ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಿಕ್ಷಕರ ಜೊತೆಗೂಡಿ ಪೋಷಕರು ಕೈ ಜೋಡಿಸಿದಾಗ ಮಾತ್ರ ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವೆಂದು ಚಿಕ್ಕಬಳ್ಳಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಿಕ ಹಾಗೂ ದೈಹಿಕ ಶಿಕ್ಷಣ ಅಧೀಕ್ಷಕ ಅರುಣ್ ಕುಮಾರ್ ತಿಳಿಸಿದರು.ತಾಲೂಕಿನ ದಿಬ್ಬೂರು ಗ್ರಾಮದ ನ್ಯೂ ಸೆಂಟ್ರಲ್ ಇಂಗ್ಲೀಷ್ ಸ್ಕೂಲ್ ನ ಎರಡನೇ ವರ್ಷದ ಶಾಲಾ ವಾರ್ಷಿಕೋತ್ಸವ, ಮಕ್ಕಳ ಪ್ರಪಂಚ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಪೋಷಕರಿಗೆ ಕಿವಿಮಾತು ಹೇಳಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ, ಪಠ್ಯೇತರ ಚಟುವಟಿಕೆಯೂ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕಂತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಶಾಲೆಯ ಕಾರ್ಯಾಧ್ಯಕ್ಷ ಡಿ.ಎನ್.ಉಮೇಶ್ ಮಾತನಾಡಿ, ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೆ ಅವಿರತ ಶ್ರಮ ಬೇಕು. ದೂರದರ್ಶನ, ಮೊಬೈಲ್ ಗಳು ಮಕ್ಕಳ ಮನಸ್ಸನ್ನು ಆಕ್ರಮಿಸಿಕೊಂಡಿವೆ. ಅವುಗಳನ್ನು ದಾಟಿ ಯಶಸ್ಸಿಗೆ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.ಪುಟಾಣಿ ಮಕ್ಕಳು ನಡೆಸಿಕೊಟ್ಟ ಸಾಂಸ್ಕ್ರತಿಕ ಕಾರ್ಯಕ್ರಮಗಳು ಪೋಷಕರ ಗಮನ ಸೆಳೆದವು. ದಿಬ್ಬೂರು ಗ್ರಾಪಂ ಸದಸ್ಯರಾದ ಮಹೇಶ್ ಡಿ.ಎನ್, ಶಾಲೆಯ ಕಾರ್ಯದರ್ಶಿ ಕೃಷ್ಣಮೂರ್ತಿ, ಸಂಸ್ಥೆಯ ಚೇರ್ಮನ್ ಕೆ.ಮಂಜುಳಾ ಮುರುಳಿಧರ್, ಆಡಳಿತ ಅಧಿಕಾರಿ ಮಿಥುನ್ , ನಿರ್ದೇಶಕ ಎಂ.ಕೃಷ್ಣಪ್ಪ, ಮಂಚನಬೆಲೆ ಗ್ರಾಪಂ ಉಪಾಧ್ಯಕ್ಷ ಶ್ರೀಧರ ಎಂಎಸ್, ಗ್ರಾಮದ ಪ್ರಮುಖರಾದ ವೆಂಕಟೇಶ್, ಬಾಬು, ಶಾಲೆಯ ಸಿಬ್ಬಂದಿ ಇದ್ದರು.