ಧಾರವಾಡ: ತಮ್ಮದಲ್ಲದ ತಪ್ಪಿಗೆ ಪರಿತಪಿಸುತ್ತಿರುವ ಹಾಗೂ ದೌರ್ಜನ್ಯಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿರುವ ಬಾಲ ಸಂತ್ರಸ್ತೆಯರೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಂಗಳವಾರ ನೇರ ಸಂವಾದದ ಮೂಲಕ ಮಾತನಾಡಿದರು. ಜತೆಗೆ ಅವರ ಪಾಲಕರಿಗೆ ಧೈರ್ಯ ತುಂಬಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಪ್ರೋತ್ಸಾಹ ನೀಡಿದರು.
ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಲೈಂಗಿಕ ಶಿಕ್ಷಣದ ಅಗತ್ಯವಿದೆ. ವಿಶೇಷವಾಗಿ 13 ರಿಂದ 19 ವರ್ಷದವರೆಗೆ ಹೆಣ್ಣು ಮತ್ತು ಗಂಡು ಎಂಬ ವ್ಯತ್ಯಾಸವಿಲ್ಲದೆ ಅವರಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುತ್ತವೆ. ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ತಿಳುವಳಿಕೆ, ಮಾಹಿತಿ, ಆಪ್ತತೆ ಅಗತ್ಯವಿದ್ದು, ಪಾಲಕರು ಹೆಚ್ಚು ಸಮಯವನ್ನು ಮಕ್ಕಳೊಂದಿಗೆ ಕಳೆದು ಅವರ ಭಾವನೆಗಳಿಗೆ, ಕುತೂಹಲಗಳಿಗೆ ಸ್ಪಂದಿಸಬೇಕು ಎಂದರು.
ಪೋಷಕರು ಬಾಲ್ಯ ವಿವಾಹವನ್ನು ಮಾಡುವ ಮುಂಚೆ ಒಂದು ಸಾರಿ ಮಕ್ಕಳ ಮನಸ್ಥಿತಿ, ಮಾನಸಿಕ ಸ್ಥಿತಿ, ದೈಹಿಕವಾಗಿ ಅವರ ಮೇಲೆ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ಮದುವೆ ಮಾಡಿದರೆ ಭಾರ ಕಡಿಮೆ ಆಗುತ್ತದೆ ಎಂಬ ಮನಸ್ಥಿತಿಯಿಂದ ಪೋಷಕರು ಹೊರ ಬರಬೇಕು ಎಂದ ಅವರು, ಪೋಷಕರು ಮಕ್ಕಳೊಂದಿಗೆ ಮನಸ್ಸು ಬಿಚ್ಚು ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಗಂಡು- ಹೆಣ್ಣು ಎಂದು ಭೇದ ಭಾವ ಮಾಡದೆ, ಅವರಿಗೆ ಅರಿವು ಮೂಡಿಸಬೇಕು. ಗಂಡು ಮಕ್ಕಳಿಗೂ ಕೂಡ ಸಮಾಜದಲ್ಲಿ ಹೆಣ್ಣು ಮಕ್ಕಳೊಂದಿಗೆ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂಬುದನ್ನು ತಿಳಿ ಹೇಳಬೇಕು ಎಂದರು.ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ತಂಡವು ಪೋಷಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ತಿಳಿಸುತ್ತದೆ. ಬಾಲ್ಯ ವಿವಾಹ ಮಾಡುವುದು ಕಾನೂನುಬಾಹಿರ ಮತ್ತು ಅದಕ್ಕೆ ಕಠಿಣ ಶಿಕ್ಷೆ ಇದೆ. ಪೋಷಕರು ಒಪ್ಪದಿದ್ದರೆ ಅಥವಾ ಬಾಲಕಿಯ ರಕ್ಷಣೆ ಅಗತ್ಯವಿದ್ದರೆ, ಅವಳನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ. ಬಾಲಕಿಗೆ ಸಖಿ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ನೀಡಿ, ಆಪ್ತಸಮಾಲೋಚನೆ ನಡೆಸಿ, ಅವಳ ಶಿಕ್ಷಣ ಮುಂದುವರಿಸಲು ಬೇಕಾದ ಎಲ್ಲಾ ನೆರವು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವೈ. ಪಾಟೀಲ ಮಾತನಾಡಿ, ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳಿಗೆ ಮತ್ತು ಸಂತ್ರಸ್ತೆಯರಿಗೆ ನಿಯಮಾನುಸಾರ ತಕ್ಷಣ ಸ್ಪಂದಿಸಿ, ಆಶ್ರಯ ನೆರವು ನೀಡಲಾಗುತ್ತದೆ. ಬಾಲ ಗರ್ಭಿಣಿಯವರಿಗೆ ಪ್ರತ್ಯೇಕವಾದ ವಸತಿ ನಿಲಯದ ಅಗತ್ಯವಿದೆ. ಮಿಷನ್ ವಾತ್ಸಲ್ಯ ಯೋಜನೆಯಡಿ ಸಮರ್ಪಕವಾಗಿ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.