- ಸಾದರ ನೌಕರರ ಬಳಗದಿಂದ ವಿದ್ಯಾರ್ಥಿಗಳಿಗೆ ಪುರಸ್ಕಾರ
- - -ದಾವಣಗೆರೆ: ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ವಿಶ್ರಾಂತ ಉಪ ನಿರ್ದೇಶಕ ಜಿ.ಎಸ್. ರಾಜಶೇಖರಪ್ಪ ಹೇಳಿದರು.
ಸಾದರ ನೌಕರರ ಬಳಗದಿಂದ ನಗರದ ತರಳಬಾಳು ಬಡಾವಣೆಯ ಸಾದರ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಅವರು ಮಾತನಾಡಿದರು.ಪ್ರಸ್ತುತ ಪೋಷಕರು ಮಕ್ಕಳಿಗೆ ಬಡತನ, ಕಷ್ಟ ಗೊತ್ತಾಗದಂತೆ ಬೆಳೆಸುತ್ತಿದ್ದಾರೆ. ಮಕ್ಕಳು ಕೇಳುವ ಮೊದಲೇ ಅವರಿಗೆ ಬೇಕಾಗಿದ್ದನ್ನು ತಂದಿಡುತ್ತಿದ್ದಾರೆ. ಹವಾನಿಯಂತ್ರಿತ ಕೊಠಡಿ, ಆಟಿಕೆ, ಲ್ಯಾಪ್ ಟಾಪ್ ಇಂಥ ದುಬಾರಿ ವಸ್ತುಗಳು ಮತ್ತು ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಅವುಗಳ ಮೌಲ್ಯಗಳು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದಿನ ಮಕ್ಕಳಿಗೆ ಕಷ್ಟಪಡುವುದೇ ತಿಳಿದಿಲ್ಲ. ಪೋಷಕರು ಅವರಿಗೆ ಕಷ್ಟಗಳು ಗೊತ್ತಾಗದಂತೆ ಬೆಳೆಸೋದು ತರವಲ್ಲ. ಮಕ್ಕಳು ಕೇಳಿದ ತಕ್ಷಣವೇ ಎಲ್ಲವನ್ನೂ ಕೊಡಿಸಬಾರದು. ಅವರಿಗೆ ಕಷ್ಟದ ಬೆಲೆ ತಿಳಿಸಿ, ವಸ್ತುವಿನ ಬೆಲೆ ತಿಳಿದರೆ ಜೀವನದ ಕಷ್ಟ ಅರ್ಥವಾಗಿ, ಸಾಧಿಸುವ ಛಲ ಬರುತ್ತದೆ. 2010ರಲ್ಲಿ ಆರಂಭವಾದ ಸಾದರ ನೌಕರರ ಬಳಗ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇದು ಶ್ಲಾಘನೀಯ. ಮುಂದೆ ಸಾದರ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಬಳಗದ ಅಧ್ಯಕ್ಷ ಕೆ.ನಾಗಪ್ಪ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ನಿರ್ದೇಶಕ ಜಗದೀಶ್ ಕೂಲಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಶಾನಬೋಗ್ ಪ್ರಾರ್ಥಿಸಿದರು. ಡಾ. ಜಿ.ಎನ್.ಎಚ್. ಕುಮಾರ್, ಎ.ಬಿ. ರುದ್ರಮ್ಮ, ಎ.ಬಿ.ಕರಿಬಸಪ್ಪ ಇತರರು ಇದ್ದರು.
- - --14ಕೆಡಿವಿಜಿ34:
ದಾವಣಗೆರೆಯಲ್ಲಿ ಸಾದರ ನೌಕರರ ಬಳಗದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.