ಉತ್ತಮ ಪ್ರಜೆಗಳ ರೂಪಿಸುವ ಹೊಣೆ ಪೋಷಕರು,ಶಿಕ್ಷಕರ ಮೇಲಿದೆ: ಶಾಸಕ ಟಿ.ಡಿ.ರಾಜೇಗೌಡ

KannadaprabhaNewsNetwork | Published : Jan 13, 2024 1:31 AM

ಸಾರಾಂಶ

ಪಟ್ಟಣದ ಕೆಳಗಿನಪೇಟೆ ತೋಮರಶೆಟ್ಟಿ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ ಮಕ್ಕಳ ಮನಸ್ಸು ಸಂಕುಚಿತಗೊಳ್ಳುವಂತಹ ವಾತಾವರಣ ಶಾಲೆಯಲ್ಲಿ ಸೃಷ್ಟಿಯಾಗದಂತೆ ವಿದ್ಯಾರ್ಥಿಗಳನ್ನು ಬೆಳೆಸಿದಲ್ಲಿ ದೇಶಕ್ಕೆ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸಿದಂತಾಗುತ್ತದೆ. ಈ ಮಹತ್ತರ ಹೊಣೆಗಾರಿಕೆ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದು ಹೇಳಿದರು.

-ತೋಮರಶೆಟ್ಟಿ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಮಕ್ಕಳ ಮನಸ್ಸು ಸಂಕುಚಿತಗೊಳ್ಳುವಂತಹ ವಾತಾವರಣ ಶಾಲೆಯಲ್ಲಿ ಸೃಷ್ಟಿಯಾಗದಂತೆ ವಿದ್ಯಾರ್ಥಿಗಳನ್ನು ಬೆಳೆಸಿದಲ್ಲಿ ದೇಶಕ್ಕೆ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸಿದಂತಾಗುತ್ತದೆ. ಈ ಮಹತ್ತರ ಹೊಣೆಗಾರಿಕೆ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಕೆಳಗಿನಪೇಟೆ ತೋಮರಶೆಟ್ಟಿ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ನನ್ನ ಈವರೆಗಿನ ಅಧಿಕಾರವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟಿದ್ದೇನೆ. ಮಕ್ಕಳ ಸಂಖ್ಯೆ ಕಡಿಮೆ ಇದ್ದು ಮುಚ್ಚುವ ಹಂತದಲ್ಲಿದ್ದ ಸ್ಪಂದನ ಶಾಲಾ ಪುನಶ್ಚೇತನ ಸಮಿತಿ ಹಾಗೂ ಶಾಲಾ ಸ್ಥಳ ದಾನಿಗಳ ಉತ್ತಮ ಪ್ರಯತ್ನದಿಂದ ಶಾಲೆಗೆಯ ಹಿಂದಿನ ವೈಭವ ಮರುಕಳಿಸಿದೆ. ಇಂತಹ ಶಾಲೆಗೆ ಸಹಕಾರ ನೀಡುವುದು ಪ್ರತಿಯೊಬ್ಬ ಜನಪ್ರತಿನಿಧಿ ಕರ್ತವ್ಯ. ಶಾಲಾ ಸಮಿತಿ ನನ್ನಲ್ಲಿ ಬೇಡಿಕೆ ಇಟ್ಟ ಶುದ್ಧ ಕುಡಿಯುವ ನೀರಿಗಾಗಿ ಬೋರ್‌ವೆಲ್, ವಿವೇಕಾ ಯೋಜನೆಯಡಿ ಶಾಲಾ ಕೊಠಡಿಗಳು ಸೇರಿದಂತೆ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಇನ್ನು ಮುಂದೆಯೂ ಸಹಕಾರ ನೀಡಲಿದ್ದೇನೆ ಎಂದು ಭರವಸೆ ನೀಡಿದರು.

ಸ್ಪಂದನ ಶಾಲಾ ಪುನಶ್ಚೇತನ ಸಮಿತಿ ಅಧ್ಯಕ್ಷ ಕೆ.ಎನ್. ಪ್ರಸನ್ನ ಶೆಟ್ಟಿ ಮಾತನಾಡಿ ಕೇವಲ 6 ಮಕ್ಕಳಿದ್ದ ಮುಚ್ಚುವ ಹಂತ ತಲುಪಿದ್ದ ಶಾಲೆಯಲ್ಲಿ ಈ ವರ್ಷ 6 ನೇ ತರಗತಿಯವರೆಗೂ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಮುಂದಿನ ವರ್ಷ 7ನೇ ತರಗತಿ ಆರಂಭವಾಗಲಿದ್ದು ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಶಾಸಕ ಟಿ.ಡಿ.ರಾಜೇಗೌಡರು ಈ ಶಾಲೆಗಾಗಿ ಹೆಚ್ಚುವರಿ ಕೊಠಡಿ ಮುಂತಾದ ಅಗತ್ಯ ಸೌಲಭ್ಯ ಒದಗಿಸಿದ್ದಾರೆ. ಶಾಲಾ ಸ್ಥಳ ದಾನಿಗಳಾದ ದಿ.| ರುದ್ರಮ್ಮ ಮತ್ತು ವಾಸುಶೆಟ್ಟಿ ದಂಪತಿ ಪುತ್ರ ಕೆ.ವಿ. ಸತೀಶ್ ಶೆಟ್ಟಿ ಅಗತ್ಯವಿರುವ ಕೊಠಡಿಗಳು, ಶೌಚಾಲಯ, ಪ್ರತೀ ವರ್ಷವೂ ಶಾಲೆ ಅತಿಥಿ ಶಿಕ್ಷಕರಿಗೆ ವೇತನ ಸೇರಿದಂತೆ ಈ ಶಾಲೆಗೆ 70 ಲಕ್ಷಕ್ಕೂ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಈ ವರ್ಷದಲ್ಲಿ ಒಂದೂವರೆ ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಶಾಲಾ ಮುಖ್ಯದ್ವಾರ ನಿರ್ಮಿಸಿಕೊಟ್ಟಿದ್ದಾರೆ. ಸ್ಪಂದನ ಸಮಿತಿ ಸದಸ್ಯರು ಸೇರಿದಂತೆ ಅನೇಕ ದಾನಿಗಳು ಮತ್ತು ಪೋಷಕರು ಶಾಲೆ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಕೆ.ವಿ.ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪಂದನ ಸಂಸ್ಥೆ ಎಂ.ಟಿ.ಶಂಕರಪ್ಪ, ಫ್ರಾನ್ಸಿಸ್ ಕರ್ಡೋಜ, ಮೈತ್ರಾ ಗಣೇಶ್, ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ, ರಶೀದ್, ಅಕ್ಷರ ದಾಸೋಹದ ಅಂಜನಪ್ಪ.ಎಲ್., ಎಸ್ ಡಿಎಂಸಿ ಅಧ್ಯಕ್ಷ ಹರೀಶ್, ಮುಖ್ಯಶಿಕ್ಷಕಿ ಶೈಲಾ ಮತ್ತು ಸಹಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಎಸ್ ಡಿಎಂಸಿ ಸದಸ್ಯರಿದ್ದರು.

Share this article