ಬೆಂಗಳೂರು : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅವಶ್ಯಕತೆ ಇದ್ದಲ್ಲಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಂಬಂಧ ಬಿಜೆಪಿ ದೆಹಲಿ ನಾಯಕರೇ ತೀರ್ಮಾನಿಸುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಬಿಜೆಪಿ ಜೊತೆಗೆ ಚರ್ಚೆ ಮಾಡಿಲ್ಲ

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನು ರಾಜ್ಯ ಸಭೆಗೆ ಆಯ್ಕೆ ಮಾಡುವ ಸಂಬಂಧ ನಾವು ಈವರೆಗೂ ಬಿಜೆಪಿ ಜೊತೆಗೆ ಚರ್ಚೆ ಮಾಡಿಲ್ಲ. ದೇವೇಗೌಡರು ಸಹ ಯಾರೊಂದಿಗೂ ಚರ್ಚಿಸಿಲ್ಲ. ಕೇವಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೋಡುತ್ತಿದ್ದೇವೆ ಎಂದರು.

ಬಿಜೆಪಿಯಲ್ಲಿ 63 ಶಾಸಕರು ಇದ್ದಾರೆ

ಬಿಜೆಪಿಯಲ್ಲಿ 63 ಶಾಸಕರು ಇದ್ದಾರೆ. ಅವರ ಪಕ್ಷದಲ್ಲಿಯೂ ಹಲವು ಸಮಸ್ಯೆಗಳು ಇರುತ್ತವೆ. ಹೀಗಿರುವಾಗ ನಾವು ಹೇಗೆ ಚರ್ಚಿಸುವುದು? ದೇವೇಗೌಡರು ಸಹ ಹೇಗೆ ಚರ್ಚಿಸುತ್ತಾರೆ? ಅವಶ್ಯಕತೆ ಇದ್ದರೆ ದೆಹಲಿ ನಾಯಕರು ತೀರ್ಮಾನ ಮಾಡುತ್ತಾರೆ. ಬಿಜೆಪಿ ಅವರ ಅವಕಾಶ ತಪ್ಪಿಸಿ ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ನಾವು ಒತ್ತಾಯ ಮಾಡಲು ಸಾಧ್ಯವಿಲ್ಲ. ಅದು ಅವರ ಪಕ್ಷದ ತೀರ್ಮಾನ ಎಂದು ಹೇಳಿದರು.