ನವದೆಹಲಿ: ‘ನಾನಿನ್ನೂ ಸೋತಿಲ್ಲ, ಘಾಸಿಗೊಂಡಿರುವುದರಿಂದ ಘಾತಕವಾಗಿದ್ದೇನೆ’ ಎಂದು ಹೇಳಿ ತಮ್ಮ ಆಮ್‌ ಆದ್ಮಿ ಪಕ್ಷಕ್ಕೆ ತಿರುಗೇಟು ನೀಡಿದ್ದ ರಾಜ್ಯಸಭಾ ಸಂಸದ ರಾಘವ್‌ ಚಡ್ಢಾ, ಇದೀಗ ‘ಪಿಚ್ಚರ್‌ ಇನ್ನೂ ಬಾಕಿ ಇದೆ’ ಎಂಬ ಬರಹದೊಂದಿಗೆ ತಾವು ಪಂಜಾಬ್‌ಗಾಗಿ ದನಿ ಎತ್ತಿದ ಸನ್ನಿವೇಶಗಳ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹೊರತಾಗಿಯೂ ಆ ರಾಜ್ಯದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಾತನಾಡಿರಲಿಲ್ಲ ಎಂದು ಆಪ್‌ ಆರೋಪಿಸಿತ್ತು.

ಇದಕ್ಕೆ ಉತ್ತರವಾಗಿ ಅವರು, ಕ್ಷೀಣಿಸುತ್ತಿರುವ ಅಂತರ್ಜಲ, ಭಗತ್‌ ಸಿಂಗ್‌ ಸೇರಿದಂತೆ ಪಂಜಾಬ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದ ತುಣುಕುಗಳನ್ನು ಸೇರಿಸಿ ವಿಡಿಯೋವೊಂದನ್ನುಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ‘ನಾನು ಪಂಜಾಬ್‌ಗಾಗಿ ಕೆಲಸ ಮಾಡಿಲ್ಲ ಎಂದು ಹೇಳುವ ಮೂಲಕ ಈ ವಿಡಿಯೋ ಹಂಚಿಕೊಳ್ಳುವಂತೆ ಮಾಡಿದ ಎಲ್ಲಾ ಆಪ್‌ ಸಹೋದ್ಯೋಗಿಗಳಿಗಾಗಿ ಸಣ್ಣ ಟ್ರೈಲರ್‌ ಇಲ್ಲಿದೆ. ಪೂರ್ತಿ ಪಿಚ್ಚರ್‌ ಇನ್ನೂ ಬಾಕಿ ಇದೆ’ ಎಂದು ಬರೆದಿದ್ದಾರೆ. ಈ ಮೂಲಕ, ನಿಮ್ಮೆಲ್ಲಾ ಆರೋಪಗಳಿಗೆ ನನ್ನಲ್ಲಿ ಸಾಕ್ಷಿಸಮೇತ ಸ್ಪಷ್ಟನೆಗಳಿವೆ ಎಂದಿದ್ದಾರೆ.

==

2 ಕ್ರಿಮಿನಲ್‌ ಕೇಸ್‌ ಬಾಕಿ: ಅಫಿಡವಿಟ್ಟಲ್ಲಿ ವಿಜಯ್‌ ಮಾಹಿತಿ

ಚೆನ್ನೈ: ಈ ಮೊದಲು ಸಲ್ಲಿಕೆ ಮಾಡಿದ್ದ ಅಫಿಡವಿಟ್‌ನಲ್ಲಿ, ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣಗಳು ಬಾಕಿ ಇಲ್ಲ ಎಂದು ಘೋಷಿಸಿಕೊಂಡಿದ್ದ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ ಇದೀಗ ಹೊಸ ಅಫಿಡವಿಟ್‌ ಸಲ್ಲಿಕೆ ಮಾಡಿದ್ದು, ಅದರಲ್ಲಿ 2 ಕ್ರಿಮಿನಲ್‌ ಕೇಸ್‌ಗಳು ಬಾಕಿ ಇರುವುದಾಗಿ ಬಹಿರಂಗಪಡಿಸಿದ್ದಾರೆ.ಏ.23ರಂದು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಉಲ್ಲೇಖಿಸದೇ ಬಿಟ್ಟಿದ್ದ ಚೆನ್ನೈ ಮತ್ತು ಮದುರೈನಲ್ಲಿ ದಾಖಲಾದ ಪ್ರಕರಣಗಳನ್ನು ಏ.4ರಂದು ಸಲ್ಲಿಕೆ ಮಾಡಿದ್ದರಲ್ಲಿ ಉಲ್ಲೇಖಿಸಲಾಗಿದೆ. ಮೊದಲ ಪ್ರಕರಣವು ಸಾಮಾಜಿಕ ಶಾಂತಿ ಕದಡಿದ್ದಾದರೆ, ಎರಡನೆಯದು ವಿಜಯ್‌ ಬಳಿ ಬರುತ್ತಿದ್ದವರನ್ನು ಅವರ ಬೌನ್ಸರ್‌ಗಳು ದೂಡಿದ್ದರ ಪರಿಣಾಮ ಗಾಯಗೊಂಡದ್ದಾಗಿದೆ.ಕರೂರು ಕಾಲ್ತುಳಿತಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ವಿಜಯ್‌ರನ್ನು ಆರೋಪಿಯಾಗಿ ಪರಿಗಣಿಸಿಲ್ಲವಾದ ಕಾರಣ ಅಫಿಡವಿಟ್‌ನಲ್ಲಿ ಅದರ ಉಲ್ಲೇಖ ಇಲ್ಲ.


