ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮೇಲೆ ಮುನಿಸು, ಬೇರೆ ಶಾಲೆ ಹೊರಟ ವಿದ್ಯಾರ್ಥಿಗಳು

KannadaprabhaNewsNetwork |  
Published : Jun 06, 2026, 02:15 AM IST
ಮುಂಡಗೋಡ ತಾಲೂಕಿನ ಶಾನವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ | Kannada Prabha

ಸಾರಾಂಶ

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮೇಲಿನ ಮುನಿಸಿನಿಂದ ಮಕ್ಕಳನ್ನು ಸ್ಥಳೀಯ ಶಾಲೆಯಿಂದ ತೆಗೆದು ಬೇರೆ ಬೇರೆ ಕಡೆಗಳ ಶಾಲೆಗಳಿಗೆ ದಾಖಲು ಮಾಡಲಾಗಿರುವ ಘಟನೆ ಮುಂಡಗೋಡ ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ಶಾನವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಮುಂಡಗೋಡ: ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮೇಲಿನ ಮುನಿಸಿನಿಂದ ಮಕ್ಕಳನ್ನು ಸ್ಥಳೀಯ ಶಾಲೆಯಿಂದ ತೆಗೆದು ಬೇರೆ ಬೇರೆ ಕಡೆಗಳ ಶಾಲೆಗಳಿಗೆ ದಾಖಲು ಮಾಡಲಾಗಿರುವ ಘಟನೆ ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯ ಶಾನವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಈ ಶಾಲೆಯಲ್ಲಿ ಕಳೆದ ವರ್ಷ ೩೧ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಕೇವಲ ೨೧ ವಿದ್ಯಾರ್ಥಿಗಳು ಉಳಿದಿದ್ದು, ಇನ್ನುಳಿದವರೆಲ್ಲ ವೈಯಕ್ತಿಕ ದ್ವೇಷದಿಂದ ಮಕ್ಕಳ ವರ್ಗಾವಣೆ ಪತ್ರ ಪಡೆದು ಬೇರೆ ಬೇರೆ ಶಾಲೆಗೆ ದಾಖಲಿಸಿದ್ದಾರೆ.

ಹೈಡ್ರಾಮಾ: ೬ ತಿಂಗಳ ಹಿಂದೆ ಅಧ್ಯಕ್ಷರ ಸರ್ವಾಧಿಕಾರ ಧೋರಣೆ ಖಂಡಿಸಿ ಕೆಲವು ಪಾಲಕರು, ಅಧ್ಯಕ್ಷರನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಅವರು ಶಾಲೆಗೆ ದೌಡಾಯಿಸಿ ಶಾಲಾಭಿವೃದ್ಧಿ ಹಾಗೂ ಪಾಲಕರ ಸಭೆಯಲ್ಲಿ ಚರ್ಚೆ ನಡೆಸಿದ್ದರು. ಅಧ್ಯಕ್ಷ ನಾಗರಾಜ ಮರಾಠಿ ಅವರ ಬದಲಾಯಿಸಿ ಮುಂದಿನ ೬ ತಿಂಗಳ ಅವಧಿಗಾಗಿ ಸಮಿತಿಯಲ್ಲಿದ್ದ ಬೇರೆಯೊಬ್ಬರನ್ನು ನೇಮಿಸಲಾಗಿತ್ತು. ಆ ಬಳಿಕ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪಿದ್ದರು. ಇದಾದ ಎರಡೇ ದಿನಗಳಲ್ಲಿ ರಾಜಕೀಯ ಒತ್ತಡ ತಂದ ಅಧ್ಯಕ್ಷ ನಾಗರಾಜ ಮರಾಠಿ, ಮತ್ತೆ ತಾವೇ ಅಧ್ಯಕ್ಷರಾಗಿ ಮುಂದುವರಿದರು. ಕೆಲವು ದಿನಗಳ ಆನಂತರ ಶಾಲೆಯ ಶೌಚಾಲಯ ಉದ್ಘಾಟನೆ ವಿಚಾರದಲ್ಲಿ ಕೂಡ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತೋರಿದ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತವಾಗಿತ್ತು. ಪಾಲಕರು ಹಾಗೂ ಅಧ್ಯಕ್ಷರ ನಡುವೆ ಜಟಾಪಟಿ ಉಂಟಾಗಿತ್ತು. ಪ್ರಸಕ್ತ ವರ್ಷದ ಶಾಲಾರಂಭವಾಗಿದ್ದು, ಈಗ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸಲು ನಿರ್ಧರಿಸಿದ್ದಾರೆ.

ಇಲಾಖೆ ಲೋಪದೋಷವಿಲ್ಲ: ವೈಯಕ್ತಿಕ ದ್ವೇಷದಿಂದ ಕೆಲವು ಪಾಲಕರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಕಾರಣ ನೀಡಿ ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ (ಟಿಸಿ) ತೆಗೆದುಕೊಂಡು ಹೋಗುತ್ತಿದ್ದಾರೆ. ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರ ಮನವೊಲಿಸಿದರೂ ಪ್ರಯೋಜನವಾಗುತ್ತಿಲ್ಲ. ಶಾಲಾಭಿವೃದ್ಧಿ ಸಮಿತಿಯಲ್ಲಿಯೇ ೨ ಪಂಗಡವಾಗಿರುವುದು ಇದಕ್ಕೆ ಕಾರಣವಾಗಿದೆ. ಇದರಲ್ಲಿ ಶಿಕ್ಷಣ ಇಲಾಖೆಯ ಯಾವುದೇ ಲೋಪದೋಷವಿಲ್ಲ ಎಂದು ಮುಖ್ಯ ಶಿಕ್ಷಕ ಪರಮೇಶ್ವರ ಹೇಳಿದರು.

ಮುಚ್ಚುವ ಸ್ಥಿತಿ ಬರಬಹುದು: ಶಾಲಾ ಪ್ರಾರಂಭೋತ್ಸವ ಪೂರ್ವದಲ್ಲಿಯೇ ಪಾಲಕರೆಲ್ಲ ಸೇರಿ ಅಧ್ಯಕ್ಷರನ್ನು ಬದಲಾಯಿಸಿ ಬೇರೆಯವರನ್ನು ನೇಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ಯಾವುದೇ ರೀತಿ ಸ್ಪಂದನೆ ನೀಡದೆ ಇರುವುದರಿಂದ ಮನನೊಂದು ನಾವು ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲು ಮಾಡುತ್ತಿದ್ದೇವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ರಾಜಕೀಯ ಪ್ರಭಾವಕ್ಕೊಳಗಾಗಿ ಅಸಹಾಯಕರಾಗಿದ್ದಾರೆ. ಇದೇ ರೀತಿ ನಡೆದುಕೊಂಡರೆ ಶಾಲೆ ಮುಚ್ಚುವ ಪ್ರಸಂಗ ಬರಬಹುದು ಎಂದು ಪಾಲಕರು ನಾಗರಾಜ ಭಟ್ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮೀರ್‌ ಅಹ್ಮದ್ ಖಾನ್‌ ಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆ
ಕುಷ್ಟಗಿ ಹಸಿರು ನಗರವನ್ನಾಗಿ ಮಾಡಲು ಪಣ ತೊಡಿ