ತಂದೆ-ತಾಯಿ, ಅಜ್ಜಿ-ತಾತ ಗಲಾಟೆ: ಮಗುವಿನ ವಿದ್ಯೆಗೆ ಕುತ್ತು!

KannadaprabhaNewsNetwork |  
Published : May 17, 2024, 12:33 AM ISTUpdated : May 17, 2024, 09:37 AM IST
High Court

ಸಾರಾಂಶ

ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತು ಜನಜನಿತ. ಆದರೆ, ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ತಂದೆ-ತಾಯಿ ಮತ್ತು ಅಜ್ಜಿ-ತಾತ ನಡುವಿನ ಜಗಳದಲ್ಲಿ ಮಗುವೊಂದು 9 ವರ್ಷವಾದರೂ ಶಾಲೆಗೆ ದಾಖಲಾಗದೆ ಕಲಿಕೆಯಿಂದ ದೂರ ಉಳಿದಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು : ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತು ಜನಜನಿತ. ಆದರೆ, ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ತಂದೆ-ತಾಯಿ ಮತ್ತು ಅಜ್ಜಿ-ತಾತ ನಡುವಿನ ಜಗಳದಲ್ಲಿ ಮಗುವೊಂದು 9 ವರ್ಷವಾದರೂ ಶಾಲೆಗೆ ದಾಖಲಾಗದೆ ಕಲಿಕೆಯಿಂದ ದೂರ ಉಳಿದಿದೆ.

ಇಂತಹೊಂದು ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ಮಗನನ್ನು ಶಾಲೆಗೆ ಸೇರಿಸಲು ತಂದೆ-ತಾಯಿ ಹಾತೊರೆಯುತ್ತಿದ್ದಾರೆ. ಆದರೆ ಕೋರ್ಟ್‌ ಆದೇಶದ ಹೊರತಾಗಿಯೂ ಅಜ್ಜಿ-ತಾತ ಮೊಮ್ಮಗನನ್ನು ಶಾಲೆಗೆ ದಾಖಲಿಸಿಲ್ಲ. ಮಗುವಿನ ಮಾನಸಿಕ ಬೆಳವಣಿಗೆ ಶಿಕ್ಷಣ ಅತಿಮುಖ್ಯ ಎಂದು ಪರಿಗಣಿಸಿರುವ ಹೈಕೋರ್ಟ್‌, ಮಗುವನ್ನು ಸೇರಿಸಲು ಉದ್ದೇಶಿಸಿರುವ ಶಾಲೆಗೆ ಭೇಟಿ, ಪ್ರವೇಶದ ಸ್ಥಿತಿಗತಿ ಅರಿತು ವರದಿ ಸಲ್ಲಿಸುವಂತೆ ಮೈಸೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ (ಡಿಡಿಪಿಐ) ನಿರ್ದೇಶಿಸಿದೆ.

ಮಗುವನ್ನು ಸೇರಿಸಲು ಉದ್ದೇಶಿಸಿರುವ ಶಾಲೆಗೆ ಡಿಸಿಪಿಐ ಭೇಟಿ ನೀಡಬೇಕು. ಮಗುವಿನ ತಂದೆ-ತಾಯಿ ಅಥವಾ ಅಜ್ಜಿ-ತಾತ ಪ್ರವೇಶಾತಿ ಕೋರಿ ಶಾಲೆಗೆ ಅರ್ಜಿ ಸಲ್ಲಿಸಿದ್ದಾರೆಯೇ? ಒಂದು ವೇಳೆ ಅರ್ಜಿ ಸಲ್ಲಿಸಿದ್ದರೆ, ಅದರ ಸ್ಥಿತಿಗತಿ ಏನು? ಒಂದೊಮ್ಮೆ ತಂದೆ-ತಾಯಿ ಅಥವಾ ಅಜ್ಜಿ-ತಾತ ಅರ್ಜಿ ಸಲ್ಲಿಸದೇ ಇದ್ದರೆ, ಮಗುವನ್ನು ಸೇರಿಸಿಕೊಳ್ಳಲು ಶಾಲೆಗೆ ಏನು ತೊಂದರೆ ಇದೆ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ಡಿಡಿಪಿಐಗೆ ಹೈಕೋರ್ಟ್‌ ನಿರ್ದೇಶಿಸಿದೆ. ಸಿಂಗಾಪುರ ಪ್ರಯಾಣ ತಂದ ವ್ಯಾಜ್ಯ

