ಡಾ.ಸಿ.ಎಂ.ಜೋಶಿ
ತಾಲೂಕಿನ ತೋಗುಣಸಿ ರಸ್ತೆಗೆ ಹೊಂದಿಕೊಂಡು ಹಾನಾಪೂರ ಎಸ್.ಪಿ. ಗ್ರಾಪಂ ವ್ಯಾಪ್ತಿಯ ವಿಶಾಲವಾದ ಪ್ರದೇಶದಲ್ಲಿ ಕಳೆದ ವರ್ಷ ಇಂದಿರಾಗಾಂಧಿ ವಸತಿ ಶಾಲೆ ಶಾಸಕರಿಂದ ಉದ್ಘಾಟನೆಯಾಗಿದೆ. ಒಂದೇ ವರ್ಷದಲ್ಲಿ ಇಲ್ಲಿನ ಅವ್ಯವಸ್ಥೆ ಕಂಡು ಪಾಲಕರು ರೋಷಿ ಹೋಗಿದ್ದಾರೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸುಧಾರಣೆಗೆ ಮುಂದಾಗಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ತಾಲೂಕಿನ ಮುರುಡಿ ಗ್ರಾಮದ ಸರ್ವೇ ನಂ.77ರಲ್ಲಿ 9.20 ಎಕರೆ ವಿಶಾಲವಾದ ಭೂಮಿಯಲ್ಲಿ ₹ 22.40 ಕೋಟಿ ಅನುದಾನದಲ್ಲಿ ಭವ್ಯವಾದ ಕಟ್ಟಡಗಳನ್ನೊಳಗೊಂಡ ಈ ವಸತಿಶಾಲೆ ನಿರ್ಮಾಣವಾಗಿದೆ. 125 ವಿದ್ಯಾರ್ಥಿನಿಯರು ಮತ್ತು 125 ವಿದ್ಯಾರ್ಥಿಗಳಿಗೆ ಹೀಗೆ ಒಟ್ಟು 250 ವಿದ್ಯಾರ್ಥಿಗಳಿಗೆ ಇಲ್ಲಿ ವಿದ್ಯಾರ್ಜನೆಗೆ ಮತ್ತು ವಸತಿಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಆವರಣದಲ್ಲಿ ಪ್ರಾಚಾರ್ಯರಿಗೆ ಮತ್ತು 13 ಜನ ಸಿಬ್ಬಂದಿಗೆ ಸುಸಜ್ಜಿತ ವಸತಿಗಳೂ ಇವೆ. ಶಾಲೆಯ ವಾತಾವರಣ ತುಂಬಾ ಚನ್ನಾಗಿದ್ದೂ, ವಸತಿ ನಿಲಯದಲ್ಲಿ ಮಾತ್ರ ವಿದ್ಯಾರ್ಥಿಗಳ ವಸ್ತುಗಳಿಗೆ ಭದ್ರತೆಯಿಲ್ಲ ಎಂದು ಪಾಲಕರು ಮತ್ತು ವಿದ್ಯಾರ್ಥಿಗಳು ಆರೋಪಿಸುತ್ತಾರೆ.ವಸತಿ ಕೊಠಡಿಗಳಲ್ಲಿ ಸ್ವಚ್ಛತೆಯ ಕೊರತೆ ಇದೆ. ವಿದ್ಯಾರ್ಥಿಗಳಿಗೆ ಇಲಾಖೆ ಪೂರೈಸಿದ ಟ್ರಂಕ್ (ತಗಡಿನ ಪೆಟ್ಟಿಗೆಗಳು) ಸುರಕ್ಷಿತವಾಗಿಲ್ಲ. ಸರಾಗವಾಗಿ ಕೀಲಿ ತೆಗೆಯಲು ಬರುವಂತಿವೆ. ಹೀಗಾಗಿ ಮೇಲಿಂದ ಮೇಲೆ ವಿದ್ಯಾರ್ಥಿಗಳು ಟ್ರಂಕ್ಗಳಲ್ಲಿ ಇಟ್ಟಿರುವ ಅನೇಕ ವಸ್ತುಗಳನ್ನು ಕೀಲಿ ಮುರಿದು ಕಳ್ಳತನ ಮಾಡಲಾಗುತ್ತಿದೆ ಎಂದು ಪಾಲಕರು ಮತ್ತು ವಿದ್ಯಾರ್ಥಿಗಳು ಹೇಳುತ್ತಾರೆ.
