ಧಾರವಾಡ:
ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮಹಾದಾಸೋಹಿ ಶ್ರೀಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನದ ಸಂದರ್ಭದಲ್ಲಿ ವಿಶೇಷ ಆಧ್ಯಾತ್ಮಿಕ ಉಪನ್ಯಾಸ ನೀಡಿದರು.
ಪೂರ್ವಜರು ತಂದೆ-ತಾಯಿ ಮತ್ತು ಶ್ರೀಗುರುವಿನ ಮಹತ್ವ ಅರಿತುಕೊಂಡು ಅವರಿಗೆ ದೇವರ ಸ್ಥಾನ ನೀಡಿದ್ದಾರೆ. ಅದಕ್ಕೆಂದೇ ‘ಮಾತೃ ದೇವೋಭವ’, ‘ಪಿತೃ ದೇವೋಭವ’ ಹಾಗೂ ‘ಆಚಾರ್ಯ ದೇವೋಭವ’ ಎಂದು ಕರೆದಿದ್ದನ್ನು ಮರೆಯುವಂತಿಲ್ಲ. ತಾಯಿಯ ಕಾರುಣ್ಯ, ವಾತ್ಸಲ್ಯ, ಅನುರಾಗಕ್ಕೆ ಎಂದೂ ಬೆಲೆಕಟ್ಟಲಾಗದು. ಅವಳ ಕೈತುತ್ತು, ಕಲಿಸುವ ಮೊದಲ ಆಟ-ಪಾಠಗಳು ನಮ್ಮ ಸಾಧನೆಗೆ ಮೆಟ್ಟಿಲುಗಳಾಗುತ್ತವೆ. ತ್ಯಾಗಮಯಿ ತಂದೆ ತನ್ನ ಬಯಕೆಗಳನ್ನು ಬದಿಗಿಟ್ಟು ಒಡಲ ಕುಡಿಗಳಿಗೆ ಮಾಡುವ ಸಮರ್ಪಣೆ ವಿಶಿಷ್ಟವಾದದ್ದು. ಇಂದು ಹಡೆದ ಮಕ್ಕಳೇ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಿರುವುದು ಬಹಳ ನೋವಿನ ಸಂಗತಿ ಎಂದರು.ವೀರಶೈವ ಸಿದ್ಧಾಂತದಲ್ಲಿ ಇಷ್ಟಲಿಂಗವನ್ನು ಕರುಣಿಸಿ ಶಿವಸಾನ್ನಿಧ್ಯದ ಅನುಸಂಧಾನಕ್ಕೆ ಮಂತ್ರದೀಕ್ಷೆ ನೀಡಿ ಇಹದ ಜೀವನ ವಿಧಾನದ ಹೆಜ್ಜೆಗಳಿಗೆ ಬೆಳಕು ತುಂಬುವ ಕೆಲಸ ಮಾಡುವ ಶ್ರೀಗುರು ಜೀವಂತ ದೇವರಾಗಿದ್ದಾರೆ. ಈ ಗುರುಸಾನ್ನಿಧ್ಯದಲ್ಲಿ ಹೊಂದುವ ಭಕ್ತಿಯ ಬದ್ಧತೆಯು ಮುಕ್ತಿಯ ಮಹಾಬೆಳಗನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಶ್ರೀಗಳು ನುಡಿದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಿರೂಪಾಕ್ಷಪ್ಪ ನವಲಗುಂದ, ಬಸಪ್ಪ ಯಡಳ್ಳಿ, ಮಲ್ಲಪ್ಪ ಕುಸೂಗಲ್ಲ, ಬಸವಣ್ಣೆಪ್ಪ ಪೂಜಾರ ಇದ್ದರು.