ಬೆಂಗಳೂರಿನಲ್ಲಿ ನೆಲೆಸಿದ್ದ ಮಗುವಿನ ತಂದೆ-ತಾಯಿ, ಅಜ್ಜಿ-ತಾತ 2020ಕ್ಕೂ ಮುನ್ನ ಪುಣೆಗೆ ಸ್ಥಳಾಂತರವಾಗಿದ್ದರು. ಮಗುವಿನ ತಾಯಿಗೆ ಸಿಂಗಾಪುರದಲ್ಲಿ ಉದ್ಯೋಗ ಸಿಕ್ಕಿದ್ದರಿಂದ ಮಗುವನ್ನು ಅಜ್ಜಿ-ತಾತ ಬಳಿಯೇ ಬಿಟ್ಟು ಸಿಂಗಾಪುರಕ್ಕೆ ದಂಪತಿ ತೆರಳಿದ್ದರು. 2020ರಲ್ಲಿ ಸಿಂಗಾಪುರದಿಂದ ಪುಣೆಗೆ ವಾಪಸ್ಸಾಗಿದ್ದರು. ಆದರೆ, ಮಗುವನ್ನು ತಂದೆ-ತಾಯಿಯ ಸುಪರ್ದಿಗೆ ನೀಡಲು ಅಜ್ಜಿ-ತಾತ ನಿರಾಕರಿಸಿದ್ದರು. ಮಗುವನ್ನು ತಮ್ಮ ಸುಪರ್ದಿಗಾಗಿ ಒಪ್ಪಿಸಲು ಆದೇಶಿಸುವಂತೆ ಕೋರಿ ತಂದೆ-ತಾಯಿ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಹೈಕೋರ್ಟ್‌ ಸೂಚಿಸಿತ್ತು.

ಈ ಮಧ್ಯೆಯೇ ಅಜ್ಜಿ-ತಾತ ಶ್ರೀರಂಗಪಟ್ಟಣಕ್ಕೆ ಮಗುವಿನ ಸಮೇತ ಸ್ಥಳಾಂತರಗೊಂಡಿದ್ದರು. ಹಾಗಾಗಿ ತಂದೆ-ತಾಯಿ ಶ್ರೀರಂಗಪಟ್ಟಣದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಮ್ಮ ಸುಪರ್ದಿಗೆ ಮಗುವನ್ನು ನೀಡಲು ಅಜ್ಜಿ-ತಾತನಿಗೆ ಆದೇಶಿಸಲು ಕೋರಿದ್ದರು. ಮತ್ತೊಂದೆಡೆ ಅಜ್ಜಿ-ತಾತ ಸಹ ಮೊಮ್ಮಗನ ಸುಪರ್ದಿಗೆ ಅರ್ಜಿ ಸಲ್ಲಿಸಿದ್ದು, ಆ ಎರಡೂ ಅರ್ಜಿಗಳು ವಿಚಾರಣೆ ಹಂತದಲ್ಲಿದೆ. ಕೌಟುಂಬಿಕ ನ್ಯಾಯಾಲಯ ಮಗುವಿನ ಭೇಟಿಗೆ ತಂದೆ-ತಾಯಿಗೆ ಅವಕಾಶ ಕಲ್ಪಿಸಿತ್ತು. ಜತೆಗೆ, ಮಗುವನ್ನು ಶಾಲೆಗೆ ಸೇರಿಸಲು 2021ರಲ್ಲಿ ನಿರ್ದೇಶಿಸಿತ್ತು.

