ಪ್ರೊ. ಹರ್ಷ ಡಂಬಳ, ಪ್ರಭು ಹಂಚಿನಾಳ, ದಾನಪ್ಪಗೌಡರ ಎಸ್​.ಎಂ, ಪ್ರಭು ಕುಂದರಗಿ, ಸಂತೋಷ ಪಟ್ಟಣಶೆಟ್ಟಿ ಹಾಗೂ ಆನಂದ ಏಣಗಿ ಸ್ಪರ್ಧಿಸಲಿದ್ದಾರೆ.

Share this article