7 ಪಕ್ಷಾಂತರಿಗಳ ಸದಸ್ಯತ್ವ ರದ್ದು:ರಾಜ್ಯಸಭೆ ಸ್ಪೀಕರ್‌ಗೆ ಆಪ್ ಮನವಿ
- ಪಕ್ಷಾಂತರ ವಿರೋಧಿ ಕಾನೂನು ಉಲ್ಲಂಘನೆ ಆರೋಪ
- ಅಗತ್ಯ ಬಿದ್ದರೆ ಕೋರ್ಟ್‌ಗೆ ಹೋಗ್ತೇವೆ: ಆಪ್ ನಾಯಕಪಿಟಿಐ ನವದೆಹಲಿ
ಇತ್ತೀಚೆಗೆ ಪಕ್ಷವನ್ನು ತೊರೆದು ಬಿಜೆಪಿ ಜತೆ ಕೈಜೋಡಿಸಿರುವ 7 ರಾಜ್ಯಸಭಾ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಆಪ್ ಪರವಾಗಿ ಹಿರಿಯ ಸಂಸದ ಸಂಜಯ್ ಸಿಂಗ್ ಭಾನುವಾರ ರಾಜ್ಯಸಭೆಯ ಸಭಾಪತಿ ಸಿ. ಪಿ. ರಾಧಾಕೃಷ್ಣನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ಏ.24ರಂದು ರಾಘವ್ ಚಡ್ಢಾ, ಹರ್ಭಜನ್ ಸಿಂಗ್ ಸೇರಿ 7 ಸಂಸದರು ಆಪ್ ತೊರೆದಿದ್ದರು. ‘ಸಂವಿಧಾನದ ಪ್ರಕಾರ ಒಂದು ಪಕ್ಷದ 2/3ರಷ್ಟು ಸಂಸದರು ಬೇರೆ ಪಕ್ಷದ ಜತೆ ವಿಲೀನವಾಗಬಹುದು’ ಎಂದು ಚಡ್ಢಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಇದಕ್ಕೆ ವ್ಯತಿರಿಕ್ತ ವಾದ ಮಂಡಿಸುತ್ತಿರುವ ಆಪ್, ‘2/3ರಷ್ಟು ಪಕ್ಷಾಂತರವು ಲೋಕಸಭೆ ಮತ್ತು ರಾಜ್ಯಸಭೆಗೆ ಅನ್ವಯಿಸುವುದಿಲ್ಲ. ಹಾಗಾಗಿ ಸಂಸದರ ನಡೆಗೆ ಕಾನೂನು ಮಾನ್ಯತೆ ಇಲ್ಲ’ ಎಂದು ಆರೋಪಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಪ್ ಸಂಸದ ಸಂಜಯ್ ಸಿಂಗ್, ‘ಪಕ್ಷ ತೊರೆದ 7 ಸಂಸದರ ನಡೆ ಪಕ್ಷಾಂತರ ವಿರೋಧಿ ಕಾನೂನಿಗೆ ವಿರುದ್ಧವಾಗಿದೆ. ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಹಲವು ಸುಪ್ರೀಂ ಕೋರ್ಟ್ ತೀರ್ಪುಗಳು, ಅಂತಹ ಪಕ್ಷಾಂತರಗಳು ಅನರ್ಹತೆಗೆ ಹೇಗೆ ಕಾರಣವಾಗಬಹುದು ಎಂಬುದನ್ನು ಸ್ಪಷ್ಟಪಡಿಸಿವೆ. ಅಗತ್ಯವಿದ್ದರೆ ನಾವು ಈ ಪ್ರಕರಣವನ್ನು ಕೋರ್ಟ್‌ಗೆ ಕೊಂಡೊಯ್ಯುತ್ತೇವೆ’ ಎಂದರು.‘ಈ ಸಂಸದರು ಆಪ್‌ನಿಂದ ಆಯ್ಕೆಯಾದವರು. ಆದರೆ ನಂತರ ಪಕ್ಷವನ್ನು ತೊರೆದು, ಬಿಜೆಪಿ ಸೇರಲು ಮುಂದಾಗಿದ್ದಾರೆ. ಇದು ಪಂಜಾಬ್ ಜನರಿಗೆ ಮತ್ತು ಭಾರತದ ಸಂವಿಧಾನಕ್ಕೆ ಮಾಡಿದ ದ್ರೋಹ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ‘ಪಂಜಾಬ್‌ನ ಇನ್ನಷ್ಟು ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ’ ಎಂಬ ವದಂತಿಯನ್ನು ತಳ್ಳಿಹಾಕಿದರು.==
ಹರ್ಭಜನ್‌ಗೆ ಪಂಜಾಬ್ ಭದ್ರತೆ ವಾಪಸ್, ಈಗ ಕೇಂದ್ರದ ಭದ್ರತೆಚಂಡೀಗಢ: ರಾಘವ್ ಚಡ್ಢಾ ಜತೆ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ 7 ಸಂಸದರ ಪೈಕಿ ಒಬ್ಬರಾಗಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್‌ಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿದೆ. ಇದರ ಬೆನ್ನಲ್ಲೇ ಅವರಿಗೆ ಕೇಂದ್ರ ಸರ್ಕಾರ ಸಿಆರ್‌ಪಿಎಫ್ ಭದ್ರತೆ ನೀಡಿದೆ.ಜಲಂಧರ್‌ನ ಛೋಟ್ಟಿ ಬರಾದರಿ ಪ್ರದೇಶದಲ್ಲಿರುವ ಹರ್ಭಜನ್ ಸಿಂಗ್ ನಿವಾಸಕ್ಕೆ 9-10 ಪಂಜಾಬ್ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಶನಿವಾರ ಆಪ್ ಕಾರ್ಯಕರ್ತರು ಹರ್ಭಜನ್ ಮನೆ ಬಳಿ ಪ್ರತಿಭಟನೆ ನಡೆಸಿದ್ದರು. ಅದರ ನಡುವೆಯೇ ಪೊಲೀಸ್ ಭದ್ರತೆ ಹಿಂತೆಗೆದುಕೊಳ್ಳಲಾಗಿದೆ. ಬಳಿಕ ಭಾನುವಾರ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.