ಪಾಪು ಕನ್ನಡ ಪತ್ರಿಕೋದ್ಯಮದ ಯೋಧ

KannadaprabhaNewsNetwork | Published : Jul 21, 2024 1:15 AM

ಸಾರಾಂಶ

ಕನ್ನಡಮ್ಮ ಪತ್ರಿಕೆ ಸಮಾಜದ ಕನ್ನಡಿಯಾಗಿ ಗಡಿಭಾಗದ ಜನರ ಸಮಸ್ಯೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಲುಪಿಸಿ ಪರಿಹಾರ ಕಲ್ಪಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ.

ಧಾರವಾಡ:

ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರು ಪತ್ರಿಕೋದ್ಯಮದಲ್ಲಿ ಕನ್ನಡದ ಯೋಧರು. ಅವರ ಹೆಸರಿನಲ್ಲಿ ‌ಕೊಡ‌ ಮಾಡುತ್ತಿರುವ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆಗೆ ಕೊಡುತ್ತಿರುವುದು‌‌‌ ಅಭಿಮಾನದ ಸಂಗತಿ ಎಂದು ಧಾರವಾಡ ಐಐಟಿ ಡೀನ್ ಡಾ. ಎಂ.ಎಸ್. ಶಿವಪ್ರಸಾದ ಹೇಳಿದರು.

ಭಾನುವಾರ ಕರ್ನಾಟಕ ವಿಧ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕನ್ನಡದ ಪ್ರಪಂಚ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಸವಿ ನೆನಪಿನಲ್ಲಿ ಕೊಡಮಾಡುವ ಡಾ. ಪಾಟೀಲ್ ಪುಟ್ಟಪ್ಪನವರ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆ ಸಂಪಾದಕ ರಾಜಕುಮಾರ ಟೋಪಣ್ಣವರ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಕನ್ನಡಮ್ಮ ಪತ್ರಿಕೆ ಸಮಾಜದ ಕನ್ನಡಿಯಾಗಿ ಗಡಿಭಾಗದ ಜನರ ಸಮಸ್ಯೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಲುಪಿಸಿ ಪರಿಹಾರ ಕಲ್ಪಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಕನ್ನಡಮ್ಮ ಪತ್ರಿಕೆಗೆ ಪಾಪು ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೆಯ ವಿಚಾರ. ನನಗೆ ಹಾಗೂ‌ ಸಾವಿರಾರೂ‌‌ ಪತ್ರಕರ್ತರಿಗೆ ಕನ್ನಡದ ‌ಬರವಣಿಗೆ ಕಲಿಸಿದ‌ ವಿಶ್ವವಿದ್ಯಾಲಯ ಕನ್ನಡಮ್ಮ ‌ದಿನಪತ್ರಿಕೆ‌‌ ಎಂದರು.

ಮರಾಠಿಗರ ಪ್ರಾಬಲ್ಯದಲ್ಲಿ ಗಡಿನಾಡ‌ ಬೆಳಗಾವಿಯಲ್ಲಿ ಕನ್ನಡ ಉಳಿಸಲು ಹೋರಾಟ ಹಾಗೂ ಎಂಇಎಸ್ ಮುಖಂಡರಿಗೆ ನಡುಕ ಹುಟ್ಟಿಸಿದ್ದು ಈ ಪತ್ರಿಕೆ ಎಂದು ಹೇಳಿದರು.