==

ಚುನಾವಣಾ ರಾಜ್ಯಗಳಲ್ಲಿ ₹650 ಕೋಟಿ ನಗದು, ವಸ್ತು ವಶ

ನವದೆಹಲಿ: ಚುನಾವಣೆಗೆ ಸಜ್ಜಾಗಿರುವ 4 ರಾಜ್ಯಗಳು ಮತ್ತು ಪುದುಚೇರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 650 ಕೋಟಿ ರು. ಮೌಲ್ಯದ ನಗದು, ಮಾದಕವಸ್ತು ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.ಅಂಕಿಅಂಶಗಳ ಪ್ರಕಾರ 319 ಕೋಟಿ ರು. ಮೌಲ್ಯದ ಈ ವಸ್ತುಗಳು ಪಶ್ಚಿಮ ಬಂಗಾಳವೊಂದರಲ್ಲೇ ವಶವಾಗಿವೆ. ಉಳಿದಂತೆ ತಮಿಳುನಾಡಿನಲ್ಲಿ 170 ಕೋಟಿ ರು., ಅಸ್ಸಾಂನಲ್ಲಿ 97 ಕೋಟಿ ರು., ಕೇರಳದಲ್ಲಿ 58 ಕೋಟಿ ರು., ಪುದುಚೇರಿಯಲ್ಲಿ 7 ಕೋಟಿ ರು. ಮೌಲ್ಯದ ನಗದು/ವಸ್ತುಗಳು ಸಿಕ್ಕಿವೆ.ತಯಾರಿ ಹೇಗಿದೆ?:ಚುನಾವಣೆ ಸಯಮಯದಲ್ಲಿ ಅಕ್ರಮವಾಗಿ ಇಂತಹ ಸಾಗಾಟಗಳು ಸಾಮಾನ್ಯವಾದ ಕಾರಣ ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ 100 ನಿಮಿಷಗಳ ಒಳಗಾಗಿ ಸ್ಥಳವನ್ನು ತಲುಪುವ ಸಲುವಾಗಿ 5,173 ಫ್ಲೈಯಿಂಗ್‌ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸರು, ಫೋಟೋಗ್ರಾಫರ್‌ಗಳು ಇರುತ್ತಾರೆ.ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಏ.9ಕ್ಕೆ, ತಮಿಳುನಾಡಲ್ಲಿ 23ಕ್ಕೆ, ಪಶ್ಚಿಮ ಬಂಗಾಳ 23 ಮತ್ತು 29ಕ್ಕೆ ಚುನಾವಣೆ ನಡೆಯಲಿದೆ.

==

ಅಸ್ಸಾಂ ಸಿಎಂ ಪತ್ನಿ ಬಳಿ 3 ಪಾಸ್ಪೋರ್ಟ್‌: ಕಾಂಗ್ರೆಸ್‌ ಆರೋಪ

ನವದೆಹಲಿ: ‘ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್‌ ಶರ್ಮಾ ಬಳಿ 3 ದೇಶಗಳ ಪಾಸ್‌ಪೋರ್ಟ್‌ ಇವೆ. ಜತೆಗೆ ಅವರು ದುಬೈನಲ್ಲಿ ಆಸ್ತಿ ಹೊಂದಿದ್ದಾರೆ. ಆದರೆ ಈ ಬಗ್ಗೆ ಅವರು ಬಹಿರಂಗಪಡಿಸಿಲ್ಲ’ ಎಂದು ಕಾಂಗ್ರೆಸ್‌ ಆರೋಪಿಸಿದೆ.ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಿನಿಕಿ ಬಳಿ ಯುಎಇ, ಈಜಿಪ್ಟ್‌, ಆಂಟಿಗುವಾ ಮತ್ತು ಬಾರ್ಬುಡಾದ ಪಾಸ್‌ಪೋರ್ಟ್‌ಗಳಿವೆ. ಜತೆಗೆ ದುಬೈನಲ್ಲಿ ಅವರು 2 ಆಸ್ತಿ ಹೊಂದಿದ್ದಾರೆ. ಇದರ ಉಲ್ಲೇಖ ಬಿಸ್ವಾರ ಅಫಿಡವಿಟ್‌ನಲ್ಲಿ ಇಲ್ಲ’ ಎಂದು ಆರೋಪಿಸಿದರು.ಇದು ಸುಳ್ಳು:

ಖೇರಾ ಮಾಡಿದ ಆರೋಪಗಳು ಸುಳ್ಳು ಎಂದಿರುವ ಬಿಸ್ವಾ, ‘ಅವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಾನು ಮತ್ತು ನನ್ನ ಪತ್ನಿ ಅವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸುತ್ತೇವೆ’ ಎಂದಿದ್ದಾರೆ.ಚುನಾವಣಾ ಸಮಯದಲ್ಲೇ ನಡೆಯುತ್ತಿರುವ ಈ ವಾಗ್ವಾದ ಮಹತ್ವ ಪಡೆದುಕೊಂಡಿದೆ.