ಈ ವಸತಿ ಶಾಲೆಗೆ ಸಂಬಂಧಿಸಿದ ಮೇಲಧಿಕಾರಿಗಳು ಗಮನಹರಿಸಿ ಶಾಲೆ ವಾತಾವರಣವನ್ನು ಸುಧಾರಿಸಬೇಕು. ಬಡಮಕ್ಕಳ ಉತ್ತಮ ಶಿಕ್ಷಣ ಹಾಗೂ ಭವಿಷ್ಯಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಉತ್ತಮ ನಾಗರಿಕರಾಗುವ ಕನಸು ಹೊತ್ತು ಸರ್ಕಾರ ಕೋಟ್ಯಂತರ ರೂ. ಅನುದಾನದಲ್ಲಿ ನಿರ್ಮಿಸಿದ ವಸತಿ ಶಾಲೆಯಲ್ಲಿ ಕಲಿತ ಮಕ್ಕಳ ಭವಿಷ್ಯ ಉಜ್ವಲವಾಗಬೇಕೇ ವಿನ: ಕಳ್ಳತನ ಕಲಿಯಬಾರದೆಂದು ಪಾಲಕರಾದ ಮುರುಡಿ ಗ್ರಾಮದ ಹನಮಂತ ನೀರಲಕೇರಿ, ಲಾಯದಗುಂದಿ ಗ್ರಾಮದ ಬಸವರಾಜ ದೊಡ್ಡಮನಿ, ಹಳದೂರ ಗ್ರಾಮದ ರಮೇಶ ಮಾದರ ಸೇರಿದಂತೆ ಇನ್ನೂ ಅನೇಕರು ಆಗ್ರಹಿಸಿದ್ದಾರೆ.
ಸೋಮವಾರ ಈ ವಿಷಯವನ್ನು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಗಮನಕ್ಕೂ ತಂದಿದ್ದೇವೆ. ನಮ್ಮ ಮಕ್ಕಳು ಈ ಶಾಲೆಯಲ್ಲಿ ರ್ಯಾಂಕ್ ಬರದಿದ್ದರೂ ಪರವಾಗಿಲ್ಲ. ಕಳ್ಳರಾಗುವುದು ಬೇಡ. ಉತ್ತಮ ಸಂಸ್ಕಾರ ಕಲಿತರೆ ಸಾಕು. ಆದರೆ ಇಲ್ಲಿನ ಮಕ್ಕಳು ಕಳ್ಳತನ ಮಾಡುವುದನ್ನು ಕಲಿಯುತ್ತಿದ್ದಾರೆ. ಇದಕ್ಕೆ ಯಾರು ಹೊಣೆ. ವಸತಿ ನಿಲಯದ ವಾರ್ಡನ್ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದೇ ಮುಂದುವರೆದರೆ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ. ಶಾಸಕರು ಹಾಗೂ ಮೇಲಾಧಿಕಾರಿಗಳು ತಕ್ಷಣ ಗಮನಹರಿಸಬೇಕು.
-ರುಕ್ಮೀಣಿಬಾಯಿ ಪವಾರ ಪ್ರಾಚಾರ್ಯರು, ಇಂದಿರಾಗಾಂಧಿ ವಸತಿ ಶಾಲೆ, ಗುಳೇದಗುಡ್ಡ.
ಈ ಘಟನೆ ನಮ್ಮ ಗಮನಕ್ಕೆ ಪ್ರಾಚಾರ್ಯರು ತಂದಿಲ್ಲ. ಮಾಹಿತಿ ಪಡೆದು ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸುತ್ತೇವೆ.