ಈ ವ್ಯಾಜ್ಯ ಆರಂಭವಾದಾಗ ಮಗುವಿಗೆ ಐದು ವರ್ಷವಿತ್ತು. ತಂದೆ-ತಾಯಿ 2021ರಲ್ಲಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ದಾಖಲಿಸಿ, ಮಗನನ್ನು ಭೇಟಿ ಮಾಡಲು ತಮಗೆ ಸೂಕ್ತವಾಗಿ ಅವಕಾಶ ಕಲ್ಪಿಸುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಲು ತಂದೆ-ತಾಯಿ, ಅಜ್ಜಿ-ತಾತನಿಗೆ ಹೈಕೋರ್ಟ್‌ ನಿರ್ದೇಶಿಸಿತ್ತು. 2022ರಲ್ಲಿ ಮತ್ತೆ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ ತಂದೆ-ತಾಯಿ, ಮಗುವನ್ನು ಕಾಣಲು, ಸಮಾಲೋಚಿಸಲು ಅಜ್ಜಿ-ತಾತ ಸೂಕ್ತ ಅವಕಾಶ ಕಲ್ಪಿಸುತ್ತಿಲ್ಲ. ಶ್ರೀರಂಗಪಟ್ಟಣದ ಕೆಆರ್‌ಎಸ್‌ನಲ್ಲಿ ಭೇಟಿಗೆ ಸ್ಥಳ ನಿಗದಿ ಮಾಡುತ್ತಾರೆ. ಕೆಲವೇ ನಿಮಿಷ ಮಗುವನ್ನು ತೋರಿಸಿ, ವಾಪಸ್‌ ಕರೆದೊಯ್ಯುತ್ತಾರೆ. ಶಾಲೆಗೆ ಸಹ ಸೇರಿಸಿಲ್ಲ. ಕಾರಣ ಕೇಳಿದರೆ, ಮಗು ಮಾನಸಿಕ ಸಮಸ್ಯೆ ಎದುರಿಸುತ್ತಿದೆ ಎಂದು ಅಜ್ಜಿ-ತಾತ ಹೇಳುತ್ತಿರುವುದಾಗಿ ದೂರಿದ್ದರು.

ಕೋರ್ಟ್‌ ಸೂಚನೆ ಮೇರೆಗೆ ನಿಮ್ಹಾನ್ಸ್‌ ವೈದ್ಯರು ಪರೀಕ್ಷೆ ನಡೆಸಿ ಆದ್ಯತೆ ಮೇರೆಗೆ ಮಗುವನ್ನು ಶಾಲೆಗೆ ದಾಖಲಿಸಬೇಕು. ಮಾನಸಿಕ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮಗುವಿಗೆ ಕುಟುಂಬದ ಎಲ್ಲ ಸದಸ್ಯರೊಂದಿಗೆ ಮುಕ್ತವಾಗಿರಲು ಅವಕಾಶ ಒದಗಿಸಬೇಕು ಎಂದು ವರದಿ ನೀಡಿದ್ದರು. ಅದರಂತೆ ಹೈಕೋರ್ಟ್‌ ತಂದೆ-ತಾಯಿ, ಅಜ್ಜಿ-ತಾತ ಸಮಾಲೋಚಿಸಿ ಮಗುವನ್ನು ಶಾಲೆಗೆ ಸೇರಿಸಬೇಕು ಎಂದು 2023ರ ನ.29ರಂದು ಆದೇಶಿಸಿತ್ತು. ಇತ್ತೀಚೆಗೆ ಅರ್ಜಿ ವಿಚಾರಣೆಗೆ ಬಂದಾಗ ಪೋಷಕರ ಪರ ವಕೀಲರು, ಕೋರ್ಟ್‌ ಸೂಚನೆಯಿದ್ದರೂ ಹಾಗೂ ಮಗುವಿಗೆ 9 ವರ್ಷವಾಗಿದ್ದರೂ ಶಾಲೆಗೆ ಸೇರಿಸಿಲ್ಲ ಎಂದು ತಿಳಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!