ಬೆಳಗಾವಿಯ 18 ವಿಧಾನಸಭಾ ಕ್ಷೇತ್ರದಲ್ಲಿ 5 ಕ್ಷೇತ್ರದಲ್ಲಿ ಎಂಇಎಸ್ ಶಾಸಕರು ಆಯ್ಕೆಯಾಗುತ್ತಿದ್ದರು. ಆಗ ಎಂಇಎಸ್ ಪುಂಡಾಟಿಕೆಯ ಸದ್ದು ಅಡಗಿಸಲು ಕನ್ನಡಮ್ಮ ಪತ್ರಿಕೆಯನ್ನು ಎಂ.ಎಸ್. ಟೋಪಣ್ಣವರ ದಿಟ್ಟತನದಿಂದ 1972ರಲ್ಲಿ ಸ್ಥಾಪಿಸಿದರು. ಎಲ್ಲ ಪತ್ರಿಕೆ ಹುಟ್ಟಿದ್ದು ಸಮಾಜದ ಕಳಕಳಿಯ ಬಗ್ಗೆ. ಆದರೆ ಟೋಪಣ್ಣವರ ‌ಅವರು‌‌ ಮರಾಠಿಗರ‌‌ ಅಟ್ಟಹಾಸ‌, ಸದ್ದು‌‌‌‌ ಅಡುಗಿಸಲು ಪತ್ರಿಕೆ ಆರಂಭಿಸಿದರು‌ ಎಂದು‌ ಹೇಳಿದರು.

ಬೆಳಗಾವಿ, ಚಿಕ್ಕೋಡಿ, ಗೋಕಾಕ, ಖಾನಾಪುರದಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿತ್ತು. ಆಗ ಡಾ. ಪಾಟೀಲ ಪುಟ್ಟಪ್ಪನವರು ಕನ್ನಡದ ಹೋರಾಟ ನಡೆಸಿದಾಗ ಕನ್ನಡಮ್ಮ ಪತ್ರಿಕೆಯಲ್ಲಿ ಟೋಪಣ್ಣವರ ಮುಖಪುಟದಲ್ಲಿ ದೊಡ್ಡದಾಗಿ ಸುದ್ದಿ ಪ್ರಕಟಿಸಿ ಕನ್ನಡಿಗರನ್ನು‌ ಪ್ರೋತ್ಸಾಹಿಸುವ ಕೆಲಸ‌ ಮಾಡಿದ್ದು‌ ಇತಿಹಾಸವಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಕನ್ನಡಮ್ಮ ದಿನಪತ್ರಿಕೆ ಸಂಪಾದಕ ರಾಜಕುಮಾರ ಟೋಪಣ್ಣವರ, ನಮ್ಮ ಪತ್ರಿಕೆ ಪತ್ರಕರ್ತರ ವಿಶ್ವವಿದ್ಯಾಲಯ ಅಲ್ಲ. ಬೆಳಗಾವಿಯಲ್ಲಿ ಸಾಕಷ್ಟು ಕನ್ನಡ ಹೋರಾಟಗಾರರನ್ನು ರೂಪಿಸಿದೆ. ಪತ್ರಿಕೆಯ ಶ್ರೇಯೋಭಿವೃದ್ಧಿಗೆ ಕನ್ನಡಮ್ಮ ಸಿಬ್ಬಂದಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಕನ್ನಡ ಕಟ್ಟುವ ಜತೆಗೆ ಬೆಳಗಾವಿಯ ಜನರ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಜವಾಬ್ದಾರಿ ಪತ್ರಿಕೆ ಮಾಡುತ್ತಿದೆ ಎಂದು ಹೇಳಿದರು.

ಈ ವೇಳೆ ಮೊಟಗಿಮಠ ಪ್ರಭುಚನ್ನಬಸವ ಸ್ವಾಮೀಜಿ, ಸಂಘದ ಚಂದ್ರಕಾಂತ ಬೆಲ್ಲದ, ಕಾರ್ಯದರ್ಶಿ ಶಂಕರ ಹಲಗತ್ತಿ, ಡಾ. ಸಂಜು ಕುಲಕರ್ಣಿ, ಶಂಕರ ಕುಂಬಿ, ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ್‌, ವಿಶ್ವೇಶ್ವರಿ ಹಿರೇಮಠ, ಸತೀಶ ತುರುಮರಿ ಸೇರಿದಂತೆ ಇತರರು ಇದ್ದರು.

Share this article