ಪೋಷಕರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು: ಎಚ್‌. ಮಲ್ಲಿಕಾರ್ಜುನ

KannadaprabhaNewsNetwork |  
Published : Nov 20, 2024, 12:35 AM IST
ಹರಪನಹಳ್ಳಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು.. | Kannada Prabha

ಸಾರಾಂಶ

ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಬಾರದು. ಮಕ್ಕಳು ತಪ್ಪು ಮಾಡಿದಾಗ ನಯವಾಗಿ ತಿದ್ದಿ, ಬುದ್ಧಿ ಹೇಳಬೇಕು ಎಂದು ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಹೇಳಿದರು.

ಹರಪನಹಳ್ಳಿ: ತಂದೆ-ತಾಯಿ ಮತ್ತು ಗುರುಗಳು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದು ಇಲ್ಲಿಯ ಎಸ್.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಪಟ್ಟಣದ ಬಸಮ್ಮ ಕಲಾಮಂದಿರದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಬಸಮ್ಮ ಕಲಾಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳಬಾರದು. ತಪ್ಪು ಮಾಡಿದಾಗ ನಯವಾಗಿ ತಿದ್ದಿ, ಬುದ್ಧಿ ಹೇಳಬೇಕು ಎಂದ ಅವರು, ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷೆ ಕೊಡಬಾರದು. ಸರಿಯಾಗಿ ಮಾರ್ಗದರ್ಶನ ಮಾಡಿ ದಾರಿ ತೋರಿಸಬೇಕು. ಎಲ್ಲ ಮಕ್ಕಳನ್ನು ಸಮಾನತೆಯಿಂದ ಕಾಣಬೇಕು. ಯಾವುದೇ ರೀತಿ ಭೇದ-ಭಾವ ಮಾಡಬಾರದು. ಪೋಷಕರು ಮಕ್ಕಳ ಮುಂದೆ ಅಸಭ್ಯವಾಗಿ ನಡೆದುಕೊಳ್ಳಬಾರದು ಮತ್ತು ಅವರ ಮೇಲೆ ನಂಬಿಕೆ ಇಡಬೇಕು. ಸರಿಯಾಗಿ ಅರ್ಥಮಾಡಿಕೊಂಡು ಪ್ರೀತಿಯಿಂದ ಕಾಣಬೇಕು. ಯಾವುದೇ ರೀತಿ ಒತ್ತಡ ಹಾಕಬಾರದು. ಮಕ್ಕಳ ಮೇಲೆ ಗಮನವಿರಬೇಕು, ಆದರೆ ಅನುಮಾನಪಡಬಾರದು. ಮಕ್ಕಳಿಗೆ ಸಂಸ್ಕಾರ ಕಲಿಸುವ ಮೊದಲು ಹಿರಿಯರು ಸಂಸ್ಕಾರದಿಂದ ನಡೆದುಕೊಂಡರೆ ಮಕ್ಕಳು ತಾವೇ ಸರಿದಾರಿಯಲ್ಲಿ ನಡೆಯುವರು ಎಂದರು.

ಸಂಸ್ಥೆಯ ಅಧ್ಯಕ್ಷೆ ಸ್ವಪ್ನಾ ಮಲ್ಲಿಕಾರ್ಜುನ ಮಾತನಾಡಿ, ಮಕ್ಕಳು ಉದ್ಯಾನದ ವಿವಿಧ ಬಗೆಯ ಹೂಗಳು ಇದ್ದಹಾಗೆ. ಹೂಗಳು ವಿವಿಧ ಬಣ್ಣ, ಆಕಾರ, ಸುಗಂಧ ಬೀರುತ್ತವೆಯೋ ಹಾಗೆಯೇ ಮಕ್ಕಳು ಸಹ ವಿವಿಧ ಬಗೆಯ ಕೌಶಲ್ಯ ಹೊಂದಿರುತ್ತಾರೆ. ಅವರನ್ನು ಒಬ್ಬರೊಂದಿಗೆ ಇನ್ನೊಬ್ಬರನ್ನು ಎಂದಿಗೂ ಹೋಲಿಕೆ ಮಾಡಬಾರದು. ಶಿಕ್ಷಕರು ಹಾಗೂ ಪೋಷಕರು ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿ ಮಕ್ಕಳ ಮನಸ್ಸಿಗೆ ನೋವನ್ನುಂಟು ಮಾಡಬಾರದು. ಇದರಿಂದ ಮಕ್ಕಳು ಕೀಳರಿಮೆಗೆ ಜಾರಿ, ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುತ್ತಾರೆ. ಆದ್ದರಿಂದ ಎಲ್ಲರೂ ಮಕ್ಕಳಿಗೆ ಪ್ರೇರಕ ನುಡಿಗಳನ್ನಾಡಿ ಅವರನ್ನು ಉತ್ಸಾಹಭರಿತರನ್ನಾಗಿ ಮಾಡಬೇಕು ಎಂದರು.

ವಿವಿಧ ಶಾಲಾ ವಿದ್ಯಾರ್ಥಿಗಳು ವೇಷಭೂಷಣ, ಚಿತ್ರಕಲೆ, ಸಂಗೀತ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಎಸ್.ಎಂ. ಮಲ್ಲಯ್ಯ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಶಾಲಾ ಶಿಕ್ಷಕರಾದ ಸುನೀತ, ವೈ. ಯಾಸೀನ್, ದಿವ್ಯಾ, ದೀಪಾ ಬಿ.ಆರ್. ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!